ದಾವಣಗೆರೆ: ದಿನೇದಿನೇ ಬಿಸಿಲ ಬೇಗೆಯಂತೆಯೇ ಚುನಾವಣಾ ಕಾವು ಏರುತ್ತಲಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ಈವರೆಗೆ 12 ಚುನಾವಣೆಗಳು ನಡೆದಿದ್ದು, 13ನೇ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 6 ಬಾರಿ ಗೆಲುವು ಹಂಚಿಕೊಂಡಿದ್ದು, ಇದೇ ಮೊದಲ ಬಾರಿಗೆ ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಿವೆ. ಈ ಎರಡು ಪಕ್ಷಗಳಲ್ಲಿ ಯಾವುದೇ ಪಕ್ಷಕ್ಕೆ ಗೆಲವು ದಕ್ಕಿದರೂ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಲೋಕಸಭೆ ಪ್ರವೇಶಿಸಲಿದ್ದಾರೆ.
ದಾವಣಗೆರೆ ಲೋಕಸಭೆಗೆ ಮೊದಲ ಚುನಾವಣೆ ನಡೆದಿದ್ದು 1977ರಲ್ಲಿ. ಈ ಚುನಾವಣೆಯೂ ಒಳಗೊಂಡಂತೆ 1980, 1984,1989,1991, 1998ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ್ದರೆ, 1996, 1999, 2004,2009, 2014 ಹಾಗೂ 2019ರ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. 1977ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೊಂಡಜ್ಜಿ ಬಸಪ್ಪ ಶೇ 57.4 (2,44,200) ಮತ ಪಡೆದು ಮೊದಲ ಸಂಸದರಾಗಿ ಆಯ್ಕೆಯಾಗಿದ್ದರು. ಇವರ ಎದುರು ಸ್ಪರ್ಧಿಸಿದ್ದು ಭಾರತೀಯ ಲೋಕದಳದ ಕೆ.ಜಿ. ಮಹೇಶ್ವರಪ್ಪ ಶೇ 35.8 (1,52,078) ಮತ ಪಡೆದು ಸೋಲನುಭವಿಸಿದ್ದರು.
ಅತ್ಯಲ್ಪ ಅಂತರದ ಸೋಲು: ಮಾಯಕೊಂಡ ವಿಧಾನಸಭೆ ಕ್ಷೇತ್ರಕ್ಕೆ ನಡೆದಿದ್ದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಎದುರು ಸೋಲನುಭವಿಸಿದ್ದ ಬಿಜೆಪಿಯ ಎಸ್.ಎ. ರವೀಂದ್ರನಾಥ್ 1991ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಎದುರು 455 ಮತಗಳ ಅಲ್ಪ ಅಂತರದಿಂದ ಸೋತಿದ್ದರು. ಕ್ಷೇತ್ರದ ಇತಿಹಾಸದಲ್ಲೇ ಈವರೆಗೂ ಇದು ಅತ್ಯಲ್ಪ ಅಂತರದ ಫಲಿತಾಂಶವಾಗಿ ದಾಖಲಾಗಿದೆ.
ಮೊದಲ ಐದು ಅವಧಿಯಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ 1996ರ ನಂತರ ಬದಲಾಯಿತು. ಕಾಂಗ್ರೆಸ್ ಕೋಟೆ ಛಿದ್ರವಾಗಿ ಬಿಜೆಪಿ ಯುಗ ಆರಂಭವಾಯಿತು. ಆ ವೇಳೆಗಾಗಲೇ ರಾಮ ರಥಯಾತ್ರೆ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಆ ವೇಳೆ ದಾವಣಗೆರೆಯಲ್ಲಿ ಗೋಲಿಬಾರ್ ಆಗಿ ಇಲ್ಲಿಯೂ ಯಾತ್ರೆ ಸದ್ದು ಮಾಡಿತ್ತು.
