ಬೆಂಗಳೂರು: ಚಿತ್ರದುರ್ಗ, ತುಮಕೂರು, ಕೊಡಗು ಸೇರಿದಂತೆ ಹಲವೆಡೆ ಗುರುವಾರ ನವ ಜೋಡಿಗಳು ಮದುವೆ ಸಂಭ್ರಮದ ನಡುವೆಯೂ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದು ವಿಶೇಷ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನ ಹಳ್ಳಿಯ ನವ ವಧು- ವರರಾದ ಲೋಹಿತ್ ಮತ್ತು ಅನಿತಾ ಮತ ಚಲಾಯಿಸಿದರು.
***
ತುಮಕೂರು: ಇಲ್ಲಿನಭಾಗ್ಯನಗರದ ಮತಗಟ್ಟೆ ಸಂಖ್ಯೆ 125ರಲ್ಲಿ ಗುರುವಾರ ನವದಂಪತಿ ಅಪೂರ್ವ ಮತ್ತು ಪ್ರವೀಣ್‌ಕುಮಾರ್ ಅವರು ಮತದಾನ ಮಾಡಿದರು. ನಗರದ ಡಿಎನ್‌ಡಿಎಸ್ ಕಲ್ಯಾಣಮಂಟಪದ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆ ಬಂದ ನವಜೋಡಿ ಮತದಾನ ಮಾಡಿದರು.
***
ಮಡಿಕೇರಿ: ಕೊಡಗು ಜಿಲ್ಲೆಯ ಕಡಗದಾಳು ಗ್ರಾಮದ ನಿವಾಸಿ ರವಿಕಾಂತ್ ಅವರ ಮದುವೆಯು ಕರಿಕೆ ಗ್ರಾಮದ ಭವ್ಯಶ್ರೀ ಜತೆಗೆ ನಿಗದಿಯಾಗಿತ್ತು. ಸಮುದಾಯ ಭವನದಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ಬೆಳಿಗ್ಗೆಯೇ ಮದುವೆ ಉಡುಪಿನಲ್ಲೇ ಮತಗಟ್ಟೆಗೆ ಬಂದ ರವಿಕಾಂತ್ ಹಕ್ಕು ಚಲಾಯಿಸಿ ಮುಹೂರ್ತಕ್ಕೆ ತೆರಳಿದರು.
ಇದೇ ಗ್ರಾಮದ ಭವಾನಿ ಅವರ ವಿವಾಹವೂ ಮತದಾನದಂದೇ ನಿಗದಿಯಾಗಿತ್ತು. ಮದುವೆ ಸಂಭ್ರಮದ ನಡುವೆ ಬಿಡುವು ಮಾಡಿಕೊಂಡು 7 ಕಿ.ಮೀ ದೂರದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದು ವಿಶೇಷ.
ಬೋಯಿಕೇರಿ ಗ್ರಾಮದ ಯಶ್ವಿತಾ ಹಾಗೂ ಮರಗೋಡುವಿನ ಚಂದ್ರ ಅವರು ತಮ್ಮ ಊರಿನ ಮತಗಟ್ಟೆಗಳಲ್ಲಿ ಮತದಾನ ಮಾಡಿದ ಬಳಿಕ ಇಬ್ಬರೂ ಮಡಿಕೇರಿಯ ಅಂಬೇಡ್ಕರ್ ಸಭಾ ಭವನದಲ್ಲಿ ಹೊಸಜೀವನಕ್ಕೆ ಕಾಲಿಟ್ಟರು.
ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾಮದಲ್ಲಿ ನವಜೋಡಿಗಳಾದ ಗಿರೀಶ್–ಲತಾ ಅವರು ಮತದಾನ ಮಾಡಿದರು. ಮುಹೂರ್ತ ಮುಗಿಸಿದ್ದೇ ತಡ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.