ಬೆಂಗಳೂರು: ‘ರಾಜ್ಯದ ಜನರು ಬಿಜೆಪಿ– ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬಯಸುತ್ತಿದ್ದಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ಬೇಕಿಲ್ಲ. ಹೀಗಾಗಿ ಬಿಜೆಪಿ– ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಬರಲಿ ಎಂಬ ಬಯಕೆ ಜನರಲ್ಲಿದೆ’ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸ್ಥಾನ ಗಳಿಸುವುದು ಕೂಡ ಕಷ್ಟವಿದೆ. ಹಿಂದಿನ ಚುನಾವಣೆಯಲ್ಲಿ ಗೆದ್ದ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಎಲ್ಲ 28 ಕ್ಷೇತ್ರಗಳಲ್ಲೂ ಗೆಲ್ಲಲಿದೆ. ಕಾಂಗ್ರೆಸ್ ಯಾವ ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂಬುದನ್ನು ಆ ಪಕ್ಷದ ನಾಯಕರು ಹೇಳಲಿ ಎಂದು ಸವಾಲು ಹಾಕಿದರು.
‘ಕೇಂದ್ರದಿಂದ ಅನ್ಯಾಯ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಏನು ಅನ್ಯಾಯ ಆಗಿದೆ ಎಂಬುದನ್ನು ಒಂದೆರಡು ಉದಾಹರಣೆ ಸಹಿತ ಹೇಳಿ. ಹಣ, ಹೆಂಡ, ತೋಳ್ಬಲ ಮತ್ತು ಜಾತಿಯ ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ’ ಎಂದು ಟೀಕಿಸಿದರು.
‘ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳ ಅವಧಿಯಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ ನಮಗಾಗಿ ಕೆಲಸ ಮಾಡಿದ್ದಾರೆ. ಇನ್ನು ಐದಾರು ದಿನಗಳ ಕಾಲ ನೀವೆಲ್ಲರೂ ವಿಶ್ರಾಂತಿ ಪಡೆಯದೆ ಕೆಲಸ ಮಾಡಬೇಕು. ಮನೆ ಮನೆಗೂ ಹೋಗಿ ಬಿಜೆಪಿಯ ಕಮಲದ ಹೂವು ಮತ್ತು ಜೆಡಿಎಸ್‌ಗೆ ಮತ ಕೇಳಿ. ನಿಮ್ಮ ನಂಬಿಕೆಯ ಮೇಲೆ 28 ಸ್ಥಾನಗಳನ್ನೂ ಗೆದ್ದು ನಿಮಗಾಗಿ ದೆಹಲಿಗೆ ಕಳಿಸುತ್ತೇವೆ ಎಂಬ ಭರವಸೆಯನ್ನು ಮೋದಿಯವರಿಗೆ ನೀಡುತ್ತೇನೆ’ ಎಂದು ಸಭೆಯಲ್ಲಿದ್ದ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.