ADVERTISEMENT

ಚೌಕೀದಾರ ಕಳ್ಳ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಬಳಕೆ: ರಾಹುಲ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:27 IST
Last Updated 22 ಏಪ್ರಿಲ್ 2019, 19:27 IST
 ಮೀನಾಕ್ಷಿ ಲೇಖಿ ಹಾಗೂ ರಾಹುಲ್‌ ಗಾಂಧಿ
ಮೀನಾಕ್ಷಿ ಲೇಖಿ ಹಾಗೂ ರಾಹುಲ್‌ ಗಾಂಧಿ    

ನವದೆಹಲಿ: ‘ಚೌಕೀದಾರ್‌ ಚೋರ್‌ ಹೈ’ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ ಎಂಬ ತಮ್ಮ ಹೇಳಿಕೆಯ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಚಾರದ ಮಾತಿನ ಭರದಲ್ಲಿ ಸಾಮಾನ್ಯ ಗ್ರಹಿಕೆಯ ಆಧಾರದಲ್ಲಿ ಹೀಗೆ ಹೇಳಲಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ನೋಡಿ, ಓದಿ ಅಥವಾ ವಿಶ್ಲೇಷಿಸಿ ಆಡಿದ ಮಾತು ಇದಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ರಾಹುಲ್‌ ಹೇಳಿದ್ದಾರೆ.

ರಾಜಕೀಯಕ್ಕೆ ನ್ಯಾಯಾಂಗವನ್ನು ಎಳೆದು ತರುವ ಉದ್ದೇಶ ತಮಗೆ ಇರಲಿಲ್ಲ. ‘ಚೌಕೀದಾರ ಕಳ್ಳ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ನಾನು ಉದ್ದೇಶಪೂರ್ವಕವಾಗಿ ಹೇಳಿದ್ದೇನೆ ಎಂದು ಬಿಂಬಿಸಲು ರಾಜಕೀಯ ಪ್ರತಿಸ್ಪರ್ಧಿಗಳು ಯತ್ನಿಸುತ್ತಿದ್ದಾರೆ’ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ರಾಹುಲ್‌ ಹೇಳಿಕೆ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ‘ನರೇಂದ್ರ ಮೋದಿ ಕಳ್ಳ (ಚೌಕೀದಾರ್‌ ನರೇಂದ್ರ ಮೋದಿ ಚೋರ್‌ ಹೈ) ಎಂದು ಇದೇ 10ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ರಾಹುಲ್‌ ಹೇಳಿದ್ದಾರೆ ಎಂದು ತಮ್ಮ ದೂರಿನಲ್ಲಿ ಲೇಖಿ ಉಲ್ಲೇಖಿಸಿದ್ದರು.

ADVERTISEMENT

ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ರಾಹುಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

‘ಯಾವುದೇ ನ್ಯಾಯಾಲಯ ಈ ರೀತಿ ಹೇಳುವುದಿಲ್ಲ ಎಂಬುದು ಸ್ಪಷ್ಟ. ನ್ಯಾಯಾಲಯದ ಆದೇಶವನ್ನು ರಾಜಕೀಯ ಘೋಷಣೆಯ ಜತೆಗೆ ಇರಿಸಿದ್ದು ದುರದೃಷ್ಟಕರ. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಚುನಾವಣಾ ಪ್ರಚಾರದ ಭರದಲ್ಲಿ ಆಡಿದ ಮಾತನ್ನು ನ್ಯಾಯಾಲಯವು ಯಾವುದೇ ತೀರ್ಮಾನಕ್ಕೆ ಬಂದಿದೆ ಎಂಬ ಅರ್ಥದಲ್ಲಿ ತೆಗೆದುಕೊಳ್ಳಬಾರದು’ ಎಂದು ರಾಹುಲ್ ಹೇಳಿದ್ದಾರೆ.

ನ್ಯಾಯಾಲಯವು ಯಾವುದೇ ಆದೇಶ, ಅಭಿಪ್ರಾಯ ಅಥವಾ ನಿಲುವು ವ್ಯಕ್ತಪಡಿಸದ ಹೊರತು ಅಂತಹುದನ್ನು ರಾಜಕೀಯ ಭಾಷಣದ ಸಂದರ್ಭದಲ್ಲಿ ಉಲ್ಲೇಖಿಸುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ವಿಚಾರದಲ್ಲಿ 2018ರ ಡಿಸೆಂಬರ್‌ 14ರಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ತಮ್ಮ ಸರ್ಕಾರವನ್ನು ದೋಷಮುಕ್ತಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಸಚಿವರು ಹೇಳಿದ್ದಾರೆ ಎಂಬುದನ್ನೂ ರಾಹುಲ್‌ ಉಲ್ಲೇಖಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರು ಮತ್ತು ಸರ್ಕಾರದಲ್ಲಿ ಇರುವವರು ಸುಳ್ಳು ಮಾಹಿತಿ ಹರಡುವ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಅದಕ್ಕೆ ತಿರುಗೇಟು ನೀಡಲು ಸಂಪೂರ್ಣ ರಾಜಕೀಯ ಉದ್ದೇಶದಿಂದ ‘ಚೌಕೀದಾರ್‌ ಚೋರ್‌ ಹೈ’ ಹೇಳಿಕೆ ನೀಡಿದ್ದಾಗಿ ರಾಹುಲ್ ವಿವರಿಸಿದ್ದಾರೆ.

