ಮಂಡ್ಯ: ‘ನಾಗಮಂಗಲ ಜೆಡಿಎಸ್ ಶಾಸಕ ಕೆ.ಸುರೇಶ್‌ಗೌಡ ಜಾತಿ ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
‘ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ಅವರು ಹೊರಡಿಸಿರುವ ಕರಪತ್ರದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದರು.
‘ಚಲುವರಾಯಸ್ವಾಮಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಕರಪತ್ರ ಮುದ್ರಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಜಾತಿನಿಂದನೆ ಕಾಯಿದೆಯನ್ನು ರದ್ದುಗೊಳಿಸಬೇಕು ಎಂದು ಮಾತನಾಡಿದ್ದರು. ದಲಿತರ ಹೋರಾಟಗಾರರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂಬ ಸುಳ್ಳುಗಳನ್ನು ಪ್ರಕಟಿಸಿದ್ದಾರೆ. ಕೂಡಲೇ ಕರಪತ್ರವನ್ನು ಮುಟ್ಟಗೋಲು ಹಾಕಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ನಾಗಮಂಗಲದಲ್ಲಿ ಒಕ್ಕಲಿಗರು, ದಲಿತ ಸಮುದಾಯಗಳು ಅನೂನ್ಯವಾಗಿದ್ದು, ಚಲುವರಾಯಸ್ವಾಮಿ ಅವರ ಪರ ಅಲೆ ಎದ್ದಿರುವುದನ್ನು ಸಹಿಸಲಾಗದೆ ಸುರೇಶ್‌ಗೌಡರು ಇಂತಹ ಕೀಳು ಮಟ್ಟದ ಷಡ್ಯಂತ್ರ ನಡೆಸಿದ್ದಾರೆ, ಜಾತಿ ಧರ್ಮಗಳ ಆಧಾರವಾಗಿ ಮತಯಾಚಿಸುವುದು, ವ್ಯಕ್ತಿಗತವಾಗಿ ಎದುರಾಳಿಗಳನ್ನು ನಿಂಧಿಸುವುದು ಶಿಕ್ಷಾರ್ಹ ಅಪರಾಧವಾಗಿದೆ’ ಎಂದರು. ಮುಖಂಡರಾದ ಸುರೇಶ್ ಕಂಠಿ, ನಾಗಭೂಷಣ್, ವಿಜಯಕುಮಾರ್, ಪ್ರಸನ್ನ, ಚಂದ್ರು ಇದ್ದರು.
ಅಪಪ್ರಚಾರ ನಿಲ್ಲಿಸಿ: ಇದೇ ವಿಷಯ ಕುರಿತು ಸುದ್ದಿಗೋಷ್ಠಿ ನಡೆಸಿದ ದಲಿತ ಮುಖಂಡ ಎಂ.ನಾಗರಾಜಯ್ಯ ‘ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಅವರು ತನ್ನ ರಾಜಕೀಯ ಜೀವನದಲ್ಲಿ ದಲಿತರನ್ನು ಪ್ರತ್ಯೇಕವಾಗಿ ನಡೆಸಿಕೊಂಡವರಲ್ಲ, ಆದರೆ ಶಾಸಕ ಸುರೇಶ್‌ಗೌಡ ಅಪಪ್ರಚಾರ ನಡೆಸುತ್ತಿರುವುದನ್ನು ನಿಲ್ಲಿಸಲಿ’ಎಂದು ಒತ್ತಾಯಿಸಿದರು.
‘1999 ರಿಂದ 2018 ರವರೆಗೆ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ನಾಗಮಂಗಲ ಕ್ಷೇತ್ರದ ಚಿತ್ರಣವನ್ನೇ ಬದಲಿಸಿರುವ ಎನ್.ಚಲುವರಾಯಸ್ವಾಮಿ ಅವರು, ಗಂಗಾ ಕಲ್ಯಾಣ ಯೋಜನೆಯಲ್ಲಿ ಸಾಕಷ್ಟು ದಲಿತರಿಗೆ ಸಹಾಯ ಮಾಡಿದ್ದಾರೆ. ಹೋಬಳಿ ಕೇಂದ್ರಕ್ಕೆ ಅಂಬೇಡ್ಕರ್ ಭವನ ಇರಲೇಬೇಕೆಂದು ತೀರ್ಮಾನಿಸಿ ಕಾರ್ಯ ಸಾಧಿಸಿದ್ದಾರೆ’ ಎಂದರು. ಮುಖಂಡರಾದ ಶಿವಣ್ಣ, ರಮಾನಂದ, ಕಂಚನಹಳ್ಳಿ ನಾಗರಾಜು, ಭೀಮನಹಳ್ಳಿ ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.