ಚಿಕ್ಕಬಳ್ಳಾಪುರ: ಹುಟ್ಟಿದಾರಭ್ಯದಿಂದಲೂ ಕಾಂಗ್ರೆಸ್ ಭದ್ರಕೋಟೆ ಎಂಬ ಹೆಗ್ಗಳಿಕೆ ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಸತತ ಗೆಲುವಿನಿಂದ ಬೀಗಿರುವ ‘ಕೈ’ ಪಾಳೆಯಕ್ಕೆ ಈ ಬಾರಿಯ ಚುನಾವಣೆ ನುಂಗಲಾರದ ಬಿಸಿತುಪ್ಪದಂತಾಗಿದೆ. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವರ್ಚಸ್ಸು ವೃದ್ಧಿಸಿಕೊಂಡಿರುವ ಬಿಜೆಪಿ ಪ್ರಸ್ತುತ ಕಾಂಗ್ರೆಸ್‌ಗೆ ಕಠಿಣ ಸವಾಲು ಒಡ್ಡಿದೆ.
ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 1977 ರಿಂದ ಈವರೆಗೆ 11 ಲೋಕಸಭೆ ಚುನಾವಣೆಗಳು ನಡೆದಿವೆ. ಈ ಪೈಕಿ 1996ರಲ್ಲಿ ಜನತಾದಳದ ಅಭ್ಯರ್ಥಿ ಆರ್.ಎಲ್.ಜಾಲಪ್ಪ ಅವರು ಗೆದ್ದಿದ್ದು ಹೊರತುಪಡಿಸಿದರೆ, ಉಳಿದಂತೆ 10 ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವಿನ ನಗೆ ಬೀರಿದ್ದಾರೆ.
ಕಳೆದು ಎರಡು (2009, 2014) ಚುನಾವಣೆಗಳಲ್ಲಿ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರು ಆಯ್ಕೆಯಾಗಿದ್ದಾರೆ. ಈ ಬಾರಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ‘ಅದೃಷ್ಟ’ ಪರೀಕ್ಷೆಗೆ ಮುಂದಾಗಿದ್ದಾರೆ. ‘ಮೈತ್ರಿ’ ಬಲದಿಂದ ಗೆಲುವಿನ ದಡ ಸೇರುವ ತವಕ ಅವರದು.
ಮೊಯಿಲಿ ಅವರ ವಿರುದ್ಧವೇ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರನ್ನೇ ಬಿಜೆಪಿ ಈ ಬಾರಿ ಪುನಃ ಕಣಕ್ಕಿಳಿಸಿದೆ. ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಅವರು ಸಿಪಿಎಂ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅವರು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಭ್ಯರ್ಥಿಗಳಾಗಿದ್ದಾರೆ. ಈ ಬಾರಿ 15 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಇಲ್ಲಿ ಈವರೆಗೆ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದೆ. ಈ ಬಾರಿ ಮೋದಿ ಅಲೆಯಿಂದ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸುವುದು ಖಚಿತ ಎಂಬ ಆಶಯ ಬಿಜೆಪಿ ಪಾಳೆಯದಲ್ಲಿ ವ್ಯಕ್ತವಾಗುತ್ತಿದೆ. ಮೈತ್ರಿ ಪಕ್ಷಗಳ ನಡುವಿನ ಸ್ಥಳೀಯ ಒಡಕಿನ ಲಾಭ ಪಡೆಯುವ ತಂತ್ರಗಾರಿಕೆ ಕೆಸರಿ ಪಾಳೆಯದಲ್ಲಿ ಚುರುಕಾಗಿ ನಡೆದಿವೆ ಎನ್ನಲಾಗಿದೆ.
