ADVERTISEMENT

MLC Elections LIVE | ವಿಧಾನ ಪರಿಷತ್ ಚುನಾವಣೆ: ಮತದಾನ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 14:28 IST
Last Updated 3 ಜೂನ್ 2024, 14:28 IST
   

ಮತದಾನ ಆರಂಭ

ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದೆ. ಆರು ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದು, 4.33 ಲಕ್ಷ ಮಂದಿ ಮತದಾರರಿದ್ದಾರೆ.

ಶಿವಮೊಗ್ಗ ವರದಿ

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಆರು ಜಿಲ್ಲೆಗಳ (ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳು ಮಾತ್ರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು) ವ್ಯಾಪ್ತಿಯನ್ನು ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಪದವೀಧರ ಕ್ಷೇತ್ರಕ್ಕೆ 27,412 ಮತದಾರರು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 4365 ಮತದಾರರು ಇದ್ದಾರೆ.

ADVERTISEMENT

ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಆಯನೂರು ಮಂಜುನಾಥ್, ಬಿಜೆಪಿಯ ಡಾ.ಧನಂಜಯ ಸರ್ಜಿ, ಪಕ್ಷೇತರ ಅಭ್ಯರ್ಥಿಗಳಾದ ರಘುಪತಿ ಭಟ್ ಹಾಗೂ ಎಸ್.ಪಿ.ದಿನೇಶ್ ನಡುವೆ ಚತುಷ್ಕೋನ ಪೈಪೋಟಿ ಇದೆ. ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ಕಾಂಗ್ರೆಸ್ ನಿಂದ ಕೆ.ಕೆ.ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಅರುಣ್ ಹೊಸಕೊಪ್ಪ ನಡುವೆ ಪೈಪೋಟಿ ಇದೆ.

ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಜೂನ್ 6 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಮಂಗಳೂರು ವರದಿ

ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ಐದು ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8,189 ಮತದಾರರು ಇದ್ದು, ಅವರಲ್ಲಿ 5,539 ಪುರುಷರು, 2,650 ಮಹಿಳೆಯರು ಇದ್ದಾರೆ. ಪದವೀಧರ ಕ್ಷೇತ್ರದಲ್ಲಿ ಒಟ್ಟು 19,971 ಮತದಾರರು ಇದ್ದು, ಅವರಲ್ಲಿ 11,596 ಮಹಿಳೆಯರು ಹಾಗೂ 8,375 ಪುರುಷ ಮತದಾರರು‌ ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಹಾಗೂ ಉಪ ವಿಭಾಗಾಧಿಕಾರಿ ಹರ್ಷವರ್ಧನ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ಬೂತ್ ನಲ್ಲಿ ಮತ ಚಲಾಯಿಸಿದರು

ಮೈಸೂರು ವರದಿ

ಮೈಸೂರಿನಲ್ಲಿ ‘ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ’ದ ಚುನಾವಣೆಯ ಮತದಾನವು ಬಿರುಸಿನಿಂದ ಆರಂಭವಾಗಿದೆ.

ಸೋಮವಾರ ಬೆಳಿಗ್ಗೆ 8 ಗಂಟೆಯಿಂದಲೇ ಮತಗಟ್ಟೆ ಕೇಂದ್ರಗಳಿಗೆ ಬಂದ ಶಿಕ್ಷಕರು ಉತ್ಸಾಹದಿಂದ ಹಕ್ಕು ಚಲಾಯಿಸಿದರು.

