ADVERTISEMENT

ಲೋಕಕ್ಕೆ ‘ಶಕ್ತಿ’ ಪರಿಚಯಿಸಿದ ಅಜಯಕುಮಾರ ಸರನಾಯಕ

ರಾಮಕೃಷ್ಣ ಹೆಗಡೆ ಅವರು ಕಟ್ಟಿದ್ದ ಲೋಕಶಕ್ತಿ ಅಭ್ಯರ್ಥಿಯಾಗಿ ಕಣಕ್ಕೆ

ಬಸವರಾಜ ಹವಾಲ್ದಾರ
Published 16 ಏಪ್ರಿಲ್ 2024, 4:36 IST
Last Updated 16 ಏಪ್ರಿಲ್ 2024, 4:36 IST
<div class="paragraphs"><p>ಅಜಯಕುಮಾರ ಸರನಾಯಕ</p></div>

ಅಜಯಕುಮಾರ ಸರನಾಯಕ

   

ಬಾಗಲಕೋಟೆ: ಲೋಕಸಭೆಗೆ ನಡೆದ 12ನೇ ಲೋಕಸಭಾ ಚುನಾವಣೆ ವಿಶೇಷವಾಗಿತ್ತು. ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ್ದ ಬಾಗಲಕೋಟೆ ಕ್ಷೇತ್ರದ ಜನತೆ ಹೆಗಡೆ ಅವರು ಕಟ್ಟಿದ್ದ ಲೋಕಶಕ್ತಿ ಅಭ್ಯರ್ಥಿ, ಹೆಗಡೆ ಅವರ ಶಿಷ್ಯ ಅಜಯಕುಮಾರ ಸರನಾಯಕರನ್ನು ಗೆಲ್ಲಿಸಿದ್ದರು.

ಪ್ರಧಾನಮಂತ್ರಿ ಹುದ್ದೆಯಿಂದ ಇಳಿದು ಬಂದಿದ್ದ ಎಚ್‌.ಡಿ. ದೇವೇಗೌಡ ಹಾಗೂ ರಾಮಕೃಷ್ಣ ಹೆಗಡೆ ಅವರ ನಡುವಿನ ಆಂತರಿಕ ಕಚ್ಚಾಟ ವಿಕೋಪಕ್ಕೆ ಹೋಗಿ ಎರಡು ಪಕ್ಷಗಳೇ ಆಗಿದ್ದವು. ಎರಡೂ ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ, ಇದರ ಲಾಭ ಕಾಂಗ್ರೆಸ್‌ಗೆ ದೊರೆಯಲಿಲ್ಲ ಎನ್ನುವುದು ಗಮನಾರ್ಹ.

ADVERTISEMENT

1998ರಲ್ಲಿ ನಡೆದ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆಯವರ ಕಟ್ಟಾ ಅನುಯಾಯಿಯಾಗಿದ್ದ ಅಂದಿನ ಜೆ.ಎಚ್.ಪಟೇಲ್‌ರ ಸರ್ಕಾರದಲ್ಲಿ ಸಚಿವರಾಗಿದ್ದ ಅಜಯಕುಮಾರ ಸರನಾಯಕ ಅವರು ಹೆಗಡೆ ಅವರು ಕಟ್ಟಿದ್ದ ಲೋಕಶಕ್ತಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

1996ರಲ್ಲಿ ನಡೆದ ಚುನಾವಣೆಯಲ್ಲಿ ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ವೈ. ಮೇಟಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ನಂತರ ಲೋಕಸಭೆಗೆ ನಡೆದ ಚುನಾವಣೆಯಲ್ಲಿಯೂ ಸಚಿವರಾಗಿದ್ದ ಅಜಯಕುಮಾರ ಸರನಾಯಕ ಗೆಲುವು ಕಂಡಿದ್ದರು.