ಸಂಸದ ಮೊಯಿಲಿ ಅವರು ತಮ್ಮ ಸಾಧನೆಗಳನ್ನು ಹೇಳುವಾಗ ಎತ್ತಿನಹೊಳೆ ಯೋಜನೆಯನ್ನು ಮೊದಲು ಉಚ್ಚರಿಸುತ್ತಾರೆ. ಆದರೆ, 2013ರಲ್ಲಿ ಆರಂಭಗೊಂಡ ಆ ಯೋಜನೆಯಲ್ಲಿ ಶೀಘ್ರದಲ್ಲಿ ನೀರು ಬರುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಆದರೂ, ಮೊಯಿಲಿ ಅವರು ಕಳೆದ ಆರು ವರ್ಷಗಳಿಂದ ‘ಒಂದೆರಡು ವರ್ಷಗಳಲ್ಲಿ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ’ ಎಂಬ ಹೇಳಿಕೆಯನ್ನು ನಿದ್ದೆಯಲ್ಲೂ ಕನವರಿಸುವಷ್ಟರ ಮಟ್ಟಿಗೆ ಹೇಳುತ್ತ ಬಂದಿದ್ದಾರೆ. ಹೀಗಾಗಿ, ಅವರು ಪ್ರತಿಸ್ಪರ್ಧಿಗಳ ಬಾಯಲ್ಲಿ ‘ಮಹಾನ್ ಸುಳ್ಳುಗಾರ’ನ ಪಟ್ಟ ಪಡೆದಿದ್ದಾರೆ.
ನುಡಿದಂತೆ ನಡೆದು ಎತ್ತಿನಹೊಳೆ ನೀರು ತಂದು ಕೊಡದ ಮೊಯಿಲಿ ಅವರು ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದ ಗಡಿಭಾಗ ತಲುಪಿರುವ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ಹರಿಸುತ್ತೇನೆ ಎಂಬ ಹೊಸ ಘೋಷಣೆ ಮೊಳಗಿಸುತ್ತಿದ್ದಾರೆ. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ಮತದಾರರಿಲ್ಲ. ಹೀಗಾಗಿ, ಈ ಬಾರಿ ಮೊಯಿಲಿ ಅವರಿಗೆ ಈ ಚುನಾವಣೆ ಅಕ್ಷರಶಃ ‘ಅಗ್ನಿಪರೀಕ್ಷೆ’ಯಾಗಿದೆ ಎಂಬ ವಿಶ್ಲೇಷಣೆಗಳು ಹರಿದಾಡುತ್ತಿವೆ.
ಈ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ವರ್ಗದವರನ್ನು ಹೊರತುಪಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರ ಮತಗಳು ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎನ್ನಲಾಗುತ್ತದೆ. ಕಳೆದ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್ ಅಭ್ಯರ್ಥಿ) ಮತ್ತು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರು ಕಣದಲ್ಲಿದ್ದರು. ಆಗ ಬಚ್ಚೇಗೌಡರು, ಕುಮಾರಸ್ವಾಮಿ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿ ಮೊಯಿಲಿ ಅವರಿಗೆ ಉತ್ತಮ ಪೈಪೋಟಿ ನೀಡಿದ್ದರು.
ಕ್ಷೇತ್ರದಲ್ಲಿ ಕಾಂಗ್ರೆಸ್–ಜೆಡಿಎಸ್ ರಾಜಕೀಯ ಕಡುವೈರಿಗಳು. ಉಭಯ ಪಕ್ಷಗಳ ವರಿಷ್ಠರ ನಡುವಿನ ಹೊಂದಾಣಿಕೆ ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಕಾಣುತ್ತಿಲ್ಲ. ಜತೆಗೆ ಈ ಬಾರಿ ಕಣದಲ್ಲಿ ಒಕ್ಕಲಿಗ ಸಮುದಾಯದಿಂದ ಬಚ್ಚೇಗೌಡರು ಮಾತ್ರ ಸ್ಪರ್ಧಿಸಿದ್ದಾರೆ. ಪರಿಣಾಮ, ಅವರಿಗೆ ಬಿಜೆಪಿಯ ಸಾಂಪ್ರದಾಯಿಕ ಮತಗಳ ಜತೆಗೆ ಪಕ್ಷಾತೀತವಾಗಿ ಒಕ್ಕಲಿಗರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕೈಹಿಡಿಯಲಿವೆ ಎಂಬುದು ರಾಜಕೀಯ ಅಂದಾಜು.
