ADVERTISEMENT

ದೇಶಕ್ಕಾಗಿ ತಾಳಿ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್‌: ಎಚ್‌.ಕೆ.ಪಾಟೀಲ ತಿರುಗೇಟು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 13:12 IST
Last Updated 24 ಏಪ್ರಿಲ್ 2024, 13:12 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ಕಾಂಗ್ರೆಸ್‌ ಪಕ್ಷದವರು ತಾಳಿ ಕಿತ್ತುಕೊಳ್ಳುವವರಲ್ಲ. ನಮ್ಮ ಪಕ್ಷದ ಅಧಿನಾಯಕಿ ದೇಶಕ್ಕಾಗಿ ತನ್ನ ತಾಳಿಯನ್ನು ಬಲಿದಾನ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ತಾಳಿ ಕಿತ್ತು ಮುಸಲ್ಮಾನರಿಗೆ ಕೊಡುತ್ತಾರೆ, ಆಸ್ತಿ ಕಿತ್ತು ಅವರಿಗೆ ಹಂಚುತ್ತಾರೆ, ದಲಿತರ ಮೀಸಲಾತಿ ತೆಗೆದು ಮುಸ್ಲಿಂ ಸಮುದಾಯಕ್ಕೆ ನೀಡುತ್ತಾರೆ ಎಂಬ ಹಸಿ ಸುಳ್ಳುಗಳನ್ನು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮೋದಿ ಅವರು ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ದ್ವೇಷ ಹುಟ್ಟಿಸುವ ಭಾಷೆ ಬಳಸಿ ಭಾಷಣ ಮಾಡುತ್ತಿದ್ದಾರೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಹಸಿ ಸುಳ್ಳುಗಳನ್ನು ಹೇಳುವುದು, ದ್ವೇಷ ಭಾವನೆಯ ಅಂಶಗಳನ್ನು ಬಿತ್ತುವುದು ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ. ದ್ವೇಷ ಭಾಷಣ, ಸುಳ್ಳು ಹೇಳಿಕೆಯಿಂದ ಆಗುವ ಹಾನಿಯನ್ನು ತಡೆಯಲು ಚುನಾವಣಾ ಆಯೋಗ ಮೋದಿ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬೇಕು. ಈ ದೇಶದ ನೆಲದಲ್ಲಿ ಎಲ್ಲರಿಗೂ ಒಂದೇ ಕಾನೂನಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ತಕ್ಷಣ ಕ್ರಮ ಜರುಗಿಸಬೇಕು. ಮೋದಿ ಅವರನ್ನು ಚುನಾವಣಾ ಪ್ರಕ್ರಿಯೆಯಿಂದ ಅನರ್ಹಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಪ್ರಧಾನಿ ಮೋದಿ ಅವರು ಭಾರತ ಮಾತೆಯ ಆಭರಣಗಳಾದ ರೈಲ್ವೆ, ವಿಮಾನ ನಿಲ್ದಾಣ ಸೇರಿದಂತೆ ರಾಷ್ಟ್ರೀಯ ಸಂಪತ್ತುಗಳನ್ನೆಲ್ಲಾ ಕಿತ್ತುಕೊಂಡು ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗೆ ಮಾಡಲು ಅವರಿಗೆ ನಾಚಿಕೆ ಬರಬೇಕು’ ಎಂದು ಹರಿಹಾಯ್ದರು.

‘ದೇಶದಲ್ಲಿನ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಸಮೀಕ್ಷೆಗಳು ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿವೆ. ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಜೀವಂತ ಸಂವಿಧಾನವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದರೆ ನೀವೇ ಕೈ ಸುಟ್ಟುಕೊಳ್ಳುತ್ತೀರಿ’ ಎಂದು ಎಚ್ಚರಿಸಿದರು.

‘ರಾಜ್ಯಕ್ಕೆ ಶೀಘ್ರವಾಗಿ ಬರ ಪರಿಹಾರ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಹತ್ತು ಹಲವು ಬಾರಿ ಮನವಿ ಮಾಡಲಾಯಿತು. ನಮ್ಮ ಸಚಿವರು, ಹಿರಿಯ ಅಧಿಕಾರಿಗಳು ಕೇಂದ್ರ ಸಚಿವರು, ಪ್ರಧಾನಿ ಭೇಟಿ ಸಾಕಷ್ಟು ಅಲೆದಾಡಿದರು. ಈಗ ಅರ್ಜಿ ಕೊಡುವುದು ತಡ ಮಾಡಿದ್ದರಿಂದ ಪರಿಹಾರ ವಿತರಣೆ ವಿಳಂಬವಾಗಿದೆ ಎಂಬ ಹೊಸ ನಾಟಕ ಹೂಡಿದ್ದಾರೆ. ನಾವು ಅರ್ಜಿ ಕೊಡದೇ ಕೇಂದ್ರ ತಂಡದವರು ಬಂದು ಬರ ಸಮೀಕ್ಷೆ ಮಾಡಿಕೊಂಡು ಹೋಗಿದ್ದರೇ’ ಎಂದು ಪ್ರಶ್ನಿಸಿದರು.

‘ಬರ ಪರಿಸ್ಥಿತಿಯಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಕೆಲಸವನ್ನು 100ದಿನಗಳಿಂದ 150ಕ್ಕೆ ಹೆಚ್ಚಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ವಿಷಯದಲ್ಲೂ ರಾಜಕೀಯ ಮಾಡಿತು. ಜನರು ಇವೆಲ್ಲವನ್ನೂ ಗಮನಿಸುತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಮುಖಂಡರಾದ ಸಿದ್ದು ಪಾಟೀಲ, ವಿ.ಬಿ.ಸೋಮನಕಟ್ಟಿಮಠ, ಅಶೋಕ ಮಂದಾಲಿ, ಬಿ.ಬಿ.ಅಸೂಟಿ, ಬಸವರಾಜ ಕಡೇಮನಿ, ಉಮರ್ ಫಾರೂಕ್‌ ಹುಬ್ಬಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.