ADVERTISEMENT

ಧಾರ್ಮಿಕ ಸ್ಥಳದಲ್ಲಿ ಭಾಷಣ ಮಾಡಿದ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 19:30 IST
Last Updated 5 ಏಪ್ರಿಲ್ 2024, 19:30 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ   

ಬೆಂಗಳೂರು: ‘ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಭಾಷಣ ಮಾಡಿ ಮತದಾರರ ಮೇಲೆ ಪ್ರಭಾವ ಬೀರಿದ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ’ ಎಂಬ ಆರೋಪದ ತನಿಖೆಗೆ ತಡೆ ಕೋರಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಕುರಿತ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ರಾಘವೇಂದ್ರ ಪರ ವಕೀಲರು ಶುಕ್ರವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಮುಂದಿನ ವಾರದಲ್ಲಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು’ ಎಂದು ತಿಳಿಸಿದರು.

ಪ್ರಕರಣವೇನು?: ಬಿ.ವೈ.ರಾಘವೇಂದ್ರ ಚಿತ್ರದುರ್ಗದ ಸಿದ್ದೇಶ್ವರ ಭೋವಿ ಸಮಾಜದ ಗುರುಪೀಠದಲ್ಲಿ 2024ರ ಮಾರ್ಚ್ 23ರಂದು ಬೆಳಿಗ್ಗೆ 11 ಗಂಟೆಯಲ್ಲಿ ಸಭೆ ನಡೆಸಿದ್ದರು.

ADVERTISEMENT

‘ಈ ಸಭೆಗೆ ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆದಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ, ಮತದಾರರ ಮೇಲೆ ಪ್ರಭಾವ ಬೀರಲು ಭಾಷಣ ಮಾಡಿ ಧಾರ್ಮಿಕ ಸ್ಥಳವನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಸಂಚಾರಿ ವಿಚಕ್ಷಣಾ ದಳದ ಅಧಿಕಾರಿ ಪಿ.ಅವಿನಾಶ್‌ ಗ್ರಾಮೀಣ ಠಾಣೆಯ ಪೊಲೀಸರಿಗೆ ಅಂದೇ ದೂರು ನೀಡಿದ್ದರು.

ಇದರನ್ವಯ, ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆ ಕಾಯ್ದೆ-1988, ಜನಪ್ರತಿನಿಧಿಗಳ ಕಾಯ್ದೆ-1951 ಮತ್ತು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 171 ಎಫ್‌ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರಿದ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.