ಕಂಪ್ಲಿ: ‘ಶಾಸಕ ಜೆ.ಎನ್. ಗಣೇಶ ಅವರ ಅಮಾನತು ಆದೇಶವನ್ನು ಮೂರು ದಿನಗಳ ಒಳಗಾಗಿ ಹಿಂಪಡೆಯದಿದ್ದಲ್ಲಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವುದಿಲ್ಲ’ ಎಂದು ಗಣೇಶ ಬೆಂಬಲಿಗರು ಹೇಳಿದ್ದಾರೆ.
ಸಂಸದ ವಿ.ಎಸ್. ಉಗ್ರಪ್ಪ ಅವರೊಂದಿಗೆ ಭಾನುವಾರ ಮಾತನಾಡಿದ ಅವರು, ಗಣೇಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
‘ಕಂಪ್ಲಿ ಕ್ಷೇತ್ರದಲ್ಲಿ ಶಾಸಕ ಗಣೇಶ ಇಲ್ಲದೆ ಮತಯಾಚಿಸಲು ನಿಮಗೆ ಹೇಗೆ ಮನಸ್ಸು ಬರುತ್ತದೆ? ಲೋಕಸಭೆ ಉಪ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 34 ಸಾವಿರ ಮತಗಳು ನಿಮಗೆ ಸಿಗಲು ಅವರೇ ಕಾರಣ. ಅವರನ್ನೇ ಮರೆತರೆ ಹೇಗೆ? ರೆಸಾರ್ಟ್‌ನಲ್ಲಿ ನಡೆದ ಗಲಾಟೆಯಲ್ಲಿ ಗಣೇಶ ಒಬ್ಬರದೇ ತಪ್ಪಿದೆಯೇ? ಅವರಿಗೆ ಮಾತ್ರ ಜೈಲು ಯಾಕೆ?’ ಎಂದು ಹರಿಹಾಯ್ದರು.
ವಿ.ಎಸ್. ಉಗ್ರಪ್ಪ ಮಾತನಾಡಿ, ‘ನಿಮ್ಮ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಗಣೇಶ ಜಾಮೀನು ವಿಷಯ ನ್ಯಾಯಾಲಯದ ವ್ಯಾಪ್ತಿಯಲ್ಲಿರುವುದರಿಂದ ಈ ಕುರಿತು ಮಾತನಾಡುವುದು ಸರಿಯಲ್ಲ. ಇದು ಸೂಕ್ಷ್ಮ ವಿಚಾರವಾಗಿದ್ದು, ಕಾರ್ಯಕರ್ತರು ತಾಳ್ಮೆಯಿಂದ ವರ್ತಿಸಬೇಕು’ ಎಂದು ಮನವಿ ಮಾಡಿದರು.
‘ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಸೇರಿದಂತೆ ಇತರ ಮುಖಂಡರು ಆನಂದ್‌ಸಿಂಗ್ ಕುಟುಂಬದವರೊಂದಿಗೆ ಮಾತನಾಡಿದ್ದೇವೆ. ಜಾಮೀನು ದೊರೆಯಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಗಣೇಶ ಮತ್ತು ಆನಂದಸಿಂಗ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು ಪರಸ್ಪರ ಸಾಮರಸ್ಯಕ್ಕೆ ಒಪ್ಪಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಸೇರಿ ಗಣ್ಯರೊಂದಿಗೆ ಈಗಾಗಲೇ ಚರ್ಚಿಸಿದ್ದೇವೆ. ಪಕ್ಷದ ಹೊರಡಿಸಿದ ಅಮಾನತು ಹಿಂದಕ್ಕೆ ಪಡೆಯುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.
‘ಶಾಸಕ ಜೆ.ಎನ್. ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿದ್ದು, ಕೂಡಲೇ ಹಿಂದಕ್ಕೆ ಪಡೆಯಬೇಕು. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಗಣೇಶ್ ಅಭಿಮಾನಿಗಳು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.