ತುಮಕೂರು: ‘ಜೆಡಿಎಸ್ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಇತರೆ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಿರುವುದು ಸೇರಿದಂತೆ ದೇಶದಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಅವರ ಕುತಂತ್ರ ಬುದ್ಧಿಯಿಂದಾಗಿ ಕಾಂಗ್ರೆಸ್‌ಗೆ ಇಂತಹ ದುಃಸ್ಥಿತಿ ಬಂದಿದೆ. ಪಕ್ಷ ಹೀನಾಯ ಸ್ಥಿತಿಯಲ್ಲಿ ಇದ್ದರೂ ಜೆಡಿಎಸ್ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೆ. ಬಲವಂತವಾಗಿ ಕರೆತಂದು ತುಮಕೂರು ಕ್ಷೇತ್ರದಿಂದ ನಿಲ್ಲುವಂತೆ ಮಾಡಿ ಸೋಲಿಸಿದರು. ಮೈಸೂರು ಕ್ಷೇತ್ರದ ಟಿಕೆಟ್‌ಗಾಗಿ ನನ್ನನ್ನು ನಿಲ್ಲುವಂತೆ ಮಾಡಿದರು. ಸಚಿವ ಕೆ.ಎನ್.ರಾಜಣ್ಣ ಜತೆಗೆ ಸೇರಿಕೊಂಡು ರಾತ್ರಿ ಒಂದು ಗಂಟೆವರೆಗೂ ಸಭೆ ನಡೆಸಿ, ಪಿತೂರಿ ಮಾಡಿ ಸೋಲಿಸಲು ಕಾರಣಕರ್ತರಾಗಿದ್ದೀರಿ’ ಎಂದು ಆರೋಪಿಸಿದರು.
‘ವಾಲ್ಮೀಕಿ ಸಮುದಾಯಕ್ಕೆ ನಾನು ಮಾಡಿದ ಸೇವೆ ಸ್ಮರಿಸುವುದಾದರೆ ಯಾವುದೇ ಕಾರಣಕ್ಕೂ ಕೆ.ಎನ್.ರಾಜಣ್ಣ ಅವರನ್ನು ನಂಬಬಾರದು. ಅವರು ನಂಬಿಕೆ, ವಿಶ್ವಾಸಕ್ಕೆ ಅರ್ಹರಲ್ಲ’ ಎಂದು ಮನವಿ ಮಾಡಿದರು.
‘ನಮ್ಮ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಅಭ್ಯರ್ಥಿಗಳೇ ಇರಲಿಲ್ಲ. ಯಾವ ಸಚಿವರೂ ಸ್ಪರ್ಧಿಸುವುದಾಗಿ ಹೇಳಲಿಲ್ಲ. ಕಾಂಗ್ರೆಸ್ ಇಂತಹ ಸ್ಥಿತಿಯಲ್ಲಿ ಇರಬೇಕಾದರೆ ನನ್ನ ಮೇಲೆ ಇಲ್ಲಸಲ್ಲದ ಆಪಾದನೆ ಮಾಡುತ್ತಿದ್ದಾರೆ. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರು ಎನ್ನುತ್ತಿದ್ದಾರೆ. ಅದಕ್ಕೆ ಯಾರು ಕಾರಣ. ನಮ್ಮ ಮೈತ್ರಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
ಬಿಜೆಪಿ ಜತೆಗೆ ಮಾಡಿಕೊಂಡಿರುವ ಮೈತ್ರಿ ಲೋಕಸಭೆ ಚುನಾವಣೆಯ ನಂತರವೂ ಮುಂದುವರಿಯಲಿದೆ ಎಂದರು.
‘ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಕೊಡಿಸಲಾಗುವುದು’ ಎಂದು ಎಚ್.ಡಿ.ದೇವೇಗೌಡ ಭರವಸೆ ನೀಡಿದರು.
‘ಗೊಲ್ಲರಿಗೆ ಮೀಸಲಾತಿ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ಕೊಟ್ಟ ಮಾತು ತಪ್ಪುವುದಿಲ್ಲ. ಅವರ ಮನೆ ಬಾಗಿಲಿಗೆ ಮೀಸಲಾತಿ ತಲುಪಿಸುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.