ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ 2.59 ಕೋಟಿ ಅರ್ಹ ಮತದಾರರು ಇದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡನೇ ಹಂತದಲ್ಲಿ ಮತದಾನ ನಡೆಯುವ ಲೋಕಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಅಂತಿಮಗೊಂಡಿದೆ. ತಲಾ 1.29 ಕೋಟಿ ಪುರುಷ ಮತ್ತು ಮಹಿಳಾ ಮತದಾರರಿದ್ದಾರೆ. 1,945 ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಪಟ್ಟಿಯಲ್ಲಿದ್ದಾರೆ’ ಎಂದರು.
ಈ ಕ್ಷೇತ್ರಗಳಲ್ಲಿ 1.90 ಲಕ್ಷ ಯುವ (18ರಿಂದ 19 ವರ್ಷ) ಮತದಾರರಿದ್ದಾರೆ. 85 ವರ್ಷಕ್ಕಿಂತ ಹೆಚ್ಚು ವಯಸ್ಸಾದ 2.29 ಲಕ್ಷ ಹಾಗೂ 3.43 ಲಕ್ಷ ಅಂಗವಿಕಲ ಮತದಾರರಿದ್ದಾರೆ. 418 ಸಾಗರೋತ್ತರ ಮತದಾರರು ಈ ಕ್ಷೇತ್ರಗಳಲ್ಲಿದ್ದಾರೆ ಎಂದು ವಿವರ ನೀಡಿದರು.
ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಪೈಕಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ (20.98 ಲಕ್ಷ) ಮತದಾರರಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ (16.41 ಲಕ್ಷ) ಮತದಾರರಿದ್ದಾರೆ ಎಂದರು.
28,269 ಮತಗಟ್ಟೆ: ಈ 14 ಕ್ಷೇತ್ರಗಳಲ್ಲಿ 28,257 ಮುಖ್ಯ ಮತಗಟ್ಟೆಗಳು ಮತ್ತು 12 ಉಪ ಮತಗಟ್ಟೆಗಳು ಸೇರಿದಂತೆ 28,269 ಮತಗಟ್ಟೆಗಳಿವೆ ಎಂದು ಮೀನಾ ತಿಳಿಸಿದರು.
8,621 ಮುಖ್ಯ ಮತಗಟ್ಟೆಗಳು ನಗರ ಪ್ರದೇಶಗಳಲ್ಲಿದ್ದರೆ, 19,636 ಮುಖ್ಯ ಮತಗಟ್ಟೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ (2,203) ಮತಗಟ್ಟೆಗಳಿವೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ (1,893) ಮತಗಟ್ಟೆಗಳಿವೆ ಎಂದು ಹೇಳಿದರು.
5.17 ಲಕ್ಷ ಮತದಾರರ ಹೆಚ್ಚಳ
ಮಾರ್ಚ್ 16ರಂದು ಲೋಕಸಭಾ ಚುನಾವಣೆ ಘೋಷಣೆಯಾದ ದಿನ ರಾಜ್ಯದಲ್ಲಿ 5,42,54,500 ಮತದಾರರಿದ್ದರು. ನಂತರ ನಡೆದ ಪರಿಷ್ಕರಣೆಯಲ್ಲಿ 5,17,800 ಮತದಾರರ ಸೇರ್ಪಡೆ ಆಗಿದೆ. ಈಗ ರಾಜ್ಯದಲ್ಲಿ ಒಟ್ಟು 5,47,72,300 ಮತದಾರರಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.