ADVERTISEMENT

ರಾಜ್ಯ ಚುನಾವಣೆ: ಮೋದಿಯಂತೆ ನಾನು ಅಳುತ್ತಾ ಕೂರಲಾರೆ; ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 3 ಮೇ 2023, 8:36 IST
Last Updated 3 ಮೇ 2023, 8:36 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ನನಗೆ ಅವರು ಹಾಗೆ ಬಯ್ದರು, ಹೀಗೆ ಬಯ್ದರು ಎಂದು ಪ್ರಧಾನಿ ‌ಮೋದಿಯಂತೆ ಅಳುತ್ತಾ ಕೂರಲಾರೆ. ತಮ್ಮದು ಕೆಳಜಾತಿ ಎಂದು ಅವರು ಅನುಕಂಪ ಪಡೆಯಲು ನೋಡುತ್ತಾರೆ. ನನ್ನದು ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ‌ಕೆಳಜಾತಿ. ಎಲ್ಲರೂ ನನ್ನ ಹೆಗಲ ಮೇಲೆ ಕಾಲಿಟ್ಟೇ ಮೇಲೆ ನಿಲ್ಲುತ್ತಾರೆ.

ಹಾಗಿದ್ದರೆ ನಾನೆಷ್ಟು ‌ಅಳಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ಪ್ರಶ್ನಿಸಿದರು.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾರಾದರೂ ನಿಂದಿಸಿದರೆ ಇಡೀ ದಿನ ಅಳುತ್ತಾ ಕೂರುವುದಿಲ್ಲ. ಹಿಮ್ಮತ್ (ಧೈರ್ಯ) ನಿಂದ ಎದುರಿಸುತ್ತೇನೆ ಎಂದರು.

ADVERTISEMENT

ಬಜರಂಗದಳ ನಿಷೇಧದ ಕುರಿತು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಕುರಿತ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಕಾಂಗ್ರೆಸ್ ನ ಅನುಭವಸ್ಥರು ಈ ಪ್ರಣಾಳಿಕೆ ರೂಪಿಸಿದ್ದಾರೆ. ಬಿಜೆಪಿ ಉದ್ದೇಶಪೂರ್ವಕವಾಗಿ ವಿವಾದ ಮಾಡುತ್ತಿದೆ ಎಂದರು.

ತಮ್ಮನ್ನು ನಿಂದಿಸಿದ್ದೇನೆ ಎಂದು ಮೋದಿ ಚುನಾವಣೆ ಪ್ರಚಾರದಲ್ಲಿ ಹೇಳುತ್ತಾರೆ. ಅವರು ಹಾಗೂ ಅವರ ಪಕ್ಷದವರು ಸೋನಿಯಾ ಗಾಂಧಿ ಅವರನ್ನು ಇಟಲಿ ಮಹಿಳೆ ಎಂದರು. ರಾಹುಲ್ ಗಾಂಧಿ ಅವರನ್ನು ಸತತವಾಗಿ ನಿಂದಿಸಿದ್ದಾರೆ. ಈ ವಿಚಾರವನ್ನು ನಾವು ರಾಜಕೀಯವಾಗಿಯೇ ಎದುರಿಸಿದ್ದೇವೆ‌ ಎಂದರು.

ಅಧಿಕಾರ ಕೊಟ್ಟು ನೋಡಿ, ಪ್ರಣಾಳಿಕೆ ಈಡೇರಿಸ್ತೀವಿ: ಕಾಂಗ್ರೆಸ್ ಪ್ರಣಾಳಿಕೆ ಈಡೇರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 165 ಘೋಷಣೆಗಳ ಪೈಕಿ 158 ಈಡೇರಿಸಿದ್ದೇವೆ. ಈಗಲೂ ಈಡೇರಿಸಲು ಸಾಧ್ಯವಾಗುವ ಘೋಷಣೆ ‌ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಅನುಷ್ಠಾನಗೊಳಿಸುವ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಚಾರದ ಲೆಕ್ಕ ಕೊಡಲಿ: ಅವರಿಗೆ ಟೀಕಿಸಿರುವ ಬಗ್ಗೆ ಲೆಕ್ಕ ಇಟ್ಟಿರುವ ಪ್ರಧಾನಿ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಎಷ್ಟು ಬಾರಿ ಪ್ರಚಾರಕ್ಕೆ ಬಂದು ಹೋಗಿದ್ದಾರೆ ಎಂಬ ಲೆಕ್ಕ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ನಮ್ಮನ್ನು ಟಾರ್ಗೆಟ್ ಮಾಡಿ ಮೇಲಿಂದ ಮೇಲೆ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರು ಬರುವುದಕ್ಕೆ ನಮ್ಮ ತಕರಾರಿಲ್ಲ ಎಂದರು.

'ನಾನು ಕೇಂದ್ರ ಸಚಿವನಾಗಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ರೈಲು, ಇಎಸ್ಐ ಆಸ್ಪತ್ರೆ ಹಾಗೂ ಕಾಲೇಜು, ರೈಲು ಬೋಗಿ ತಯಾರಿಕಾ ಘಟಕ, ವಾಡಿ-ಗದಗ ರೈಲ್ವೆ ಮಾರ್ಗ ನಿರ್ಮಾಣಕ್ಕೆ ₹ 2000 ಕೋಟಿ ನಿಗದಿ ಮಾಡಿದ್ದೆ. ರಾಜ್ಯದ ಮುಖ್ಯಮಂತ್ರಿ ಆಗದೇ, ಪ್ರಧಾನಮಂತ್ರಿಯೂ ಆಗದೇ ಇಷ್ಟು ಕೆಲಸ ಮಾಡಿದ್ದೇನೆ. ಮೋದಿ ಪ್ರಧಾನಿಯಾಗಿ ಈ ಭಾಗಕ್ಕೆ ಏನು ಮಾಡಿದ್ದಾರೆ' ಎಂದು ಪ್ರಶ್ನಿಸಿದರು.

ಜನ ಏಕೆ ಪ್ರಶ್ನಿಸುತ್ತಿಲ್ಲ? ನಾವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಲೀಟರ್ ಗೆ 50 ಪೈಸೆ ಹೆಚ್ಚಿಸಿದರೂ ಜನರು ಬೀದಿಗಿಳಿಯುತ್ತಿದ್ದರು. ಈಗ ಗ್ಯಾಸ್ ಬೆಲೆ ₹ 1200, ಪೆಟ್ರೋಲ್ ಬೆಲೆ ₹ 102, ಡೀಸೆಲ್ ದರ ₹ 89 ಇದ್ದರೂ ಜನ ಏಕೆ ಪ್ರಶ್ನಿಸುತ್ತಿಲ್ಲ ಎಂದರು.

ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಧರ ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ರಾಜಗೋಪಾಲರೆಡ್ಡಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸುಖಜೋತ್ ಸಿಂಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.