ರಾಹುಲ್‌ ಪ್ರಥಮ ದರ್ಜೆ ಸುಳ್ಳುಗಾರ: ಬಿಜೆಪಿ
ರಾಹುಲ್ ಗಾಂಧಿ ಅವರು ‘ಪ್ರಥಮ ದರ್ಜೆ ಸುಳ್ಳುಗಾರ’. ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

‘ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಸುಪ್ರೀಂ ಕೋರ್ಟ್‌ಗೆ ರಾಹುಲ್‌ ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ರಫೇಲ್‌ ಒಪ್ಪಂದದ ವಿಚಾರದಲ್ಲಿ ಸುಳ್ಳನ್ನು ಸೃಷ್ಟಿಸಿ, ವಿವಾದ ಹುಟ್ಟು ಹಾಕುವುದು ರಾಹುಲ್‌ ಉದ್ದೇಶವಾಗಿತ್ತು. ಹಾಗಾಗಿ ಅವರು ದೇಶದ ಜನರ ಕ್ಷಮೆ ಕೋರಬೇಕು’ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹ ರಾವ್ ಹೇಳಿದ್ದಾರೆ. ಜನರ ದೃಷ್ಟಿಯಲ್ಲಿ ರಾಹುಲ್‌ ಅವರು ಪ್ರಥಮ ದರ್ಜೆ ಸುಳ್ಳುಗಾರ ಎಂದು ರಾವ್‌ ಹೇಳಿದ್ದಾರೆ.

ಜನಾಭಿಪ್ರಾಯದ ನ್ಯಾಯಾಲಯದಲ್ಲಿ ರಾಹುಲ್‌ ಅವರು ತಪ್ಪಿತಸ್ಥ. ರಫೇಲ್‌ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿ ತಮ್ಮ ನಾಯಕ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂಬ ಕಾರಣದಿಂದ ಕಾಂಗ್ರೆಸ್‌ ಕಾರ್ಯಕರ್ತರು ಅವಮಾನದಿಂದ ತಲೆ ತಗ್ಗಿಸುವಂತಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಒಬ್ಬ ಚೌಕೀದಾರ ಮಾತ್ರ ಕಳ್ಳ: ಕಾಂಗ್ರೆಸ್‌
ರಾಹುಲ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿರುವುದನ್ನು ಕಾಂಗ್ರೆಸ್‌ ಖಂಡಿಸಿದೆ. ರಾಹುಲ್‌ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರವನ್ನು ನಿಂದನಾತ್ಮಕವಾಗಿ ತಿರುಚಿರುವುದು ನ್ಯಾಯಾಂಗ ನಿಂದನೆ ಎಂದು ಹೇಳಿದೆ.

‘ವಂಚನೆಗೆ ಗಡಿಗಳಿಲ್ಲ. ಸುಳ್ಳುಗಳಿಗೆ ಮಿತಿ ಇಲ್ಲ, ತಪ್ಪು ಮಾಹಿತಿ ನೀಡಿಕೆಗೆ ಎಲ್ಲೆಗಳಿಲ್ಲ. ರಾಹುಲ್‌ ಗಾಂಧಿ ಅವರು ಸುಪ್ರೀಂ ಕೋರ್ಟ್‌ಗೆ ನೀಡಿದ ಪ್ರಮಾಣಪ‍ತ್ರವನ್ನು ತಿರುಚಿರುವುದು ಕೂಡ ನ್ಯಾಯಾಯಂ ನಿಂದನೆಯೇ ಆಗಿದೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

‘ಈ ವಿಚಾರ ನ್ಯಾಯಾಂಗದಲ್ಲಿದೆ. ಹಾಗಾಗಿ ತೀರ್ಪು ನೀಡಿಕೆಯನ್ನು ನಿಲ್ಲಿಸಿ. ಒಬ್ಬ ಚೌಕೀದಾರ ಕಳ್ಳ ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ’ ಎಂದು ಅವರು ಹರಿಹಾಯ್ದಿದ್ದಾರೆ.

*
ರಾಹುಲ್‌ ಗಾಂಧಿ ಅವರ ಹೇಳಿಕೆಗಳು ಮತ್ತು ಪ್ರಮಾಣ ಪತ್ರ ಅವರ ತಪ್ಪೊಪ್ಪಿಗೆ. ತಪ್ಪೊಪ್ಪಿಗೆ ಎಂದರೆ ನ್ಯಾಯಾಂಗ ನಿಂದನೆ ಆಗಿದೆ ಎಂದೇ ಅರ್ಥ. ನನ್ನ ದೂರು ದೃಢಪಟ್ಟಿದೆ.
-ಮೀನಾಕ್ಷಿ ಲೇಖಿ, ರಾಹುಲ್‌ ವಿರುದ್ಧ ದೂರು ಕೊಟ್ಟ ಬಿಜೆಪಿ ಸಂಸದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.