ನವದೆಹಲಿ:‘ಚೌಕೀದಾರ್ ಸ್ಪಿರಿಟ್ ಇದ್ದಂತೆ, ಚೌಕೀದಾರ್ ಭಾವನೆಯೂ ಆಗಿದೆ. ಅದು ಮಹಾತ್ಮ ಗಾಂಧಿ ಅವರ ಸಿದ್ಧಾಂತವೂ ಆಗಿದೆ. ದೇಶದನಗರ, ಗ್ರಾಮ, ಗಲ್ಲಿ ಗಲ್ಲಿಗಳಲ್ಲಿರುವ ವ್ಯಕ್ತಿ, ಮಹಿಳೆ, ವೈದ್ಯ, ಶಿಕ್ಷಕ, ವ್ಯಾಪರಿ ಎಲ್ಲರೂ ಚೌಕೀದಾರ್’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾನುವಾರ ಸಂಜೆ ‘ನಾನೂ ಚೌಕೀದಾರ್’ ವಿಡಿಯೊ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತೆರಿಗೆ ಪಾವತಿ ಮಾಡುತ್ತಿದ್ದಾನೆ. ದೇಶ ಲೂಟಿ ಮಾಡುವವರಿಂದ ದೇಶವನ್ನು ರಕ್ಷಿಸಬೇಕೋ ಬೇಡವೋ ಎಂದು ಪ್ರಶ್ನಿಸಿದ ಮೋದಿ, ಅದಕ್ಕಾಗಿ ಎಲ್ಲರೂ ಚೌಕೀದಾರ್ ಆಗಿ ಕೆಲಸ ಮಾಡಿ ಎಂದು ಕರೆ ನೀಡಿದರು.
ಚುನಾವಣೆ ಮುಂದಿದೆ. ದೇಶದ ಜನರ ಮೇಲೆ ವಿಶ್ವಾಸವಿದೆ. ಚೌಕೀದಾರ್ ಎಂಬ ಭಾವನೆ ನಿರಂತರ ವಿಸ್ತಾರವಾಗುತ್ತಾ ಹೋಗಬೇಕು ಎಂದರು.
ದೇಶದ ಅಭಿವೃದ್ಧಿ ಮೋದಿ ಕಾರಣ ಅಲ್ಲ. ಪೂರ್ಣ ಬಹುಮತದಿಂದಾಗಿ ದೇಶ ಅಭಿವೃದ್ಧಿ ಸಾಧಿಸುತ್ತಿದೆ.ದೇಶಕ್ಕೆ ಪೂರ್ಣ ಬಹುಮತದ ಸರ್ಕಾರ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಕೈ ಜೋಡಿಸುತ್ತೀರಿ ಎಂಬ ವಿಶ್ವಾಸ ನಮಗಿದೆ ಎಂದರು.
ಪಾಕಿಸ್ತಾನಕ್ಕೆ ಏರ್ ಸ್ಟ್ರೈಕ್‌ನಿಂದ ಬಿಸಿ ಮುಟ್ಟಿದೆ. ಪಾಕಿಸ್ತಾನ ಬಾಲಕೋಟ್‌ನಲ್ಲಿ ಮರು ನಿರ್ಮಾಣ ಮಾಡುತ್ತಿದೆ. ಬಾಲಾಕೋಟ್ ಮೇಲೆ ದಾಳಿ ಮಾಡಿದ್ದು ನಾನಲ್ಲ, ನಮ್ಮ ವೀರ ಯೋದರು. ಅವರಿಗೆ ಗೌರವ ಸಲ್ಲಿಸೋಣ. ವಂಚಕರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಬಿಡುವುದಿಲ್ಲ ಎಂದರು.
‘ಮಾರ್ಚ್ 16ರಂದು ‘ನಾನೂ ಚೌಕೀದಾರ್’ ಆಂದೋಲನವನ್ನು ಮೋದಿ ಆರಂಭಿಸಿದರು. ಬಡತನ, ಭ್ರಷ್ಟಾಚಾರ, ಕೊಳಕು, ಭಯೋತ್ಪಾದನೆ ಇನ್ನಿತರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬನೂ ಚೌಕೀದಾರ್ ಆಗಿದ್ದಾರೆ ಎಂದು ಪ್ರಧಾನಿ ಈ ಪದದ ಮರು ವ್ಯಾಖ್ಯಾನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.