ಇನ್ನೊಂದೆಡೆ ಸಿಪಿಎಂ ಮತ್ತು ಬಿಎಸ್ಪಿ ಅಭ್ಯರ್ಥಿಗಳು ಪಡೆಯುವ ಮತಗಳು ಕಾಂಗ್ರೆಸ್‌ಗೆ ಏಟು ನೀಡಲಿವೆ ಎಂಬ ರಾಜಕೀಯ ಲೆಕ್ಕಾಚಾರದ ವಿಶ್ಲೇಷಣೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಕೆಲ ಉದಾಹರಣೆಗಳ ಮೂಲಕ ಇದನ್ನು ಅಲ್ಲಗಳೆಯುವವರೂ ಇದ್ದಾರೆ.
ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ 1.32 ಲಕ್ಷ ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಇವರು ಯಾರತ್ತ ಒಲವು ತೋರುತ್ತಾರೋ ಅವರು ಗೆಲುವಿನ ದಡ ಸೇರುವುದು ಸುಲಭವಾಗುತ್ತದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಅಂತಿಮ ಫಲಿತಾಂಶ ಏನಾಗುವುದೋ ಕಾಯ್ದು ನೋಡಬೇಕು.
*
ಕಳೆದ ಹತ್ತು ವರ್ಷಗಳಿಂದ ಎತ್ತಿನಹೊಳೆ ಯೋಜನೆ ಹೆಸರು ಹೇಳಿಕೊಂಡೇ ವೀರಪ್ಪ ಮೊಯಿಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರ ತಂತ್ರ ನಡೆಯುವುದಿಲ್ಲ.
-ಬಿ.ಎನ್.ಬಚ್ಚೇಗೌಡ, ಬಿಜೆಪಿ ಅಭ್ಯರ್ಥಿ
*
ಎಷ್ಟೇ ಕಷ್ಟ ಎದುರಾದರೂ ಕ್ಷೇತ್ರಕ್ಕೆ ನೀರು ತರಲು ಬದ್ಧನಾಗಿರುವೆ. ನೆರೆಯ ಆಂಧ್ರಪ್ರದೇಶದ ಸರ್ಕಾರದೊಂದಿಗೆ ಸಂಧಾನ ನಡೆಸಿ ಕ್ಷೇತ್ರಕ್ಕೆ 10 ಟಿಎಂಸಿ ನೀರು ತರುತ್ತೇನೆ.
-ಎಂ.ವೀರಪ್ಪ ಮೊಯಿಲಿ, ಮೈತ್ರಿ ಅಭ್ಯರ್ಥಿ
*
ನಾನು ಹುಟ್ಟಿದಾಗಿನಿಂದಲೂ ನಮ್ಮಲ್ಲಿ ಕಾಂಗ್ರೆಸ್ ಆಡಳಿತವಿದೆ. ಇಂದಿಗೂ ನಮ್ಮಲ್ಲಿ ತುಂಬಾ ಸಮಸ್ಯೆಗಳಿವೆ. ಹೀಗಾಗಿ ನಾನು ಬದಲಾವಣೆ ಬಯಸುತ್ತಿದ್ದೇನೆ.
-ಎಸ್.ನಂದಿನಿ, ಅಜ್ಜವಾರ ನಿವಾಸಿ
*
ಕ್ಷೇತ್ರದಲ್ಲಿ ಈವರೆಗೆ ಶೇ 20ರಷ್ಟು ಅಭಿವೃದ್ಧಿ ಮಾತ್ರ ಆಗಿದೆ. ನಿರೀಕ್ಷೆಗೆ ತಕ್ಕಂತೆ ಮೂಲಸೌಕರ್ಯ ಒದಗಿಸುವ ಕೆಲಸಗಳು ಆಗಿಲ್ಲ. ನೀರಿನ ಸಮಸ್ಯೆಯಂತೂ ಹೇಳತೀರದು.
-ಸಿ.ಕೆ.ಅವಿನಾಶ್, ಚಿಕ್ಕಬಳ್ಳಾಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.