1991ರ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋಲು ಕಂಡಿದ್ದ ಬಿಜೆಪಿ ಎಸ್.ಎ. ರವೀಂದ್ರನಾಥ್ ಅವರಿಗೆ ಟಿಕೆಟ್ ತಪ್ಪಿಸಿ 1996ರಲ್ಲಿ ನಡೆದ ಚುನಾವಣೆ ಯಲ್ಲಿ ಜಿ. ಮಲ್ಲಿಕಾರ್ಜುನಪ್ಪ (ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ತಂದೆ) ಅವರಿಗೆ ಟಿಕೆಟ್ ನೀಡಲಾಗಿತ್ತು. ಮೊದಲ ಪ್ರಯತ್ನದಲ್ಲೇ ಅವರು ಶೇ 36 (2,68,962) ಮತ ಪಡೆದು ಜಯಶಾಲಿಯಾದರು. ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಶೇ 21.6 (1,61,296) ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಜನತಾ ದಳದಿಂದ ಸ್ಪರ್ಧಿಸಿದ್ದ ಎಸ್.ಎಚ್. ಪಟೇಲ್ (ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸಹೋದರ) ಶೇ 23 (1,71,875) ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು.
1998ರಲ್ಲಿ ಕಾಂಗ್ರೆಸ್‌ನಿಂದ ಶಾಮನೂರು ಶೇ 41.5 (3,43,704) ಮತ ಗಳಿಸಿ ಸಂಸದರಾದರು. ಜಿ. ಮಲ್ಲಿಕಾರ್ಜುನಪ್ಪ ಶೇ 40.1 (3,32,372) ಮತ ಪಡೆದು ಸೋಲು ಕಂಡರು. 1999ರಲ್ಲಿ ಮತ್ತೆ ಶಾಮನೂರು ಶಿವಶಂಕರಪ್ಪ ಹಾಗೂ ಜಿ. ಮಲ್ಲಿಕಾರ್ಜುನಪ್ಪ ಮುಖಾಮುಖಿದ್ದು, ಈ ಚುನಾವಣೆಯಲ್ಲಿ ಶಿವಶಂಕರಪ್ಪ ಅವರು ಶೇ 43.4 (3,82,700) ಮತ ಪಡೆದು ಸೋಲು ಕಾಣುತ್ತಾರೆ. ಜಿ. ಮಲ್ಲಿಕಾರ್ಜುನಪ್ಪ ಶೇ 45.2 (3,98,969) ಮತ ಪಡೆದು ಜಯ ಸಾಧಿಸಿದ್ದರು.
2004ರಲ್ಲಿ ಜಿ.ಎಂ. ಸಿದ್ದೇಶ್ವರ ಮೊದಲ ಬಾರಿಗೆ ಕಣಕ್ಕಿಳಿದಿದ್ದರು. ಇದೇ ಚುನಾವಣೆಯಲ್ಲಿ ಶೇ 40.8 (3,70,499) ಮತ ಪಡೆದು ಯಶಸ್ಸು ಕಂಡಿದ್ದರು. ಇವರಿಗೆ ಎದುರಾಳಿಯಾಗಿದ್ದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ. ಇವರಿಗೂ ಇದು ಮೊದಲ ಚುನಾವಣೆ. ಶೇ 37.2 (3,37,823) ಮತ ಪಡೆದು ಎರಡನೇ ಸ್ಥಾನ ಪಡೆದುಕೊಳ್ಳುತ್ತಾರೆ. ಅಷ್ಟು ಹೊತ್ತಿಗೆ ಚನ್ನಯ್ಯ ಒಡೆಯರ್ ಜನತಾದಳ (ಎಸ್) ಸೇರಿ ಅಲ್ಲಿಂದಲೇ ಸ್ಪರ್ಧಿಸಿ ಶೇ 17.4 (1,58,515) ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ.
2009ರ ಚುನಾವಣೆಯಲ್ಲಿಯೂ ಬಿಜೆಪಿಯ ಜಿ.ಎಂ. ಸಿದ್ದೇಶ್ವರ ಅವರು ಕಾಂಗ್ರೆಸ್‌ನ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು 2,024 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. 2019ರ ಚುನಾವಣೆಯಲ್ಲಿ ಸಿದ್ದೇಶ್ವರ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರನ್ನು 1,69,702 ಮತಗಳ ಅಂತರದಿಂದ ಸೋಲುಣಿಸಿದ್ದರು. ಇದು ಅತಿ ಹೆಚ್ಚಿನ ಅಂತರದ ಗೆಲುವಾಗಿ ದಾಖಲಾಗಿದೆ.