ಶಾರದಾದೇವಿನಗರದ ಇಂದಿರಾ ಪ್ರೌಢಶಾಲೆಯಲ್ಲಿ ಎರಡು ಮತಗಟ್ಟೆಗಳಿದ್ದು, ಬೆಳಿಗ್ಗೆ 10ರ ವೇಳೆಗೆ 250ಕ್ಕೂ ಹೆಚ್ಚು ಮತದಾರರು ಮತದಾನ ಮಾಡಿದ್ದರು‌. ಈ ಮತಗಟ್ಟೆಗಳಲ್ಲಿ 1,159 ಮತದಾರರು ಇದ್ದಾರೆ. ಸರದಿ ಸಾಲು ಕಂಡು ಬರಲಿಲ್ಲ. ಐದು ನಿಮಿಷದಲ್ಲಿಯೇ ಮತಪತ್ರದಲ್ಲಿ ಪ್ರಾಶಸ್ತ್ಯದ ಮತದಾನ ಮಾಡಿ ಮರಳಿದರು‌.

'25 ವರ್ಷದಿಂದ ಪರಿಷತ್ ಚುನಾವಣೆಗಳಲ್ಲಿ ಹಕ್ಕು ಚಲಾಯಿಸುತ್ತಿರುವೆ‌. ಕೆಲವೇ ನಿಮಿಷದಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಿತು' ಎಂದು ಗಂಗೋತ್ರಿ ಪ್ರೌಢಶಾಲೆಯ ಶಿಕ್ಷಕ, ವಿಜಯನಗರದ ನಿವಾಸಿ ಮಹೇಶ ಹೇಳಿದರು.

ಮತಗಟ್ಟೆ ಕೇಂದ್ರದ ಸಮೀಪ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು, ಪಕ್ಷದ ಅಭ್ಯರ್ಥಿಗೆ ಪ್ರಾಶಸ್ತ್ಯದ ಮತ ನೀಡುವಂತೆ ಕೈ ಮುಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.

ರಾಮಕೃಷ್ಣನಗರದ ರಾಮಕೃಷ್ಣವಿದ್ಯಾಕೇಂದ್ರ, ನಜರಾಬಾದ್ ನ ಸರ್ಕಾರಿ ಪಿಯು ಕಾಲೇಜು, ಕುವೆಂಪುನಗರದ ಕಾಗಿನೆಲೆ ಬಿ.ಇಡಿ ಕಾಲೇಜು, ಗೋಕುಲಂನ ಲಯನ್ಸ್ ಸೇವಾನಿಕತನ ಶಾಲೆ ಸೇರಿದಂತೆ ನಗರದಲ್ಲಿನ 12 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಪ್ರೌಢಶಾಲೆಗಳ ಶಿಕ್ಷಕರು, ಪಿಯು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಬೋಧಕರು ಮತಚಲಾಯಿಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 44 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 20 ಮತಗಟ್ಟೆಗಳಿವೆ. ಕ್ಷೇತ್ರದ ಒಟ್ಟು 21,549 ಮತದಾರರಲ್ಲಿ ಜಿಲ್ಲೆಯ 10,439 ಮತದಾರರು ಹಕ್ಕು ಚಲಾಯಿಸುತ್ತಿದ್ದಾರೆ.

ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ‘ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ’ ಒಳಗೊಂಡಿದ್ದು, ಸತತ 5ನೇ ಬಾರಿಗೆ ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಮತ್ತು ಜೆಡಿಎಸ್‌–ಬಿಜೆಪಿ ಬೆಂಬಲದೊಂದಿಗೆ ಇದೇ ಮೊದಲಿಗೆ ಸ್ಪರ್ಧಿಸಿರುವ ಕೆ. ವಿವೇಕಾನಂದ ಸೇರಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಲಬುರಗಿ ವರದಿ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಕಲಬುರಗಿಯ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ.

ನಗರದ ತಹಶೀಲ್ದಾರ್ ಕಚೇರಿಯ ಎರಡು, ನಗರೇಶ್ವರ ಶಾಲೆಯ ಮೂರು ಮತಗಟ್ಟೆಗಳು ಸೇರಿದಂತೆ ಜಿಲ್ಲೆಯ 47 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ

ಕಲಬುರಗಿ ತಹಶೀಲ್ದಾರ್ ಕಚೇರಿ ಮತಗಟ್ಟೆಯಲ್ಲಿನ ಒಟ್ಟು 1,810 ಮತದಾರರ ಪೈಕಿ ಬೆಳಿಗ್ಗೆ 9.30 ಗಂಟೆಗೆ 78 ಜನ ಮತ ಚಲಾಯಿಸಿದ್ದರು.

