ಬಳ್ಳಾರಿ: ‘ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರನ್ನು 1ಲಕ್ಷ ಮತದ ಅಂತರದಲ್ಲಿ ಗೆಲ್ಲಿಸಿಕೊಳ್ಳುತ್ತೇವೆ' ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು ಭವಿಷ್ಯ ನುಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಗೆಲುವಿಗಾಗಿ ಎಲ್ಲರೂ ಸಿದ್ಧರಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತೇವೆ’ ಎಂದು ತಿಳಿಸಿದರು.
‘ಏಪ್ರಿಲ್ 1ರಂದು ದೇವೇಂದ್ರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ದೊಡ್ಡ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುವುದು.ಅಭ್ಯರ್ಥಿಯಾಗಿ ದೇವೇಂದ್ರಪ್ಪ ಅವರ ಆಯ್ಕೆ ಮುಖಂಡರ ಒಮ್ಮತದ ತೀರ್ಮಾನ. ಅಧಿಕಾರ ಧ್ರುವೀಕರಣ ಆಗಲೇಬೇಕು’ಎಂದು ಹೇಳಿದರು.
ಉಪಚುನಾವಣೆಯಲ್ಲಿ 2.41 ಲಕ್ಷ ಮತಗಳ ಅಂತರದಲ್ಲಿ ಪಕ್ಷ ಸೋತಿದೆ ನಿಜ. ಆ ಪರಿಸ್ಥಿತಿ ಬೇರೆ. ಆದರೆ ಕ್ಷೇತ್ರದಲ್ಲಿ ಮೊದಲಿಂದಲೂ ಪಕ್ಷ ಗೆದ್ದಿದೆ ಎಂದು ಪ್ರತಿಪಾದಿಸಿದರು.
‘ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಇದ್ದ ಹಳೇ ಬಳ್ಳಾರಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ನಾನು ಬಳ್ಳಾರಿ ಜಿಲ್ಲೆಯ ಮನೆ ಮಗ’ ಎಂದು ಅಭ್ಯರ್ಥಿ ವೈ.ದೇವೇಂದ್ರಪ್ಪ ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಚುನಾವಣೆ ಸಂದರ್ಭದಲ್ಲೇ ಬಿಡಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವ ಋಣ ಯಾವಾಗ ಹರಿಯುತ್ತದೋ ಗೊತ್ತಿಲ್ಲ’ಎಂದರು.
ಪತ್ನಿ ಕಾಂಗ್ರೆಸ್‌ನಲ್ಲಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಈಗ ಬಿಜೆಪಿ ಸೇರಿರುವ ನೀವು ಅವರಿಂದ ರಾಜೀನಾಮೆ ಕೊಡಿಸುವಿರಾ? ಎಂಬ ಪ್ರಶ್ನೆಗೆ ಅವರು, 'ಪ್ರಜಾಪ್ರಭುತ್ವದಲ್ಲಿ ಅವರ ನಿರ್ಧಾರ ಅವರು ಕೈಗೊಳ್ಳುತ್ತಾರೆ' ಎಂದರು.
ಸಂಬಂಧಿಯಾದ ಬಾಲಚಂದ್ರ ಜಾರಕಿಹೊಳಿಯವರೂ ಬಳ್ಳಾರಿಗೆ ಪ್ರಚಾರಕ್ಕೆ ಬರುತ್ತಾರೆ.ನನಗೆ ಟಿಕೆಟ್ ದೊರಕುವಲ್ಲಿ ಮಾಧ್ಯಮದವರ ಆಶೀರ್ವಾದವೂ ಇದೆ ಎಂದು ಅವರು ಹೇಳಿದಾಗ, ಗೋಷ್ಠಿಯಲ್ಲಿ ನಗೆಯ ಅಲೆ ಎದ್ದಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ಮುಖಂಡರಾದ ಎಸ್.ಪಕ್ಕೀರಪ್ಪ, ಮೃತ್ಯುಂಜಯ ಜಿನಗ, ಎಸ್. ಜೆ.ವಿ.ಮಹಿಪಾಲ್ ಇದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.