ಚೆನ್ನೈ: ‘ಡಿಎಂಕೆ ಮುಖ್ಯಸ್ಥರಾಗಿದ್ದ ದಿವಂಗತ ಎಂ. ಕರುಣಾನಿಧಿ ಅವರನ್ನು ಅವರ ಪುತ್ರ ಎಂ.ಕೆ. ಸ್ಟಾಲಿನ್ ಗೃಹಬಂಧನದಲ್ಲಿರಿಸಿದ್ದರು’ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
‘ಕರುಣಾನಿಧಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ. ಕರುಣಾನಿಧಿ ಆರೋಗ್ಯ ಸುಧಾರಿಸಬಾರದು ಎನ್ನುವ ಉದ್ದೇಶ ಸ್ಟಾಲಿನ್ ಅವರಿಗಿತ್ತು. ಆರೋಗ್ಯ ಸುಧಾರಿಸಿದರೆ ತಾನು ಪಕ್ಷದ ಅಧ್ಯಕ್ಷನಾಗಲು ಸಾಧ್ಯವಿಲ್ಲ ಎಂದು ಕರುಣಾನಿಧಿ ಅವರನ್ನು ಗೃಹಬಂಧನದಲ್ಲಿರಿಸಿದ್ದರು’ ಎಂದು ಆರೋಪಿಸಿದ್ದಾರೆ.
‘ಕರುಣಾನಿಧಿ ಅವರನ್ನು ವಿದೇಶಕ್ಕೆ ಕರೆದೊಯ್ದು ಉತ್ತಮ ಚಿಕಿತ್ಸೆ ನೀಡಿದ್ದರೆ ಈ ವಿಷಯ ಬಹಿರಂಗವಾಗುತ್ತಿತ್ತು. ಆದರೆ, ಸ್ವಾರ್ಥಕ್ಕಾಗಿ ಸ್ಟಾಲಿನ್ ತನ್ನ ತಂದೆಗೆ ಇಂತಹ ಪರಿಸ್ಥಿತಿ ತಂದಿಟ್ಟರು’ ಎಂದು ದೂರಿದ್ದಾರೆ.
ಕರುಣಾನಿಧಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಎಐಡಿಎಂಕೆ ಸರ್ಕಾರ ತನಿಖೆ ನಡೆಸುವ ಸೂಚನೆಯನ್ನು ಅವರು ನೀಡಿದ್ದಾರೆ.
ಡಿಎಂಕೆ ಅಧಿಕಾರಕ್ಕೆ ಬಂದರೆ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಟಾಲಿನ್ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪಳನಿಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.