ನವದೆಹಲಿ: 1951–52ರಲ್ಲಿ ಲೋಕಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು. ಆಗ ಮತದಾರರ ಪಟ್ಟಿ ಸಿದ್ಧಪಡಿಸುವಾಗ ಚುನಾವಣಾ ಆಯೋಗಕ್ಕೆ ವಿಚಿತ್ರ ಸಮಸ್ಯೆ ಎದುರಾಗಿತ್ತು. ಹೆಚ್ಚಿನ ಮಹಿಳಾ ಮತದಾರರು ತಮ್ಮ ಹೆಸರು ಬರೆಸಲು ಸಿದ್ಧರಿರಲಿಲ್ಲ!
ಕೆಲವು ರಾಜ್ಯಗಳಲ್ಲಿ ಮಹಿಳೆಯರು ತಾವು ಇಂಥವರ ಪತ್ನಿ, ತಾಯಿ ಅಥವಾ ಅಥವಾ ಮಗಳು ಎಂದು ಕುಟುಂಬದ ಪುರುಷ ಸದಸ್ಯರ ಜೊತೆಗೆ ಗುರುತಿಸಿಕೊಳ್ಳಲು ಬಯಸಿದ್ದರು. ಈ ಕುರಿತು ಜಾಗೃತಿ ಮೂಡಿಸಿ ಹೆಸರು ಸೇರಿಸಲು ವಿಶೇಷ ಅಭಿಯಾನವನ್ನೇ ನಡೆಸಲಾಗಿತ್ತು.
ಆಗ ದೇಶದಲ್ಲಿದ್ದ ಮಹಿಳಾ ಮತ ದಾರರ ಸಂಖ್ಯೆ ಸುಮಾರು 8 ಕೋಟಿ. ಅವಧಿ ವಿಸ್ತರಣೆ, ಜಾಗೃತಿ ನಂತರವೂ ಸುಮಾರು 28 ಲಕ್ಷ ಮಹಿಳೆಯರು ಮತಪಟ್ಟಿಗೆಗೆ ತಮ್ಮ ನಿಜವಾದ ಹೆಸರು ನೀಡಿರಲೇ ಇಲ್ಲ. ಇದೇ ಕಾರಣಕ್ಕೇ ಅಷ್ಟು ಮತದಾರರ ಹೆಸರು ಕೈಬಿಡಲಾಗಿತ್ತು.
ಲೋಕಸಭೆಯ ಪ್ರಥಮ ಸಾರ್ವತ್ರಿಕ ಚುನಾವಣೆ ಕುರಿತು 1955ರಲ್ಲಿ ಬಿಡುಗಡೆಯಾದ ಅಧಿಕೃತ ವರದಿಯಲ್ಲಿ ಈ ಉಲ್ಲೇಖವಿದೆ. ಇಂತಹ ಹೆಚ್ಚಿನ ಪ್ರಕರಣಗಳು ಬಿಹಾರ, ಉತ್ತರ ಪ್ರದೇಶ, ಮಧ್ಯಭಾರತ್, ರಾಜಸ್ಥಾನ, ವಿಂಧ್ಯ ಪ್ರದೇಶಗಳಲ್ಲಿ ವರದಿಯಾಗಿದ್ದವು.
ನಂತರದ ಚುನಾವಣೆಗಳಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿತು. ಲೋಕಸಭೆಗೆ 2019ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತ ಹಕ್ಕು ಚಲಾಯಿಸುವ ಮೂಲಕ ಮಹಿಳೆಯರು ದಾಖಲೆ ಬರೆದರು.
2019ರ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ 67.4ರಷ್ಟಿತ್ತು. ಈ ಪೈಕಿ ಹಕ್ಕು ಚಲಾಯಿಸಿದ ಮಹಿಳಾ ಮತದಾರರ ಪ್ರಮಾಣ ಶೇ 67.18ರಷ್ಟಿದ್ದರೆ, ಪುರುಷ ಮತದಾರರ ಪ್ರಮಾಣ ಶೇ 67.01ರಷ್ಟಿತ್ತು.
