ಬಳ್ಳಾರಿ: ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದವರು ಟೇಕೂರು ಸುಬ್ರಮಣ್ಯಂ. ನಂತರದ ಎರಡು ಚುನಾವಣೆಗಳಲ್ಲೂ ಗೆಲ್ಲುವ ಮೂಲಕ ಅವರು ಹ್ಯಾಟ್ರಿಕ್ ಸಾಧಿಸಿದ್ದರು.
ಗಾಂಧೀವಾದಿ, ಜವಹರಲಾಲ್ ನೆಹರೂ ಅವರಿಗೆ ಆಪ್ತ, ಲಾಲ್ ಬಹದ್ದೂರ್ ಶಾಸ್ತ್ರಿಗೆ ಮಿತ್ರರಾಗಿದ್ದ ಸುಬ್ರಮಣ್ಯಂ ಅವರು ‘ಜನಸೇವೆ’ ಎಂಬ ಆದರ್ಶಕ್ಕಾಗಿ ರಾಜಕೀಯಕ್ಕೆ ಬಂದವರು. ಆದರೆ, ಚುನಾವಣೆಗಳಿಗಾಗಿ ಕೈ ಬರಿದು ಮಾಡಿಕೊಂಡಿದ್ದರು. ‘ಬಡವನಾಗಲು ರಾಜಕೀಯಕ್ಕೆ ಬಂದೆ’ ಎಂದು ಅವರು ಸದಾ ಹೇಳುತ್ತಿದ್ದುದ್ದಾಗಿ ಸುಬ್ರಮಣ್ಯಂ ಅವರ ಪುತ್ರ ಡಾ. ರಾಮನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆದರ್ಶವಾದಿ ರಾಜಕಾರಣಕ್ಕೆ ಆದ್ಯತೆ ನೀಡಿದ್ದ ಟೇಕೂರು ಸುಬ್ರಮಣ್ಯಂ ಅವರು, ಚುನಾವಣೆಗಳು ದುಬಾರಿ ಕಸರತ್ತು ಆಗುತ್ತಿರುವುದನ್ನು 1962ರ ತಮ್ಮ ಮೂರನೇ ಚುನಾವಣೆ ಹೊತ್ತಿಗೇ ಸ್ಪಷ್ಟವಾಗಿ ಅರಿತಿದ್ದರು. ಹೀಗಾಗಿ ನಂತರದ ಚುನಾವಣೆಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು. ಸ್ವತಃ ಲಾಲ್ ಬಹದ್ದೂರು ಶಾಸ್ತ್ರಿ ಅವರೇ ಮಂತ್ರಿ ಸ್ಥಾನದ ಅವಕಾಶ ನೀಡಿದರೂ ಅದನ್ನು ನಿರಾಕರಿಸಿ, ತಮ್ಮ ನಿರ್ಧಾರದಂತೆ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದರು.
1952ರ ಮೊದಲ ಚುನಾವಣೆಗೆ ಸುಬ್ರಮಣ್ಯಂ ಅವರು ಸುಮಾರು ₹8 ಸಾವಿರ ಖರ್ಚು ಮಾಡಿದ್ದರು. ಎರಡನೇ ಚುನಾವಣೆಯಲ್ಲಿ ₹13 ಸಾವಿರ, ಮೂರನೇ ಚುನಾವಣೆಯಲ್ಲಿ ₹1.16 ಲಕ್ಷ ಖರ್ಚು ಮಾಡಿದ್ದರು. ಇದಕ್ಕಾಗಿ ಅವರು ತಮ್ಮ ಸಮೃದ್ಧ ಜಮೀನುಗಳನ್ನು ಮಾರಿಕೊಂಡಿದ್ದರು.
