ADVERTISEMENT

ಪುತ್ತೂರಿನಲ್ಲಿ ಹಿಂದುತ್ವ ಕಾರ್ಯಕರ್ತರ ಆಕ್ರೋಶ

ರಘುಪತಿ ಭಟ್, ಅಂಗಾರಗೆ ಇಲ್ಲ ಬಿಜೆಪಿ ಟಿಕೆಟ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 7:40 IST
Last Updated 13 ಏಪ್ರಿಲ್ 2023, 7:40 IST
ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅರುಣ್‌ ಪುತ್ತಿಲ ನೇತೃತ್ವದಲ್ಲಿ ಪುತ್ತೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬೆಂಬಲಿಗರು
ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅರುಣ್‌ ಪುತ್ತಿಲ ನೇತೃತ್ವದಲ್ಲಿ ಪುತ್ತೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬೆಂಬಲಿಗರು   

ಮಂಗಳೂರು/ಉಡುಪಿ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಬೆನ್ನಲ್ಲೇ ಟಿಕೆಟ್‌ ಕೈ ತಪ್ಪಿರುವ ಸುಳ್ಯ ಶಾಸಕ ಎಸ್. ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಿಸಿದರೆ, ಉಡುಪಿ ಶಾಸಕ ಕೆ.ರಘುಪತಿ ಭಟ್‌ ಕಣ್ಣೀರು ಹಾಕಿದ್ದಾರೆ. ಹೊಸ ಮುಖಕ್ಕೆ ಮಣೆ ಹಾಕಿರುವ ಪುತ್ತೂರು ಕ್ಷೇತ್ರದಲ್ಲಿ ಅಭ್ಯರ್ಥಿ ವಿರುದ್ಧ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ.

ಸುಳ್ಯ ಮೀಸಲು ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿರುವ ಅಂಗಾರ ಅವರ ಬದಲಿಗೆ ಈ ಬಾರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ ಅವರಿಗೆ ಮಣೆ ಹಾಕಿದೆ. ಈ ಬಗ್ಗೆ ಬೇಸರಗೊಂಡಿರುವ ಅಂಗಾರ ಅವರು, ‘ಪಕ್ಷ ಟಿಕೆಟ್‌ ನೀಡದಿರುವ ಕುರಿತು ನನಗೆ ಅಸಮಾಧಾನ ಇಲ್ಲ. ಆದರೆ, ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಮಾಡಿರುವ ಕೆಲಸವನ್ನು ಗೌರವಿಸುವ ಕ್ರಮ ಇದಲ್ಲ. ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು, ಪುತ್ತೂರು ಕ್ಷೇತ್ರದಲ್ಲಿ ಕಾರ್ಯಕರ್ತರ ವಿರೋಧ ಎದುರಿಸುತ್ತಿದ್ದ ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಕೈಬಿಟ್ಟು ಬಿಜೆಪಿ ಹೈಕಮಾಂಡ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿದೆ. ಆದರೆ, ಜಾತಿ ಲೆಕ್ಕಾಚಾರ ತಾಳೆ ಹಾಕಿ ಗೌಡ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಿ, ಹಿಂದುತ್ವ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಹಿಂದುತ್ವ ಕಾರ್ಯಕರ್ತರು ಆರೋಪಿಸಿದ್ದು, ಈ ಬಗ್ಗೆ ತಮ್ಮ ಅಸಮಾಧಾನವನ್ನೂ ತೋಡಿಕೊಂಡಿದ್ದಾರೆ.

ADVERTISEMENT

ಹಿಂದುತ್ವ ಕಾರ್ಯಕರ್ತ ಅರುಣ್‌ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿರುವ ಹಿಂದುತ್ವ ಕಾರ್ಯಕರ್ತರು, ಇಲ್ಲದಿದ್ದರೆ ನೋಟಾಕ್ಕೆ ಮತ ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಣ್ಣೀರಿಟ್ಟ ರಘುಪತಿ ಭಟ್‌: ಉಡುಪಿ ಶಾಸಕ ಕೆ.ರಘುಪತಿ ಭಟ್‌ ಕಣ್ಣೀರು ಹಾಕಿದ್ದಾರೆ. ‘ಪಕ್ಷದ ನಿರ್ಧಾರದ ಬಗ್ಗೆ ಬೇಸರವಿಲ್ಲ; ಆದರೆ, ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ’ ಎಂದು ದುಃಖ ತೋಡಿಕೊಂಡಿದ್ದಾರೆ.

‘ಜಾತಿಯ ಕಾರಣಕ್ಕೆ ಟಿಕೆಟ್‌ ಕೊಡಲು ಸಾಧ್ಯವಿಲ್ಲ ಎಂದು ಮೊದಲೇ ಹೇಳಿದ್ದರೆ, ಈಶ್ವರಪ್ಪ ಅವರಂತೆ ಸ್ವಯಂ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ’ ಎಂದು ಸುದ್ದಿಗಾರರ ಎದುರು ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.