ಹೆಸರು ಹೇಳಲೂ ನಿರಾಕರಿಸುತ್ತಿದ್ದ ಪರಿಸ್ಥಿತಿಗೆ ಹೋಲಿಸಿದರೆ, ಈ ಅಂಕಿ–ಅಂಶಗಳು ಭಾರತದ ಚುನಾವಣಾ
ವ್ಯವಸ್ಥೆಯಲ್ಲಾದ ಗಣನೀಯ ಸುಧಾರಣೆಗೆ ಕನ್ನಡಿ. ಪುರುಷರ ನೆರಳಿನಿಂದ ಹೊರಬಂದಿದ್ದ ಮಹಿಳೆಯರು ತಮ್ಮದೇ ಛಾಪು ಮೂಡಿಸಲು ಆರಂಭಿಸಿದ್ದರು.
1950ರಲ್ಲಿ ಭಾರತ ಗಣರಾಜ್ಯವಾಗಿ ಘೋಷಣೆಯಾದ ದಿನದ ಮುನ್ನಾದಿನ ಭಾರತ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈವರೆಗೂ 17 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಆದರೆ, ಮೊದಲ ಚುನಾವಣೆಯಲ್ಲಿ ಸವಾಲು ಹೆಚ್ಚಿತ್ತು. ಆಗ ಹೆಚ್ಚಿನವರು ಅನಕ್ಷರಸ್ಥರಾಗಿದ್ದರು.
ಸ್ಥಳೀಯವಾಗಿ ಮಹಿಳೆಯರು ತಮ್ಮ ಹೆಸರು, ಗುರುತು ಹೇಳಿ ಕೊಳ್ಳಲಾಗದ ಸ್ಥಿತಿ ಇದ್ದುದೇ ಆಗಿನ ಭಿನ್ನ ಸಮಸ್ಯೆಗೆ ಕಾರಣವಾಗಿತ್ತು. ಸಮಸ್ಯೆ ಅರಿವಾಗುತ್ತಲೇ, ಮಹಿಳೆಯ ಹೆಸರು, ಕುಟುಂಬದ ಪುರುಷರ ಜೊತೆಗಿನ ಸಂಬಂಧ (ತಾಯಿ, ಸಹೋದರಿ, ಪತ್ನಿ) ಒಳಗೊಂಡು ಮತಪಟ್ಟಿಗೆ ಸೇರಿಸಲು
ಕ್ರಮವಹಿಸಲಾಯಿತು. ಇದಕ್ಕಾಗಿ ಒಂದು ತಿಂಗಳು ಅವಧಿ ವಿಸ್ತರಿಸಲಾಗಿತ್ತು ಎಂದೂ ವರದಿ ಉಲ್ಲೇಖಿಸಿದೆ.
ಮತಪಟ್ಟಿಗೆ ಮಹಿಳೆಯರು ನಿಜ ಹೆಸರು ನಮೂದಿಸಬೇಕು ಎಂದು ತಿಳಿಸಿದ್ದು ಆಯೋಗದ ದೃಢವಾದ ಹೆಜ್ಜೆಯಾಗಿದ್ದು ಹಾಗೂ ಆಗಿನ ಕಠಿಣ ನಿರ್ಧಾರವು ಆಗಿತ್ತು ಎಂದು ಸ್ಮರಿಸುತ್ತಾರೆ ದೆಹಲಿಯ ಮಾಜಿ ಮುಖ್ಯ ಚುನಾವಣಾಧಿಕಾರಿ ಚಂದ್ರ ಭೂಷಣ್ ಕುಮಾರ್.
ಈಗ ಮತ್ತೆ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿರುವ ಹೊತ್ತಿನಲ್ಲಿ ಸಾಕಷ್ಟು ಬದಲಾಗಿದೆ. ಸ್ಥಿತಿ ಬದಲಾಗಿದೆ. ಚುನಾವಣೆ ಪ್ರಕ್ರಿಯೆಯಿಂದ ಭದ್ರತೆವರೆಗೆ ಮಹಿಳೆಯರೇ ನಿರ್ವಹಿಸುವ ‘ಪಿಂಕ್ ಬೂತ್’ಗಳು ಸ್ಥಾಪನೆಯಾಗುತ್ತಿವೆ. ಈಗ ದೇಶದಲ್ಲಿ ಇಂತಹ 27,527 ಮತಗಟ್ಟೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.