ನಗರೇಶ್ವರ ಶಾಲೆಯ ಮತಗಟ್ಟೆಯಲ್ಲಿ 1389 ಮತದಾರರ ಪೈಕಿ 102 ಮತದಾರರು ಬೆಳಿಗ್ಗೆ 10 ಗಂಟೆವರೆಗೆ ಮತ ಚಲಾಯಿಸಿದ್ದರು.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ‌ಪಾಟೀಲ ನಗರೇಶ್ವರ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.

ಆಕ್ಷೇಪ: ಪಕ್ಷೇತರ ಅಭ್ಯರ್ಥಿ ಎನ್. ಪ್ರತಾಪರೆಡ್ಡಿ ಪರವಾಗಿ ಮತಗಟ್ಟೆಯ ಪಕ್ಕದಲ್ಲಿ ಅವರ ಏಜೆಂಟರು ಮತದಾರರ ಸ್ಲಿಪ್ ಕೊಡುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

ರಾಮನಗರ ವರದಿ

ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬೆಳಿಗ್ಗೆ ಬಿರುಸಿನ ಮತದಾನ ನಡೆಯಿತು.

ರಾಮನಗರದ ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಕಚೇರಿಯಲ್ಲಿ ಎರಡು ಮತಗಟ್ಟೆಗಳಿದ್ದು, ಪದವೀಧರ ಮತದಾರರು ಮತಗಟ್ಟೆಗೆ ಬಂದು ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಮತಗಟ್ಟೆಗಳ ಹೊರಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ‌ ಬೆಂಬಲಿಗರು ಬೀಡು ಬಿಟ್ಟಿದ್ದಾರೆ. ಮತಗಟ್ಟೆಗೆ ಬರುವ ಮತದಾರರ ನೋಂದಣಿ ಸಂಖ್ಯೆ ಹುಡುಕಿ ಅವರ ಮತಗಟ್ಟೆಗೆ ಕಳಿಸುತ್ತಿದ್ದ ದೃಶ್ಯ ಕಂಡುಬಂತು.

ರಾಮನಗರ ಜಿಲ್ಲಾ ವ್ಯಾಪ್ತಿಯ 28 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಪ್ರತಿ ಮತಗಟ್ಟೆಯಲ್ಲಿ 800 ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

ಮೂರು ಜಿಲ್ಲೆಗಳ 36 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರದಲ್ಲಿ 1,21,860 ಮತದಾರರಿದ್ದಾರೆ. ಈ ಪೈಕಿ, ರಾಮನಗರ ಜಿಲ್ಲೆಯಲ್ಲಿ 18,997 ಸಾವಿರ ಮಂದಿ ಇದ್ದಾರೆ. ಪರಿಷತ್‌ ಚುನಾವಣೆಯ ಮತ ಎಣಿಕೆಯು ಜೂನ್ 6ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಕೊಪ್ಪಳ ವರದಿ

ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸೋಮವಾರ ಮತದಾನ ಆರಂಭವಾಗಿದ್ದು ಬೆಳಿಗ್ಗೆ 10 ಗಂಟೆಯ ಅಂತ್ಯಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಶೇ. 8.72ರಷ್ಟು ಮತದಾನವಾಗಿದೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಹಾಗೂ 6 ಮತಗಟ್ಟೆಗಳಲ್ಲಿ ವಿಡಿಯೊಗ್ರಾಫಿ ವ್ಯವಸ್ಥೆ ಮಾಡಲಾಗಿದೆ. .