‘ಚುನಾವಣೆಗಳಿಗಾಗಿ ಅವರು ಸಾಕಷ್ಟು ಖರ್ಚು ಮಾಡಿಕೊಂಡಿದ್ದರು. ಬಳ್ಳಾರಿ, ಹೊಸಪೇಟೆ, ಸಿರುಗುಪ್ಪ, ಕಣೇಕಲ್, ರಾಯದುರ್ಗಗಳಲ್ಲಿ ನಮಗೆ ನೀರಾವರಿ ಜಮೀನುಗಳಿದ್ದವು. ಮೊದಲ ಚುನಾವಣೆಗೆ ಕೆಲವೊಂದು ಜಮೀನುಗಳು ಕೈತಪ್ಪಿದವು. ನಂತರದ ಚುನಾವಣೆಗಳಲ್ಲೂ ಅದೇ ರೀತಿಯಾಯಿತು. ಮೂರುನೇ ಚುನಾವಣೆಯ ಹೊತ್ತಿಗೆ ಬಹುತೇಕ ನಮ್ಮ ಜಮೀನು ಮಾರಿಯಾಗಿತ್ತು. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು. ರಾಜಕೀಯದಲ್ಲಿ ದುಡ್ಡು ಮಾಡಬಹುದೆಂಬ ಕಿಂಚಿತ್ತು ಚಿಂತನೆಯೂ ನಮ್ಮ ತಂದೆಯವರಲ್ಲಿ ಇರಲಿಲ್ಲ. ಆಗಿನ ರಾಜಕಾರಣಿಗಳಲ್ಲೂ ಇರಲಿಲ್ಲ’ ಎಂದು ಅವರು ಸ್ಮರಿಸಿದರು.
‘ನಮ್ಮ ಕುಟುಂಬ ಟಿಟಿಎಸ್ ಎಂಬ ಟ್ರಾನ್ಸ್‌ಪೋರ್ಟ್ ನಡೆಸುತ್ತಿತ್ತು. ನಮ್ಮ ಬಳಿ ಮೂರು ಬಸ್‌ಗಳಿದ್ದವು. ಬಳ್ಳಾರಿಯಿಂದ ಸಂಡೂರು, ರಾಯದುರ್ಗ, ಕಣೇಕಲ್‌ಗೆ ಬಸ್‌ಗಳು ಸಂಚರಿಸುತ್ತಿದ್ದವು. ಲಾರಿಗಳೂ ಇದ್ದವು. ಮೂರನೇ ಚುನಾವಣೆ ಹೊತ್ತಿಗೆ ಈ ಟ್ರಾನ್ಸ್‌ಪೋರ್ಟ್ ವ್ಯವಹಾರವನ್ನೂ ನಾವು ನಿಲ್ಲಿಸಿದ್ದೆವು‘ ಎಂದು ತಿಳಿಸಿದರು.
ಎದುರಾಳಿ ಮಿತ್ರರು: ಮೊದಲ ಎರಡು ಚುನಾವಣೆಗಳಲ್ಲಿ ಸುಬ್ರಹ್ಮಣ್ಯಂ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ವೈ.ಮಹಾಬಲೇಶ್ವರಪ್ಪ. ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದ ಅವರು, ಸುಬ್ರಮಣ್ಯಂ ಅವರಿಗೆ ಮಿತ್ರರಾಗಿದ್ದರು.
