ADVERTISEMENT

ಸಂಸತ್‌ ಆವರಣದಲ್ಲಿ ಬಾಲಿವುಡ್‌ ರಂಗು

ಸಿನೆಮಾ ತಾರೆಯರ ರಾಜಕಾರಣ: ಕೆಲವರಿಗಷ್ಟೇ ಯಶಸ್ಸು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 19:26 IST
Last Updated 29 ಮಾರ್ಚ್ 2019, 19:26 IST
ಸುನಿಲ್‌ ದತ್‌
ಸುನಿಲ್‌ ದತ್‌   

ಮುಂಬೈ: ಬಾಲಿವುಡ್‌ ಎಂದೇ ಕರೆಯಲಾಗುವ ಹಿಂದಿ ಸಿನಿಮಾ ರಂಗದ ಮೇಲೆಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಗಮನ ಇದೆ. ಬಾಲಿವುಡ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಇರುತ್ತದೆ. ಯಾರ ಪರವಾಗಿ ಯಾರು ಪ್ರಚಾರ ನಡೆಸುತ್ತಾರೆ ಎಂಬ ಕಾತರವೂ ಇರುತ್ತದೆ.

ಬಾಲಿವುಡ್‌ ತಾರೆಯರಾದ ಸುನಿಲ್‌ ದತ್‌ (ಕಾಂಗ್ರೆಸ್‌), ವಿನೋದ್‌ ಖನ್ನಾ (ಬಿಜೆಪಿ), ರಾಜ್‌ಬಬ್ಬರ್‌ (ಜನತಾ ದಳ, ಎಸ್‌ಪಿ ಮತ್ತು ಈಗ ಕಾಂಗ್ರೆಸ್‌) ಮತ್ತು ಶತ್ರುಘ್ನ ಸಿನ್ಹಾ (ಬಿಜೆಪಿ ಬಿಟ್ಟು ಇನ್ನೇನು ಕಾಂಗ್ರೆಸ್ ಸೇರಲಿದ್ದಾರೆ) ರಾಜಕಾರಣದಲ್ಲಿ ದೊಡ್ಡ ಯಶಸ್ಸು ಗಳಿಸಿದ ಕೆಲವರು. ಬಾಲಿವುಡ್‌ ಸೂಪರ್‌ಸ್ಟಾರ್‌ಗಳಾದ ಅಮಿತಾಭ್‌ ಬಚ್ಚನ್‌, ರಾಜೇಶ್‌ ಖನ್ನಾ, ಧರ್ಮೇಂದ್ರ ಮತ್ತು ಗೋವಿಂದ ಅವರೂ ಒಂದೊಂದು ಅವಧಿಗೆ ಸಂಸತ್‌ ಸದಸ್ಯರಾಗಿದ್ದರು. ಅದಾದ ಬಳಿಕ ಇವರೆಲ್ಲರೂ ರಾಜಕಾರಣದಿಂದ ದೂರ ಸರಿದಿದ್ದಾರೆ.

‘ಬಾಲಿವುಡ್‌ಗೆ ರಾಜಕಾರಣದ ಬಗ್ಗೆ ಒಂದು ನಿಲುವು ಇದೆ. ಆದರೆ, ಬಾಲಿವುಡ್‌ನಿಂದ ಬಂದು ರಾಜಕಾರಣದಲ್ಲಿ ದೊಡ್ಡ ಯಶಸ್ಸು ಗಳಿಸಿದವರು ಐದಾರು ಮಂದಿ ಮಾತ್ರ. ನಟರಲ್ಲಿ ಸುನಿಲ್‌ ದತ್‌, ರಾಜ್‌ಬಬ್ಬರ್‌, ಶತ್ರುಘ್ನ ಸಿನ್ಹಾ, ವಿನೋದ್‌ ಖನ್ನಾ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ನಟಿಯರಲ್ಲಿ ಜಯಾ ಬಚ್ಚನ್‌, ಜಯಪ್ರದಾ ಮತ್ತು ಹೇಮಾಮಾಲಿನಿ ಛಾಪು ಮೂಡಿಸಿದ್ದಾರೆ’ ಎಂದು ಪತ್ರಕರ್ತ ಹಾಗೂ ಇತಿಹಾಸಕಾರ ಸುಮಂತ್‌ ಮಿಶ್ರಾ ಹೇಳುತ್ತಾರೆ.

ADVERTISEMENT

ನೆಹರೂ–ಗಾಂಧಿ ಕುಟುಂಬದ ಆಪ್ತರಾಗಿದ್ದ ಸುನಿಲ್‌ ದತ್‌ ಅವರು ಮುಂಬೈ ವಾಯವ್ಯ ಕ್ಷೇತ್ರವನ್ನು ಸಂಸತ್ತಿನಲ್ಲಿ ಐದು ಬಾರಿ ಪ್ರತಿನಿಧಿಸಿದ್ದಾರೆ. ಬಾಲಿವುಡ್‌ನ ಮಟ್ಟಿಗೆ ಇದು ದಾಖಲೆ. ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಅವರು ಸಚಿವರೂ ಆಗಿದ್ದರು. ಅವರ ಮಗ ಸಂಜಯ್‌ ದತ್‌ 1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ಸುನಿಲ್‌ ಅವರು ರಾಜಕೀಯ ಬಿಕ್ಕಟ್ಟು ಎದುರಿಸಬೇಕಾಗಿ ಬಂದಿತ್ತು. ಸುನಿಲ್‌ ಮಗಳು ಪ್ರಿಯಾ ದತ್ ಎರಡು ಬಾರಿ ಸಂಸದೆಯಾಗಿದ್ದಾರೆ. ಈ ಬಾರಿ ಸ್ಪರ್ಧಿಸುತ್ತಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಶತ್ರುಘ್ನ ಮತ್ತು ಖನ್ನಾ ಅವರು ಸಚಿವರಾಗಿದ್ದರು.