ಜಿಲ್ಲೆಯಲ್ಲಿ 9,162 ಪುರುಷ ಹಾಗೂ 4,581 ಮಹಿಳಾ ಮತದಾರರು ಇದ್ದಾರೆ. 24 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತಾದರೂ ಮೋಡಕವಿದ ವಾತಾವರಣವಿದ್ದ ಕಾರಣ ಆರಂಭದಲ್ಲಿ ಮಂದಗತಿಯಿಂದ ಸಾಗಿತ್ತು. ಈಗ ನಿಧಾನವಾಗಿ ಮತದಾನ ಚುರುಕು ಪಡೆದುಕೊಳ್ಳುತ್ತಿದೆ.

ಮೈಸೂರು ವರದಿ

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೊದಲ ಎರಡು ತಾಸಿನಲ್ಲಿ ಅಂದರೆ ಬೆಳಿಗ್ಗೆ 8ರಿಂದ 10ರವರೆಗೆ ಶೇ 14.09ರಷ್ಟು ಮತದಾನವಾಗಿದೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಶೇ 12.71 ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 14.76ರಷ್ಟು ಮತದಾನವಾಗಿದೆ.

ವಿಜಯನಗರ ವರದಿ

ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಮತದಾನ ವಿಜಯನಗರ ಜಿಲ್ಲೆಯ 21 ಮತಗಟ್ಟೆಗಳಲ್ಲಿ ಸೋಮವಾರ ಬೆಳಿಗ್ಗೆ ಬಿರುಸಿನಿಂದ ಆರಂಭವಾಯಿತು.

ಹೊಸಪೇಟೆಯಲ್ಲಿ ಎರಡು, ಕಮಲಾಪುರ, ಮರಿಯಮ್ಮನಹಳ್ಳಿಗಳಲ್ಲಿ ತಲಾ ಒಂದು ಸಹಿತ ಒಟ್ಟು ನಾಲ್ಕು ಮತಗಟ್ಟೆಗಳು ಹೊಸಪೇಟೆ ತಾಲ್ಲೂಕಿನಲ್ಲಿವೆ.

ಜಿಲ್ಲೆಯಲ್ಲಿ 18,233 ಮತದಾರರಿದ್ದಾರೆ.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಿಂದ ಮತದಾನ

ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಗಾಗಿ ಮತದಾನ ಆರಂಭವಾಗಿದೆ.

ಮಡಿಕೇರಿಯ ನಗರಸಭೆಯಲ್ಲಿರುವ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತು ಮತದಾನ ಮಾಡಿದರು‌.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ ಕುಮಾರ್ ಕುಶಾಲನಗರ ಮಾದರಿ‌ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಬೆಳಿಗ್ಗೆ 10 ಗಂಟೆಯ ನಂತರ ಮತದಾನ ಬಿರುಸು ಪಡೆದಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಒಟ್ಟು 1,578 ಮತದಾರರು ಇದ್ದು, ಇವರಲ್ಲಿ 543 ಪುರುಷರು ಮತ್ತು 1,035 ಮಹಿಳಾ ಮತದಾರರು ಇದ್ದಾರೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 234, ಕುಶಾಲನಗರ ತಾಲ್ಲೂಕಿನಲ್ಲಿ 337, ಮಡಿಕೇರಿ ತಾಲ್ಲೂಕಿನಲ್ಲಿ 441, ವಿರಾಜಪೇಟೆ ತಾಲ್ಲೂಕಿನಲ್ಲಿ 268 ಮತ್ತು ಪೊನ್ನಂಪೇಟೆ ತಾಲ್ಲೂಕಿನ 298 ಮಂದಿ ಮತದಾರರು ಇದ್ದಾರೆ.

ಇವರಿಗಾಗಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಮಡಿಕೇರಿ ನಗರಸಭೆ ಸಭಾಂಗಣ (ಬಲಭಾಗ), ವಿರಾಜಪೇಟೆ ಪುರಸಭೆ ಕಚೇರಿ, ಪೊನ್ನಂಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಒಟ್ಟು 3,909 ಮತದಾರರು ಇದ್ದು, ಇವರಲ್ಲಿ 1,699 ಪುರುಷ ಮತ್ತು 2,210 ಮಹಿಳಾ ಮತದಾರರು ಇದ್ದಾರೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು 811, ಕುಶಾಲನಗರ ತಾಲ್ಲೂಕಿನಲ್ಲಿ 795, ಮಡಿಕೇರಿ ತಾಲ್ಲೂಕಿನಲ್ಲಿ 1,143, ವಿರಾಜಪೇಟೆ ತಾಲ್ಲೂಕಿನಲ್ಲಿ 630 ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ 530 ಮಂದಿ ಮತದಾರರು ಇದ್ದಾರೆ.

ಇವರಿಗಾಗಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಮಡಿಕೇರಿ ನಗರಸಭೆ ಸಭಾಂಗಣ (ಬಲಭಾಗ), ನಗರಸಭೆ ಸಭಾಂಗಣ (ಎಡಭಾಗ), ವಿರಾಜಪೇಟೆ ಪುರಸಭೆ ಕಚೇರಿ ಹಾಗೂ ಪೊನ್ನಂಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ತುಮಕೂರು ವರದಿ

ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ತುಮಕೂರಿನ ಜೂನಿಯರ್ ಕಾಲೇಜಿನ 4 ಮತಗಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ರಾತ್ರಿ ಸುರಿದ ಮಳೆಯಿಂದ ಕೆಸರುಗದ್ದೆಯಂತಾಗಿದೆ.

ರಸ್ತೆಯಲ್ಲಿ ನೀರು ನಿಂತಿದ್ದು, ಮತಗಟ್ಟೆಗೆ ತೆರಳಲು ಮತದಾರರು ಪರದಾಡಿದರು.

ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿ ನಿಂತಿದ್ದ ನೀರು ಹೊರ ಹಾಕಿದರು. ಮತ ಹಾಕಲು ಬಂದ ಶಿಕ್ಷಕರು ರಸ್ತೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ 5 ಮತಗಟ್ಟೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ 16 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 4,967 ಪುರುಷರು, 2,758 ಮಹಿಳೆಯರು ಸೇರಿದಂತೆ ಒಟ್ಟು 7,725 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಮತಗಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬೀದರ್‌ ವರದಿ

ಈಶಾನ್ಯ ಪದವೀಧರ ಕ್ಷೇತ್ರದ‌ ಚುನಾವಣೆಗೆ ಬೀದರ್ ಜಿಲ್ಲೆಯಲ್ಲಿ ಚುರುಕಿನಿಂದ ಮತದಾನ ನಡೆಯುತ್ತಿದೆ.

ಬೆಳಿಗ್ಗೆ ಮಳೆಯಿದ್ದ ಕಾರಣ ಮತದಾನ ಮಂದಗತಿಯಲ್ಲಿತ್ತು. ಮಳೆ ನಿಂತ ನಂತರ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಮತ ಹಾಕುತ್ತಿದ್ದಾರೆ. ಮತಗಟ್ಟೆ ಕೇಂದ್ರಗಳ ಎದುರು ವಿವಿಧ ರಾಜಕೀಯ ಪಕ್ಷಗಳವರು ಶಾಮಿಯಾನ ಹಾಕಿ ಮತದಾರರಿಗೆ ಮತಗಟ್ಟೆ ಸಂಖ್ಯೆ ವಿವರ ನೀಡುತ್ತಿದ್ದಾರೆ.

ಹೆಚ್ಚಿನ ಮತದಾರರಿಗೆ ಮೆಸೇಜ್ ಬರದ ಕಾರಣ ಯಾವ ಬೂತ್‌ಗಳಲ್ಲಿ ಮತದಾನ ಮಾಡಬೇಕೆಂಬ ಗೊಂದಲಕ್ಕೆ ಒಳಗಾಗಿದ್ದಾರೆ.