‘ಮೂರನೇ ಚುನಾವಣೆಯಲ್ಲಿ ಸುಬ್ರಹ್ಮಣ್ಯಂ ಅವರಿಗೆ ಜಗಳೂರು ಮಹ್ಮದ್ ಇಮಾಮ್ ಸಾಬ್ ಅವರು ಪ್ರತಿಸ್ಪರ್ಧಿಯಾಗಿದ್ದರು. ಅವರೊಂದಿಗೂ ಸುಬ್ರಮಣ್ಯಂ ಅವರಿಗೆ ಉತ್ತಮ ಬಾಂಧವ್ಯ ಇತತು. ಆದರೆ, ಆ ಚುನಾವಣೆಯಲ್ಲಿ ಹೆಚ್ಚು ಖರ್ಚಾಗಿತ್ತು’ ಎನ್ನುತ್ತಾರೆ ರಾಮನಾಥ್
ಸುಬ್ರಮಣ್ಯಂ ಅವರ ಬಗ್ಗೆ: ಆಂಧ್ರ ಪ್ರದೇಶದ ಉರುವಕೊಂಡದಲ್ಲಿ ಜನಿಸಿದ್ದ ಸುಬ್ರಮಣ್ಯಂ ಅವರು ಬೆಳೆದಿದ್ದು ಬಳ್ಳಾರಿಯಲ್ಲಿ. ಇಲ್ಲಿನ ವಾರ್ಡ್ಲಾ ಶಾಲೆ ವಿದ್ಯಾರ್ಥಿಯಾದ ಅವರು, ಮದ್ರಾಸ್‌ನ ಪಚ್ಚೆಯಪ್ಪ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಲ್ಲಿ ಸಿಕ್ಕ ಸಂಪರ್ಕಗಳು, ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ಅವರನ್ನು ರಾಜಕೀಯಕ್ಕೆ ಎಳೆದು ತಂದಿದ್ದವು. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ 1952, 1957, 1962ರ ಚುನಾವಣೆಗಳಲ್ಲಿ ಗೆದ್ದಿದ್ದ ಟೇಕೂರು ಸುಬ್ರಮಣ್ಯಂ ಅವರು 1974ರಲ್ಲಿ ನಿಧನರಾಗಿದ್ದರು.
ನೆಹರು ರಾಜಕೀಯ ಕಾರ್ಯದರ್ಶಿ: ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರು ಅವರೊಂದಿಗೆ ಸುಬ್ರಹ್ಮಣ್ಯಂ ನೇರ ಸಂಪರ್ಕದಲ್ಲಿದ್ದರು. 1952 ಚುನಾವಣೆ ಬಳಿಕ ಅವರು ಕಾಂಗ್ರೆಸ್ ಪಕ್ಷದ ಸಂಸದೀಯ ಕಾರ್ಯದರ್ಶಿಯಾಗಿದ್ದರು. 1956–58ರ ಅವಧಿಯಲ್ಲಿ ನೆಹರು ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರು.
ಟೇಕೂರು ಸುಬ್ರಮಣ್ಯಂ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಮಿತ್ರರಾಗಿದ್ದರು. ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದಾಗ ಒಂದು ಬಾರಿ ಧಾರವಾಡಕ್ಕೆ ಭೇಟಿ ನೀಡುವುದಿತ್ತು. ಆಗ ಬಳ್ಳಾರಿಗೆ ಬಂದಿದ್ದ ಅವರು ರೈಲ್ವೆ ನಿಲ್ದಾಣದಿಂದ ಮನೆಗೆ ಸರ್ಕಾರಿ ಕಾರು ಬಳಸದೇ ಜಟಕಾ ಬಂಡಿಯಲ್ಲಿ ಬಂದಿದ್ದರು. ಜಮಕಾನ ಹಾಕಿ ಕೂರಿಸಿ ಶಾಸ್ತ್ರಿ ಅವರನ್ನು ಉಪಚರಿಸಲಾಗಿತ್ತು. ಶಾಸ್ತ್ರಿ ಪ್ರಧಾನಿಯಾದಾಗ ತಂದೆಯವರಿಗೆ ಸಚಿವ ಸ್ಥಾನ ನೀಡುವುದಾಗಿ ಅವರು ಹೇಳಿದ್ದರು. ಆದರೆ ಅಷ್ಟೊತ್ತಿಗಾಗಲೇ ನಮ್ಮ ತಂದೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಸಂಕಲ್ಪ ಮಾಡಿದ್ದರು. ಅದರಂತೆಯೇ ನಡೆದುಕೊಂಡರು ಎಂದು ಪುತ್ರ ರಾಮನಾಥ್ ಸ್ಮರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.