ADVERTISEMENT

ಸುಮಲತಾ ಭೇಟಿಗೆ ಹಿಂಜರಿಕೆ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 15:50 IST
Last Updated 27 ಮಾರ್ಚ್ 2024, 15:50 IST
   

ಬೆಂಗಳೂರು: ‘ರಾಜಕಾರಣದಲ್ಲಿ ಶತ್ರುತ್ವ ಶಾಶ್ವತವಲ್ಲ. ಸುಮಲತಾ ಅವರನ್ನು ಭೇಟಿಯಾಗಲು ಹಿಂಜರಿಕೆ ಇಲ್ಲ’ ಎಂದು ಜೆಡಿಎಸ್‌ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಂಬರೀಷ್‌ ಬದುಕಿದ್ದಾಗ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆಗ ಸುಮಲತಾ ಅವರೇ ನಮಗೆ ಊಟ ಬಡಿಸಿದ್ದಾರೆ. ರಾಜಕೀಯ ಸನ್ನಿವೇಶ, ಆಯಾ ಸಂದರ್ಭಗಳಲ್ಲಿ ಸಂಘರ್ಷವಾಗಿದೆ. ರಾಮಾಂಜನೇಯರ ನಡುವೆಯೇ ಯುದ್ಧ ನಡೆದಿತ್ತು. ಅವರ ಮುಂದೆ ನಾವೆಲ್ಲ ಹುಲು ಮಾನವರು’ ಎಂದು ಹೇಳಿದರು. 

‘ಪುಟ್ಟರಾಜ ಅವರಿಗೆ ಇನ್ನೂ ಚೆನ್ನಾಗಿರುವ ವಧುವನ್ನೇ ‌ನೋಡುತ್ತೇವೆ. ಅವರ ಬಗ್ಗೆ ಬೇರೆಯವರಿಗೆ ಚಿಂತೆ ಬೇಕಿಲ್ಲ. ಮಂಡ್ಯದ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು ಅಂಥ ಅವರು ಹೇಳಿದ್ದಾರೆ. ನನ್ನ ದೃಷ್ಟಿ ಕೆಟ್ಟದ್ದಲ್ಲ. ಅಷ್ಟು ಸಣ್ಣತನದ ಮಾತು ಬೇಡ’ ಎಂದು ಸಚಿವ ಚಲುವರಾಯಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದರು.

ADVERTISEMENT

‘ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ನಡೆದಿರುವ ಹೈಡ್ರಾಮಾ ಗಮನಿಸಿದ್ದೇನೆ. ಹಾಗಾಗಿ, ಪಕ್ಷದ ಅಭ್ಯರ್ಥಿ ಅಧಿಕೃತ ಘೋಷಣೆ ಮುಂದೂಡಲಾಗಿದೆ. ಪಕ್ಷದಲ್ಲೇ ಇಬ್ಬರು ಅಭ್ಯರ್ಥಿಗಳು ಇದ್ದಾರೆ. ಶಿಸ್ತಿನಿಂದ ಇರುವವರ ಹೆಸರನ್ನು ಘೋಷಣೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರ ಒಳಜಗಳದಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಲಾಭವಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.