ಚಾಮರಾಜನಗರ: ‘ಸಮಾಜದ ಸಾಮರಸ್ಯ ಕೆಡಿಸುವ ಸಂಘಟನೆಗಳನ್ನು ನಿಷೇಧಿಸುವುದು ನಮ್ಮ ಬದ್ಧತೆ. ಹಿಂದೂ ಸಿದ್ಧಾಂತದ ವಿರೋಧಿ ಯಾವುದಾದರೂ ಇದ್ದರೆ ಅದು ಬಿಜೆಪಿ. ಬಿಜೆಪಿಯವರು ರಾಮನ ಆದರ್ಶಗಳನ್ನು ಪಾಲಿಸಬೇಕಿತ್ತು. ಪ್ರಧಾನಿ ಮೋದಿ ಅವರು ಪತ್ನಿಯನ್ನು ಎಲ್ಲಿ ಬಿಟ್ಟಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಗುರುವಾರ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧದ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜಾತಿ ರಹಿತ, ಶೋಷಣೆ ರಹಿತ, ಸಮ ಸಮಾಜಕಟ್ಟುವ ಬದ್ಧತೆ ಇದ್ದರೆ ರಾಮಾಯಣ ಓದಬೇಕು. ಎಷ್ಟು ಜನ ರಾಮಾಯಣ ಓದಿದ್ದೀರಿ? ಮೋದಿ ಓದಿದ್ದಾರಾ? ರಾಮಾಯಣ ನಡೆದಿದ್ದು ಸೀತೆಗಾಗಿ ಅಲ್ಲವೇ? ಪ್ರಧಾನಿ ಮೋದಿ ಸೇರಿದಂತೆ ಆಧುನಿಕ ರಾಮಭಕ್ತರಿಗೆ ಕೇಳುತ್ತೇನೆ... ಅವರು ಶ್ರೀಮತಿಯವರನ್ನು ಎಲ್ಲಿ ಬಿಟ್ಟಿದ್ದಾರೆ? ಅವರಿಗೆ ನಿರ್ವಹಣಾ ವೆಚ್ಚ ಏನಾದರೂ ಕೊಡುತ್ತಿದ್ದೀರಾ? ಅವರು ಪ್ರತಿವರ್ಷ ಅಂಜನಾದ್ರಿ ಹಂಪಿಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಆಕೆಗೆ ಕೈ ಎತ್ತಿ ನಮಸ್ಕಾರ ಮಾಡುತ್ತೇನೆ’ ಎಂದರು.
‘ರಾಜ್ಯದಲ್ಲಿ ಸರ್ವ ಧರ್ಮದ ಶಾಂತಿಯ ತೋಟವನ್ನು ನಿರ್ಮಾಣ ಮಾಡುವುದು ನಮ್ಮ ಉದ್ದೇಶ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಸಂದೇಶ ರವಾನಿಸುವ ಉದ್ದೇಶದಿಂದ ಪಕ್ಷದ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಸೇರಿಸಲಾಗಿದೆ’ ಎಂದು ಉಗ್ರಪ್ಪ ಸಮರ್ಥಿಸಿಕೊಂಡರು.
ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ‘ಪ್ರಧಾನಿ ಮೋದಿ ಸಹಿತ ಬಿಜೆಪಿಯರು ಪ್ರಚಾರದ ಸಂದರ್ಭದಲ್ಲಿ ಆಂಜನೇಯನ ಹೆಸರು ಪ್ರಸ್ತಾಪಿಸಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಯಾವ ದೇವರ ಹೆಸರನ್ನು ಹೇಳುವುದಕ್ಕೆ ಅವಕಾಶ ಇಲ್ಲ. ಚುನಾವಣಾ ಆಯೋಗ ಇದನ್ನು ಗಮನಿಸಿ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
‘ಮೋದಿಯವರು ಇತ್ತೀಚೆಗೆ ವರ್ಚುವಲ್ ಮೂಲಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ಇದಕ್ಕೆ ಅನುಮತಿ ಪಡೆದಿರಲಿಲ್ಲ. ಚುನಾವಣಾ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುತ್ತಿದ್ದರೂ ಆಯೋಗದ ಅನುಮತಿ ಪಡೆಯಬೇಕು. ರಾಜ್ಯದ 50 ಸಾವಿರ ಕಡೆಗಳಲ್ಲಿ ಈ ಕಾರ್ಯಕ್ರಮ ವೀಕ್ಷಿಸಲಾಗಿದೆ. ಪ್ರತಿಯೊಂದು ಕಡೆಗಳಲ್ಲೂ ಸ್ಥಳೀಯವಾಗಿ ಅನುಮತಿ ಪಡೆಯಬೇಕು. ಅಲ್ಲದೆ ಈ ಕಾರ್ಯಕ್ರಮದ ವೆಚ್ಚವನ್ನು ಅಭ್ಯರ್ಥಿಗಳ ವೆಚ್ಚಕ್ಕೂ ಸೇರಿಸಬೇಕು. ಆದರೆ, ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಇದೆಲ್ಲ ನೋಡುತ್ತಿದ್ದರೆ, ಆಯೋಗವೂ ಕೇಂದ್ರ ಸರ್ಕಾರದ ಕೈಗೊಂಬೆಯೇ ಎಂಬ ಅನುಮಾನ ಮೂಡುತ್ತದೆ’ ಎಂದು ಉಗ್ರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.