ಜನತಾದಳ ಮೂರು ಚುನಾವಣೆಗಳಲ್ಲಿ ಪ್ರಬಲ ಪೈಪೋಟಿಯೊಂದಿಗೆ ಎರಡನೇ ಸ್ಥಾನ ಸಂಪಾದಿಸಿದ್ದು, ಬಿಟ್ಟರೆ ಕಮ್ಯುನಿಸ್ಟ್, ಎಡಿಎಂಕೆ, ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ), ಕರ್ನಾಟಕ ವಿಕಾಸ ಪಕ್ಷ, ಬಿಎಸ್‌ಪಿ, ಎಐಜೆಎಂಕೆ, ಪ್ರಜಾಕೀಯ, ಆಮ್ ಆದ್ಮಿ ಪಾರ್ಟಿ, ಎಸ್‌ಯುಸಿಐ (ಸಿ) ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಗಮನ ಸೆಳೆಯುವ ಸಾಧನೆ ಹೊರಬಿದ್ದಿಲ್ಲ.
ಗೆದ್ದರೂ ಕೊಂಡಜ್ಜಿ ಬಸಪ್ಪಗೆ ಟಿಕೆಟ್ ಇಲ್ಲ
ಮೊದಲ ಚುನಾವಣೆಯಲ್ಲಿ ಕೊಂಡಜ್ಜಿ ಬಸಪ್ಪ ಗೆದ್ದಿದ್ದರೂ, 1980ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಕಾಂಗ್ರೆಸ್ ಎರಡು ಹೋಳಾದ ಪರಿಣಾಮ ಕೊಂಡಜ್ಜಿ ಬಸಪ್ಪ ಜನತಾ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಾಂಗ್ರೆಸ್ (ಐ)ನಿಂದ ಶಿವಮೊಗ್ಗದ ಟಿ.ವಿ. ಚಂದ್ರಶೇಖರ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್ (ಯು)ನಿಂದ ಶಾಸಕ ಶಾಮನೂರು ಶಿವಶಂಕರಪ್ಪ ಕಣಕ್ಕೆ ಇಳಿದಿದ್ದರು. ಮೂವರು ಘಟಾನುಘಟಿಗಳ ಹಣಾಹಣಿಯಲ್ಲಿ ಶೇ 53.8 (2,38,506) ಮತ ಪಡೆದ ಟಿ.ವಿ. ಚಂದ್ರಶೇಖರಪ್ಪ ಜಯಶಾಲಿಯಾಗಿದ್ದರು. ಎರಡನೇ ಸ್ಥಾನದಲ್ಲಿ ಕೊಂಡಜ್ಜಿ ಬಸಪ್ಪ ಶೇ 22 (97,510) ಮತ ಪಡೆದಿದ್ದರು. ಶೇ 19.4 (86,167) ಮತ ಪಡೆದ ಶಾಮನೂರು ಶಿವಶಂಕರಪ್ಪ ಮೂರನೇ ಸ್ಥಾನ ಗಳಿಸಿದ್ದರು. 1984ರ ಚುನಾವಣೆಯಲ್ಲಿ ಟಿ.ವಿ. ಚಂದ್ರಶೇಖರಪ್ಪ ಅವರಿಗೆ ಟಿಕೆಟ್ ಕೈತಪ್ಪಿತ್ತು. ಕಾಂಗ್ರೆಸ್‌ನ ಹೊಸ ಮುಖವಾಗಿದ್ದ ಚನ್ನಯ್ಯ ಒಡೆಯರ್ ಶೇ 52.6 (2,90,003) ಮತ ಗಳಿಸಿ ಜಯ ಗಳಿಸಿದ್ದರು. ಅವರಿಗೆ ಎದುರಾಗಿ ಜನತಾ ದಳದ ಕೆ.ಜಿ. ಮಹೇಶ್ವರಪ್ಪ ಶೇ 40.7 (2,24,262) ಮತ ಪಡೆದು ಸೋತಿದ್ದರು.
1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಶೇ 49.8 (3,69,969) ಮತ ಪಡೆದು ಹಿಂದಿನ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಜನತಾ ದಳದ ಕೆ.ಜಿ. ಮಹೇಶ್ವರಪ್ಪ ಅವರನ್ನು ಸೋಲಿಸಿ ಮರು ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.