ಅಮರಾವತಿ: ಪ್ರತಿ ಕುಟುಂಬಕ್ಕೆ ₹ 2 ಲಕ್ಷ ಮೊತ್ತದ ಕೊಡುಗೆ ನೀಡುವ ಪ್ರಣಾಳಿಕೆಯನ್ನು ತೆಲುಗುದೇಶಂ ಪಕ್ಷ (ಟಿಡಿಪಿ) ಶನಿವಾರ ಬಿಡುಗಡೆ ಮಾಡಿದೆ. ‘ಪಕ್ಷ ಅಧಿಕಾಕ್ಕೆ ಬಂದರೆ, ಪ್ರತಿ ಬಡ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ನೆರವು ನೀಡಲಾಗುವುದು. ಇಷ್ಟು ದೊಡ್ಡ ಕೊಡುಗೆಯನ್ನು ಯಾರೂ ನೀಡಲಾರರು’ ಎಂದುಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶದ ಪ್ರಮುಖ ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಪಕ್ಷವೂ ಪ್ರಣಾಳಿಕೆಯಲ್ಲಿಟಿಡಿಪಿಗೆ ಪೈಪೋಟಿ ನೀಡಿದ್ದು, ಬಹುಮಟ್ಟಿಗೆ ಅಷ್ಟೇ ಮೊತ್ತದ ಕೊಡುಗೆಗಳನ್ನು ಘೋಷಿಸಿದೆ.
ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಬೇಕಾದರೆ ಆಂಧ್ರ ಸರ್ಕಾರದ ಬೊಕ್ಕಸಕ್ಕೆ ಸರಿಸುಮಾರು ₹ 2 ಲಕ್ಷ ಕೋಟಿ ಹಣದ ಅಗತ್ಯ ಬೀಳಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಯಾವ ಪಕ್ಷವೂ ರೈತರ ಸಾಲಮನ್ನಾ ಘೋಷಣೆ ಮಾಡಿಲ್ಲ. ಆದರೆ ರೈತರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿವೆ.
ವಿವಿಧ ವರ್ಗಗಳ ಜನರಿಗೆ 35–45 ಲಕ್ಷ ಹೊಸ ಮನೆಗಳ ನಿರ್ಮಾಣ ಹಾಗೂಹಳೆಯ ಮನೆಗಳ ಮೇಲಿನ ಸಾಲ ಮನ್ನಾ ಮಾಡುವ ಭರವಸೆಯನ್ನು ಎರಡೂ ಪಕ್ಷಗಳು ನೀಡಿವೆ.
ಟಿಡಿಪಿ ಭರವಸೆಗಳು
*ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಮುಂದುವರಿಕೆ
*ಹಾಲಿ ಯೋಜನೆಗಳ ಹಣಕಾಸು ಮಿತಿ ಹೆಚ್ಚಳ
*ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ
*ಉಚಿತ ಉನ್ನತ ಶಿಕ್ಷಣ; ವಿದೇಶದ ಶಿಕ್ಷಣಕ್ಕೆ ₹ 25 ಲಕ್ಷ ಕೊಡುಗೆ
*ಸ್ವಸಹಾಯ ಸಂಘದ ಪ್ರತಿ ಸದಸ್ಯರಿಗೆ ₹10,000 ನೆರವು
ವೈಎಸ್‌ಆರ್‌ಸಿ ಭರವಸೆಗಳು
*‘ಆರೋಗ್ಯ ಶ್ರೀ’ ಯೋಜನೆ; ನೆರವಿಗೆ ಗರಿಷ್ಠ ಮಿತಿ ಇಲ್ಲ
*ಯುವ ವಕೀಲರಿಗೆ ₹60 ಸಾವಿರ ಸ್ಟೈಪೆಂಡ್; ₹100 ಕೋಟಿ ಮೊತ್ತದ ವಕೀಲರ ನಿಧಿ ಸ್ಥಾಪನೆ
*ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 2.3 ಲಕ್ಷ ಹುದ್ದೆ ಭರ್ತಿ
*ಪ್ರತಿ ರೈತರಿಗೆ ವಾರ್ಷಿಕವಾಗಿ ₹1 ಲಕ್ಷದವರೆಗೂ ಕೊಡುಗೆ
*ವಿದೇಶ ವಿದ್ಯಾಭ್ಯಾಸ ವೆಚ್ಚದ ಸಂಪೂರ್ಣ ಮರುಪಾವತಿ
*ಮಗುವನ್ನು ಶಾಲೆಗೆ ಕಳುಹಿಸುವ ಪ್ರತಿ ತಾಯಿಗೆ ವರ್ಷಕ್ಕೆ ₹15 ಸಾವಿರ ನೆರವು
*ಸ್ವಸಹಾಯ ಸಂಘದ ಪ್ರತಿ ಸದಸ್ಯರಿಗೆ ₹50 ಸಾವಿರ ಕೊಡುಗೆ; ಬಡ್ಡಿರಹಿತ ಸಾಲ
*45 ವರ್ಷ ದಾಟಿದ ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತ ಸಮುದಾಯದ ಮಹಿಳೆಗೆ ₹75 ಸಾವಿರ ನೆರವು
*ಮದ್ಯ ನಿಷೇಧ: ಪಂಚತಾರಾ ಹೋಟೆಲ್‌ಗಳಲ್ಲಿ ಮಾತ್ರ ಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.