ADVERTISEMENT

ನೀರಾವರಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದ ಸಿಎಂ: ಓಲೇಕಾರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 12:43 IST
Last Updated 13 ಏಪ್ರಿಲ್ 2023, 12:43 IST
ಶಾಸಕ ನೆಹರು ಓಲೇಕಾರ ಅವರಿಗೆ ಬಿಜೆಪಿ ಟಿಕೆಟ್‌ ಸಿಗದ ಕಾರಣ ಅವರ ಬೆಂಬಲಿಗರು ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಹರಿದು ಹಾಕಿ, ಚಪ್ಪಲಿಯಿಂದ ಹೊಡೆದ ದೃಶ್ಯ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಶಾಸಕ ನೆಹರು ಓಲೇಕಾರ ಅವರಿಗೆ ಬಿಜೆಪಿ ಟಿಕೆಟ್‌ ಸಿಗದ ಕಾರಣ ಅವರ ಬೆಂಬಲಿಗರು ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಹರಿದು ಹಾಕಿ, ಚಪ್ಪಲಿಯಿಂದ ಹೊಡೆದ ದೃಶ್ಯ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ‘ಶಿಗ್ಗಾವಿ ತುಂತುರು ನೀರಾವರಿ ಯೋಜನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹1,500 ಕೋಟಿ ಕೊಳ್ಳೆ ಹೊಡೆದಿದ್ದಾರೆ’ ಎಂದು ಶಾಸಕ ನೆಹರು ಓಲೇಕಾರ ಗಂಭೀರ ಆರೋಪ ಮಾಡಿದರು.

ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ ನೆಹರು ಓಲೇಕಾರ ಮಾಧ್ಯಮದವರೊಂದಿಗೆ ಮಾತನಾಡಿ, ರೈತರಿಗೆ ಒಂದು ಪೈಪ್ ಕೂಡ ನೀಡಿಲ್ಲ. ತುಂತುರು ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಇತರ ಜಿಲ್ಲೆಯ ರೈತರಿಗೆ ಯೋಜನೆಯಿಂದ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ದೂರಿದರು.

‘ನನ್ನ ಬೆಳವಣಿಗೆಯನ್ನು ಸಹಿಸದೇ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಬೊಮ್ಮಾಯಿ ಅವರಿಗೆ ಧಮ್, ತಾಕತ್ತು ಎಷ್ಟಿದೆ ಎಂಬುದನ್ನು ತೋರಿಸಲಿ. ನಾವು ಕೂಡ ನಮ್ಮ ತಾಕತ್ತು ತೋರಿಸುತ್ತೇವೆ’ ಎಂದು ಸವಾಲು ಹಾಕಿದರು.

ADVERTISEMENT

ಸಿಎಂ ಬೊಮ್ಮಾಯಿ 40% ಕಮಿಷನ್ ಏಜೆಂಟ್. ಬೊಮ್ಮಾಯಿಂದ ಬಿಜೆಪಿಗೆ ದೊಡ್ಡ ಹೊಡೆತ. ತನಗೆ ಅನುಕೂಲ ಆಗುವವರಿಗೆ ಟಿಕೆಟ್‌ ಕೊಡಿಸಿದ್ದಾನೆ. ಬೊಮ್ಮಾಯಿ ಬಿಜೆಪಿ ಹಾಳು ಮಾಡುತ್ತಾನೆ. ಉದ್ದಾರ ಮಾಡಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರವೇ ಬಿಜೆಪಿ ಸರ್ಕಾರದ ಸಾಧನೆ. ಹೈಕಮಾಂಡ್ ಕೂಡಲೇ ಆಲೋಚನೆ ಮಾಡಬೇಕು. ಇಂಥ ಭ್ರಷ್ಟರನ್ನು ಕಡೆಗಣಿಸಬೇಕು. ಭ್ರಷ್ಟಾಚಾರ ಮಾಡಿದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಸಿಎಂ ಭಾವಚಿತ್ರಕ್ಕೆ ಚಪ್ಪಲಿ ಏಟು: ನೆಹರು ಓಲೇಕಾರ ಅವರಿಗೆ ಟಿಕೆಟ್ ತಪ್ಪಿಸಿರುವುದನ್ನು ಖಂಡಿಸಿ, ಅವರ ನೂರಾರು ಬೆಂಬಲಿಗರು ನಗರದ ಹೊಸಮನಿ ಸಿದ್ದಪ್ಪ ಸರ್ಕಲ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರ ಭಾವಚಿತ್ರ ಹರಿದು ಹಾಕಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ: ಓಲೇಕಾರ್‌
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಸುಮಾರು 1000 ಬೆಂಬಲಿಗರು ಕಾರ್ಯಕರ್ತರು ನನ್ನ ಜೊತೆ ರಾಜೀನಾಮೆ ನೀಡುತ್ತಾರೆ. ಜೆಡಿಎಸ್‌ನಿಂದ ಆಹ್ವಾನ ಬಂದಿದೆ. ಕಾರ್ಯಕರ್ತರೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನೆಹರು ಓಲೇಕಾರ ಹೇಳಿದ್ದಾರೆ.

ಹಾವೇರಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಅವರ ಬೆಂಬಲಿಗರು ಅನಿಸಿಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.