ರಾಜ್‌ಬಬ್ಬರ್‌ ಮೊದಲು ಜನತಾದಳದಲ್ಲಿದ್ದರು. ಬಳಿಕ, ಎಸ್‌ಪಿ ಸೇರಿದರು. 2006ರಿಂದ ಅವರು ಕಾಂಗ್ರೆಸ್‌ನಲ್ಲಿದ್ದಾರೆ.

ಜಯಾಬಚ್ಚನ್‌ ಅವರು ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಜಯಪ್ರದಾ ಅವರು ಲೋಕಸಭೆ ಸದಸ್ಯೆಯಾಗಿದ್ದರು. ತೆಲುಗು ದೇಶಂ ಪಾರ್ಟಿ ಮೂಲಕ ರಾಜಕಾರಣ ಆರಂಭಿಸಿದ ಅವರು ಎಸ್‌ಪಿ, ಆರ್‌ಎಲ್‌ಡಿ ಬಳಿಕ ಈಗ ಬಿಜೆಪಿ ಸೇರಿದ್ದಾರೆ.

ದಕ್ಷಿಣದಲ್ಲೇ ಹೆಚ್ಚು

ದಕ್ಷಿಣ ಭಾರತದಲ್ಲಿ ಸಿನಿಮಾ ತಾರೆಯರು ರಾಜ್ಯಗಳ ಮುಖ್ಯಮಂತ್ರಿಗಳೇ ಆಗಿದ್ದಾರೆ. ರಾಜಕೀಯ ಪಕ್ಷಗಳನ್ನು ಕಟ್ಟಿದ್ದಾರೆ. ಪ್ರಶ್ನಾತೀತ ನಾಯಕರಾಗಿ ಬೆಳೆದಿದ್ದಾರೆ. ಎಂ.ಜಿ. ರಾಮಚಂದ್ರನ್‌, ಎಂ.ಕರುಣಾನಿಧಿ, ಜೆ.ಜಯಲಲಿತಾ ಮತ್ತು ಎನ್‌.ಟಿ. ರಾಮರಾವ್‌ ಅವರು ಈ ಸಾಲಿಗೆ ಸೇರುತ್ತಾರೆ. ಈಗ, ಜನಪ್ರಿಯ ನಟರಾದ ಕಮಲ್‌ಹಾಸನ್‌, ರಜನಿಕಾಂತ್‌, ಚಿರಂಜೀವಿ ಮುಂತಾದವರು ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಇರಿಸಿಕೊಂಡಿದ್ದಾರೆ.

ದೇವಾನಂದ್‌ ಮೊದಲಿಗ

ಹಿಂದಿ ಸಿನಿಮಾ ಕ್ಷೇತ್ರದಿಂದ ರಾಜಕಾರಣಕ್ಕೆ ಪ್ರವೇಶಿದ ಮೊದಲಿಗ ‘ಎವರ್‌ಗ್ರೀನ್‌ ಹೀರೊ’ ದೇವಾನಂದ್‌. ಇವರು ನ್ಯಾಷನಲ್‌ ಪಾರ್ಟಿ ಆಫ್‌ ಇಂಡಿಯಾ ಎಂಬ ಪಕ್ಷ ಸ್ಥಾಪಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪಕ್ಷ ಸ್ಥಾಪನೆಯಾಗಿತ್ತು. ಇದು ಮುಖ್ಯವಾಹಿನಿ ರಾಜಕಾರಣದಲ್ಲಿ ದೊಡ್ಡ ಪರಿಣಾಮ ಉಂಟು ಮಾಡದೆಯೇ ಮರೆಯಾಗಿ ಹೋಯಿತು.

16ನೇ ಲೋಕಸಭೆ ಸದಸ್ಯರಾಗಿರುವ ಬಣ್ಣದ ಮಂದಿ:ಶತ್ರುಘ್ನ ಸಿನ್ಹಾ, ಕಿರಣ್‌ ಖೇರ್‌, ಪರೇಶ್‌ ರಾವಲ್‌, ಮೂನ್‌ಮೂನ್‌ ಸೆನ್‌, ಬಾಬುಲ್‌ ಸುಪ್ರಿಯೊ

ರಾಜ್ಯಸಭೆಗೆ ನಾಮಕರಣಗೊಂಡ ಪ್ರಮುಖರು:ಪೃಥ್ವಿರಾಜ್‌ ಕಪೂರ್‌, ರಾಜ್‌ ಕಪೂರ್‌, ನರ್ಗಿಸ್‌, ದಿಲೀಪ್‌ ಕುಮಾರ್‌, ರೇಖಾ, ಲತಾ ಮಂಗೇಶ್ಕರ್‌, ಶಬಾನಾ ಅಜ್ಮಿ, ಜಾವೇದ್‌ ಅಖ್ತರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.