ADVERTISEMENT

ಹೈಕಮಾಂಡ್ ಆದೇಶಕ್ಕೂ ಬಗ್ಗದ ಕಾಂಗ್ರೆಸ್ ಕಾರ್ಯಕರ್ತರು

ಈಗ ಜೆಡಿಎಸ್‌ನೊಂದಿಗೆ ಪ್ರಚಾರ ಕಷ್ಟ

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:43 IST
Last Updated 2 ಮೇ 2019, 10:43 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರ ಪರವಾಗಿ ಕೆಲಸ ಮಾಡಲು ಜಿಲ್ಲೆಯ ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಪ್ಪುತ್ತಿಲ್ಲ. ಸಭೆಗಳಲ್ಲಿ ಮುಖಂಡರು ಹೈಕಮಾಂಡ್ ಆದೇಶದ ಬಗ್ಗೆ ತಿಳಿ ಹೇಳಿದರೂಕಾರ್ಯಕರ್ತರು ಬಗ್ಗುತ್ತಿಲ್ಲ. ದೇವೇಗೌಡ ಅವರು ಗೆದ್ದೆರೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಿಸುವರು. ನಾವು ಹೊಗೆ ಕುಡಿಯಬೇಕೆ ಎಂದು ಮುಖಂಡರನ್ನೇ ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮಧುಗಿರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಭೆಯಲ್ಲಿಯೂ ಇದು ಪುನರಾವರ್ತನೆ ಆಯಿತು. ‘ಎಸ್‌.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿರುವುದಕ್ಕೆ ನನಗೆ ಸಾಕಷ್ಟು ಬೇಸರ ಇದೆ. ಆದರೆ ಕೇಂದ್ರ ಮತ್ತು ರಾಜ್ಯ ನಾಯಕರು ಎಚ್.ಡಿ.ದೇವೇಗೌಡ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ. ಅದೇ ರೀತಿಯಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಏ.10 ರಂದು ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ನಡೆಸುವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು.

ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು, ‘ನೀವು ಏನೇ ಹೇಳಬಹುದು. ಪ್ರತಿ ಚುನಾವಣೆಯಲ್ಲಿ ಹಾವು–ಮುಂಗುಸಿ ರೀತಿ ಜೆಡಿಎಸ್‌ ಜೊತೆ ಕಿತ್ತಾಡಿದ್ದೇವೆ. ಈಗ ಅವರೊಂದಿಗೆ ಕೆಲಸ ಮಾಡುವುದು ಕಷ್ಟ’ ಎಂದರು.

ADVERTISEMENT

ಆಗ ರಾಜಣ್ಣ, ‘ನಾನು ಹೇಳಿದ್ದನ್ನೇ ಮಾಡಿ ಎನ್ನುತ್ತಿಲ್ಲ. ನಿರ್ಧಾರ ನಿಮಗೆ ಬಿಟ್ಟದ್ದು. ಪಕ್ಷದ ವರಿಷ್ಠರ ಸೂಚನೆಯನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ ಅಷ್ಟೇ’ ಎಂದರು. ಇತ್ತೀಚೆಗೆ ಕೊರಟಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ್ದ ಜಿ.ಪರಮೇಶ್ವರ, ‘ಮೈತ್ರಿ ಅಭ್ಯರ್ಥಿ ಬೆಂಬಲಿಸಿ. ನನ್ನ ಮರ್ಯಾದೆ ಉಳಿಸಿ’ ಎಂದು ಕಾರ್ಯಕರ್ತರನ್ನು ಗೋಗರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.