ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ ಬಹದ್ದೂರ್ ಬಂಡಿ ಗ್ರಾಮದಲ್ಲಿ ಪ್ರಚಾರ ನಡೆಸುವ ವೇಳೆ ಗ್ರಾಮದ ಕೆಲ ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ. ’ಹತ್ತು ವರ್ಷ ಶಾಸಕರಾಗಿದ್ದರೂ ನಮಗೆ ಏನು ಸೌಲಭ್ಯಗಳನ್ನು ಕಲ್ಪಿಸಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ವಿಡಿಯೊಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ’ಬಹದ್ದೂರ್ ಬಂಡಿಯಲ್ಲಿ ಸರಿಯಾಗಿ ಒಂದು ಚರಂಡಿ ಸೌಲಭ್ಯ ಕಲ್ಪಿಸಿಲ್ಲ. ಕುಡಿಯಲು ನೀರಿಲ್ಲ, ಬೇಸಿಗೆಯಿಂದಾಗಿ ಜನ ಪರದಾಡುವಂತಾಗಿದೆ. ಓಡಾಡಲು ಸರಿಯಾಗಿ ರಸ್ತೆಗಳಿಲ್ಲ. ನಮ್ಮ ಗ್ರಾಮಕ್ಕೆ ಯಾಕೆ ಬಂದಿದ್ದೀರಿ. ಚುನಾವಣಾ ಸಮಯದಲ್ಲಿ ಮತ ಕೇಳಲು ಮಾತ್ರ ಬರುತ್ತೀರಾ’ ಎಂದು ತರಾಟೆಗೆ ತೆಗೆದುಕೊಂಡ ಮಾಹಿತಿ ವಿಡಿಯೊದಲ್ಲಿದೆ.
ಹಿಟ್ನಾಳ ವಿರುದ್ಧ ಕಾರು ಸುತ್ತುವರೆದು ಅವ್ಯವಸ್ಥೆಯಿಂದ ಕೂಡಿದ್ದ ಚರಂಡಿಯನ್ನು ತೋರಿಸಿ ’ಚರಂಡಿ ಅಭಿವೃದ್ಧಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಏನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.
ಬಿಜೆಪಿ ಸಾಧನೆ ಶೂನ್ಯ: ಭಾನುವಾರ ಗೊಂಡಬಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಾಲವರ್ತಿ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಹಿರೇಕಾಸನಕಂಡಿ ಮತ್ತು ಅಲ್ಲಾನಗರ ಗ್ರಾಮಗಳಲ್ಲಿ ಪ್ರಚಾರ ಮಾಡಿದ ಹಿಟ್ನಾಳ ’ಬಿಜೆಪಿ ಸಾಧನೆ ಶೂನ್ಯವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರ ಏಳಿಗೆ ಸಾಧ್ಯ’ ಎಂದರು.
‘ಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆಯನ್ನು ಸಿದ್ದರಾಮಯ್ಯ ಅವರಿಂದ ಹಠಕ್ಕೆ ಬಿದ್ದು ಜಾರಿಗೊಳಿಸಿ ₹188 ಕೋಟಿ ಅನುದಾನ ಮೀಸಲಿಟ್ಟಿದ್ದೆವು. ಆದರೆ, ತಾರತಮ್ಯ ಮಾಡಿ ಬಿಜೆಪಿ ಸರ್ಕಾರ ಅನುದಾನ ನೀಡಲಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.