ರಾಜ್ಯಮಟ್ಟದಲ್ಲಿ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವಿನ ನಡೆದ ಶೀತಲ ಸಮರದ ಪರಿಣಾಮ ದೇವೇಗೌಡರು, ಹೆಗಡೆ ಅವರನ್ನು ಜನತಾ ದಳದಿಂದ ಉಚ್ಚಾಟಿಸಿದರು. ಹೆಗಡೆ ಅವರು ಲೋಕಶಕ್ತಿ ಕಟ್ಟಿ ಸರನಾಯಕರನ್ನು ಬಾಗಲಕೋಟೆಯಿಂದ ಕಣಕ್ಕಿಳಿಸಿದ್ದರು.

ಹೆಗಡೆಯವರ ಜೊತೆ ಗುರುತಿಸಿಕೊಂಡಿದ್ದ ಅಂದಿನ ಕ್ರೀಡಾ ಸಚಿವ ಅಜಯಕುಮಾರ ಸರನಾಯಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದು ಹೆಗಡೆಯವರ ಲೋಕಶಕ್ತಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ತೆಂಗಿನ ಗಿಡ ಗುರುತಿನಿಂದ ಚುನಾವಣೆ ಎದುರಿಸಿ ಗೆದ್ದಿದ್ದರು.

1996ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಸೋಲಿಸಿದ್ದ ಎಚ್‌.ವೈ. ಮೇಟಿ ಬದಲಾದ ರಾಜಕೀಯದಲ್ಲಿ ಹಿಂದೆ ಒಂದೇ ಪಕ್ಷದಲ್ಲಿದ್ದ ಅಜಯಕುಮಾರ ಸರನಾಯಕರ ವಿರುದ್ಧವೇ ದೇವೇಗೌಡರ ನೇತೃತ್ವದ ಜನತಾ ದಳದಿಂದ ಸ್ಪರ್ಧಿಸಬೇಕಾಯಿತು. 

ಜನತಾ ಪರಿವಾರದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್‌ನಿಂದ ಸಿದ್ದು ನ್ಯಾಮಗೌಡ ಸ್ಪರ್ಧಿಸಿದ್ದರು. ಸರನಾಯಕ ಹಾಗೂ ಮೇಟಿ ಅವರ ನಡುವೆ ಮತಗಳು ಒಡೆದು, ಕಾಂಗ್ರೆಸ್‌ ಗೆಲುವು ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿನ ಒಗ್ಗಟ್ಟಿನ ಕೊರತೆ, ನಾಯಕರ ಒಳೇಟಿನ ಪರಿಣಾಮ ನ್ಯಾಮಗೌಡರು ಸತತ ಎರಡನೇ ಬಾರಿಗೂ ಸೋಲಬೇಕಾಯಿತು.

83 ಸಾವಿರ ಮತಗಳಿಂದ ಗೆಲುವು

ಬಾಗಲಕೋಟೆ: ಸರಳರಾಗಿದ್ದ ಅಜಯಕುಮಾರ ಸರನಾಯಕರು ಹೊಸ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸಿದ್ದರೂ ಜನರು 83,632 ಮತಗಳ ಅಂತರದಿಂದ ಗೆಲ್ಲಿಸಿದ್ದರು. 724951 (ಶೇ67.13) ಮತಗಳು ಚಲಾವಣೆಯಾಗಿದ್ದವು. ಅಜಯಕುಮಾರ ಸರನಾಯಕ 352795 ಮತಗಳನ್ನು ಪಡೆದು ಆಯ್ಕೆಯಾದರೆ ಅವರ ಸಮೀಪದ ಪ್ರತಿಸ್ಪರ್ಧಿ ಸಿದ್ದು ನ್ಯಾಮಗೌಡ 269163 ಮತಗಳನ್ನು ಪಡೆದಿದ್ದರು. ಹಿಂದಿನ ಅವಧಿಗೆ ಸಂಸದರಾಗಿದ್ದ ಎಚ್‌.ವೈ. ಮೇಟಿ ಅವರು ಕೇವಲ 80868 ಮತಗಳನ್ನು ಪಡೆದು ಸೋಲು ಕಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.