ADVERTISEMENT

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯು ಪ್ರಣಾಳಿಕೆಯ ಭಾಗವಾಗಲಿದೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 20:45 IST
Last Updated 30 ಏಪ್ರಿಲ್ 2023, 20:45 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್‌) ಜಾರಿ ಮಾಡುವ ವಿಚಾರವು ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಮುಖಂಡರನ್ನು ತಮ್ಮ ನಿವಾಸದಲ್ಲಿ ಭಾನುವಾರ ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎರಡು ದಿನಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ, ಮಲೆನಾಡು ಮತ್ತು ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆಗಳನ್ನು ನೀಡಲಾಗುವುದು’ ಎಂದರು.

200 ಯುನಿಟ್‌ವರೆಗೆ ಉಚಿತ ವಿದ್ಯುತ್‌, ಮನೆಯ ಯಜಮಾನಿಗೆ ತಿಂಗಳಿಗೆ ₹ 2,000, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತೀ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ, ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಮತ್ತು ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆಯ ಘೋಷಣೆಗಳು ಪ್ರಣಾಳಿಕೆಯಲ್ಲಿ ಇರುತ್ತವೆ. ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

‘ಉಚಿತ ಕೊಡುಗೆಗಳಿಗೆ ಸಂಪನ್ಮೂಲವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂದು ಬಿಜೆಪಿ ಪ್ರಶ್ನೆ ಮಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರ ನಿಲ್ಲಿಸಿದರೆ ಈ ಯೋಜನೆಗಳಿಗೆ ಅಗತ್ಯವಿರುವಷ್ಟು ಆರ್ಥಿಕ ಸಂಪನ್ಮೂಲ ದೊರಕುತ್ತದೆ’ ಎಂದರು.

ಕೊಡುಗೆಯ ಲೆಕ್ಕ ನೀಡಲಿ

‘ಕಾಂಗ್ರೆಸ್‌ ಪಕ್ಷದವರು 91 ಬಾರಿ ಬೈದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಹೇಳುತ್ತಿದ್ದಾರೆ. ಅದರ ಬದಲಿಗೆ ಡಬಲ್‌ ಎಂಜಿನ್‌ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಲೆಕ್ಕ ನೀಡಲಿ’ ಎಂದು ಶಿವಕುಮಾರ್‌ ಆಗ್ರಹಿಸಿದರು.

‘ನಾವು ನಿರ್ದೇಶಕ, ನಿರ್ಮಾಪಕರಲ್ಲ’

‘ಜಿ. ಪರಮೇಶ್ವರ ಮೇಲಿನ ದಾಳಿ ನಾಟಕ’ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್ ‘ನಾನಾಗಲೀ ಪರಮೇಶ್ವರ ಅವರಾಗಲೀ ನಿರ್ದೇಶಕರೂ ಅಲ್ಲ ನಿರ್ಮಾಪಕರೂ ಅಲ್ಲ. ಕುಮಾರಣ್ಣ ಏನಾದರೂ ಮಾತನಾಡಿಕೊಳ್ಳಲಿ. ಅವರು ದೊಡ್ಡ ನಿರ್ಮಾಪಕರು’ ಎಂದರು. ‘ಪರಮೇಶ್ವರ ಸರಳ ವ್ಯಕ್ತಿ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ನಾವು ದಿನನಿತ್ಯ ಬಣ್ಣ ಹಚ್ಚಿ ನಾಟಕ ಮಾಡುತ್ತಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.