ಹಾರೋಹಳ್ಳಿ: ತಾಲ್ಲೂಕಿನ ಬಾದಗೆರೆಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಸ್ ಸ್ಥಳೀಯ ಮುಖಂಡರು ಗ್ರಾಮದ ಮಹಿಳೆಯರ ವಿರೋಧ ಎದುರಿಸಬೇಕಾಯಿತು.
ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರು ಬರುತ್ತಿದ್ದಂತೆಯೇ ಘೇರಾವ್ ಹಾಕಿದ ಮಹಿಳೆಯರು, ಗ್ರಾಮದಿಂದ ಹೊರ ಹೋಗುವಂತೆ ತಾಕೀತು ಮಾಡಿದರು.
ಐದಾರು ದಿನಗಳ ಹಿಂದೆ ನಡೆದಿರುವ ಈ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಗ್ರಾಮದ ಯುವಕರು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
‘ನಮ್ಮ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವವರೆಗೂ ಯಾರು ಗ್ರಾಮಕ್ಕೆ ಬರಬೇಡಿ. ಈ ಬಾರಿ ಚುನಾವಣೆಯಲ್ಲಿ ನಾವು ಯಾರೂ ಮತ ಹಾಕುವುದಿಲ್ಲ. ಐದು ವರ್ಷದಲ್ಲಿ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸ ಆಗಿಲ್ಲ. ಕುಡಿಯುವ ನೀರಿಲ್ಲ. ಚರಂಡಿ, ರಸ್ತೆ ಅಭಿವೃದ್ಧಿ ಆಗಿಲ್ಲ. ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ಮುಖಂಡರು ಸಮಾಧಾನ ಪಡಿಸಲು ಪ್ರಯತ್ನಿಸಿದಾಗ ಮತ್ತಷ್ಟು ಸಿಟ್ಟಿಗೆದ್ದ ಮಹಿಳೆಯರು, ‘ನಮ್ಮನ್ನು ಯಾರೂ ಸಮಾಧಾನ ಪಡಿಸುವ ಅಗತ್ಯ ಇಲ್ಲ. ಯಾವ ಪಕ್ಷದವರು ಗ್ರಾಮಕ್ಕೆ ಬರಬೇಡಿ. ಮೊದಲು ಅಭಿವೃದ್ಧಿ ಕೆಲಸ ಮಾಡಿ. ನಂತರ ಮತ ಕೇಳಲು ಗ್ರಾಮಕ್ಕೆ ಬನ್ನಿ’ಎಂದು ಮುಲಾಜಿಲ್ಲದೆ
ಹೇಳಿದರು.
ಇದರಿಂದ ವಿಚಲಿತರಾದ ನಿಖಿಲ್ ಹಾಗೂ ಕಾರ್ಯಕರ್ತರು ಮರು ಮಾತನಾಡದೆ ಮೌನಕ್ಕೆ ಶರಣಾದರು. ಮೌನ ಮುರಿದ ನಿಖಿಲ್ ಕುಮಾರಸ್ವಾಮಿ,‘ಮುಂದೆ ಈ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ನಿಮ್ಮ
ಗ್ರಾಮದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಚುನಾವಣೆ ಮುಗಿದ ನಂತರ ಮಾಡಿ ಕೊಡುತ್ತೇವೆ’ ಎಂದು ಮಹಿಳೆಯರನ್ನು ಸಮಾಧಾನಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.