ರಾಯಚೂರು ವರದಿ

ಕವಿತಾಳ ಸಮೀಪದ ಹಾಲಾಪುರ ಗ್ರಾಮದಲ್ಲಿನ ಮತಗಟ್ಟೆಯನ್ನು ಕೊನೆ ಕ್ಷಣದಲ್ಲಿ ಬದಲಿಸಿದ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಬಂದ ಮತದಾರರು ಪರದಾಡುವಂತಾಯಿತು.

ಈಶಾನ್ಯ ಪದವೀಧರ ಮತ ಕ್ಷೇತ್ರದ ಮಸ್ಕಿ ತಾಲ್ಲೂಕಿನ ಹಾಲಾಪುರ ಮತ್ತು ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಅಂದಾಜು 276 ಮತದಾರರಿಗೆ ಹಾಲಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಿರುವುದಾಗಿ ಮಾಹಿತಿ ನೀಡಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಕಚೇರಿ ಮೇಲಿನ ಮಹಡಿಯಲ್ಲಿರುವ ಕಾರಣ ಮತದಾರರಿಗೆ ತೊಂದೆಯಾಗುತ್ತದೆ ಎಂದು ಅಲ್ಲಿಂದ ಅಂದಾಜು 1.5 ಕಿ.ಮೀ ದೂರದ ಜೋಳದರಾಶಿ ಕ್ಯಾಂಪಿನ ಕೂಸಿನ ಮನೆಗೆ ಮತಗಟ್ಟೆ ಸ್ಥಳಾಂತರ ಮಾಡಲಾಗಿದೆ, ಈ ಬಗ್ಗೆ ಮಾಹಿತಿ ಇಲ್ಲದ ಮತದಾರರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಅದಕ್ಕೆ ಬೀಗ ಹಾಕಲಾಗಿತ್ತು ಸ್ಥಳೀಯರಿಂದ ಮಾಹಿತಿ ಪಡೆದ ಮತದಾರರು ಜೋಳದರಾಶಿ ಕ್ಯಾಂಪ್ ನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಮತಗಟ್ಟೆ ಸ್ಥಳಾಂತರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಹೀಗಾಗಿ ಹಳ್ಳಿಗಳಿಂದ ಬಂದು ಅಲೆಯುವಂತಾಯಿತು ಎಂದು ಮತದಾರರು ಚುನಾವಣಾ ಅಧಿಕಾರಿಯ ಜತೆ ವಾಗ್ವಾದ ಮಾಡಿದರು.

ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಸೆಕ್ಟರ್ ಅಧಿಕಾರಿ ಸತ್ಯನಾರಾಯಣ ತಹಶೀಲ್ದಾರರ ಜತೆ ಮಾತನಾಡುವಂತೆ ಮತದಾರರಿಗೆ ಸೂಚಿಸಿದರು ಆದರೆ ಅದಕ್ಕೆ ಒಪ್ಪದ ಮತದಾರರು ತಹಶೀಲ್ದಾರರ ಜತೆ ಮಾತನಾಡುವಂತೆ ಅಧಿಕಾರಿಗೆ ತಾಕೀತು ಮಾಡಿದರು.

ಮೇಲಿನ ಮಹಡಿಯಲ್ಲಿರುವ ಕಾರಣ ಮತಗಟ್ಟೆಯನ್ನು ಕೊನೆ ಕ್ಷಣದಲ್ಲಿ ಬದಲಿಸಲಾಗಿದೆ ಎಂದು ತಹಶೀಲ್ದಾರರಾದ ಸುಧಾ ಅರಮನೆ ತಿಳಿಸಿದರು.

ಕೊಪ್ಪಳದಲ್ಲಿ ಶೇ. 30.98ರಷ್ಟು ಮತದಾನ

ಕೊಪ್ಪಳದಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ. 30.98ರಷ್ಟು ಮತದಾನವಾಗಿದೆ.

ನಿಧಾನವಾಗಿ ಮತದಾನ ಚುರುಕು ಪಡೆದುಕೊಳ್ಳುತ್ತಿದ್ದು, ಮತದಾನ ಆರಂಭವಾದ ಮೊದಲ ಎರಡು ಗಂಟೆ ಅಂತ್ಯಕ್ಕೆ ಶೇ. 8.72ರಷ್ಟು ಮತದಾನವಾಗಿತ್ತು.

ಮಧ್ಯಾಹ್ನ 2 ಗಂಟೆ ವೇಳೆಗಿನ ಮತದಾನದವಿವರ

ಕರ್ನಾಟಕ ವಿಧಾನ ಪರಿಷತ್‌ನ ಆರು ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಮತದಾನದ ಪ್ರಮಾಣ ಹೀಗಿದೆ

ಕ್ಷೇತ್ರಶೇಕಡವಾರು ಮತದಾನ
ಈಶಾನ್ಯ ಪದವೀಧರ45
ವಾಯವ್ಯ ಪದವೀಧರ54.39
ಬೆಂ‌ಗಳೂರು ಪದವೀಧರ44.34
ಆಗ್ನೇಯ ಶಿಕ್ಷಕರ57.86
ನೈರುತ್ಯ ಶಿಕ್ಷಕರ60.51
ದಕ್ಷಿಣ ಶಿಕ್ಷಕರ64.64

ಆಗ್ನೇಯ ಶಿಕ್ಷಕರ ಕ್ಷೇತ್ರ: ಕೋಲಾರದಲ್ಲಿ ಶೇ 95.82 ಮತದಾನ

ಕೋಲಾರ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸೋಮವಾರ ನಡೆದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಶೇ 95.82ರಷ್ಟು ಮತದಾನವಾಗಿದೆ.

ಜಿಲ್ಲೆಯ ಆರು ತಾಲ್ಲೂಕಿನ ಏಳು ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಶಾಂತಿಯುವಾಗಿ ಮತದಾನ ನಡೆಯಿತು.

ಜಿಲ್ಲೆಯಲ್ಲಿ 2,392 ಪುರುಷರು, 2,158 ಮಹಿಳೆಯರು ಸೇರಿದಂತೆ ಒಟ್ಟು 4,550 ಶಿಕ್ಷಕ ಮತದಾರರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 2,297 ಪುರುಷರು, 2,063 ಮಹಿಳೆಯರು ಸೇರಿದಂತೆ ಒಟ್ಟು 4,360 ಮಂದಿ ಮತದಾನ ಮಾಡಿದರು.

ಮಾಲೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 98.29ರಷ್ಟು ಮತದಾನವಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಅತಿ ಕಡಿಮೆ (ಶೇ 92.95) ಮತದಾನ ನಡೆದಿದೆ.

ಈಶಾನ್ಯ ಪದವೀಧರ ಕ್ಷೇತ್ರ: ಬೀದರ್‌ನಲ್ಲಿ ಶೇ69.75ರಷ್ಟು ಮತದಾನ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಶೇ 69.75ರಷ್ಟು ಮತದಾನವಾಗಿದೆ.

ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಒಟ್ಟು 33 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಿಗ್ಗೆ ಮಳೆ ಸುರಿದ ಕಾರಣ ಮತದಾನ ಮಂದಗತಿಯಲ್ಲಿ ಆರಂಭಗೊಂಡಿತು. ಹತ್ತು ಗಂಟೆಯಿಂದ ಸಂಜೆ 4ರ ವರೆಗೆ ಚುರುಕಿನಿಂದ ಮತದಾನ ನಡೆಯಿತು. ಉದ್ದನೆಯ ಸಾಲುಗಳಲ್ಲಿ ನಿಂತು ಪದವೀಧರರು ಹಕ್ಕು ಚಲಾಯಿಸಿದರು.

ಮತದಾನ ಮಕ್ತಾಯ

ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ನಡೆದ ಮತದಾನ ಅಂತ್ಯವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಿತು. ಎಲ್ಲೆಡೆ ಮತದಾನ ಶಾಂತಿಯುತವಾಗಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.