ಮಂಡ್ಯ: ಜಿಲ್ಲಾ ಚುನಾವಣಾಧಿಕಾರಿಗಳು ನಿಖಿಲ್ ಕುಮಾರಸ್ವಾಮಿ ಅವರಿಗೆ ಕ್ರಮಸಂಖ್ಯೆ 1 ನೀಡಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಕ್ರಮಸಂಖ್ಯೆ 20 ನೀಡಿರುವುದಕ್ಕೆ ಸುಮಲತಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ಪಕ್ಷದ ಅಭ್ಯರ್ಥಿಗೆ ಕ್ರಮ ಸಂಖ್ಯೆ 1 ನೀಡಿರುವುದು ಕಾನೂನು ಬಾಹಿರ. ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಜಿಲ್ಲಾ ಚುನಾವಣಾಧಿಕಾರಿ ತಾರತಮ್ಯ ಮಾಡಿದ್ದಾರೆ. ಪ್ರತಿ ವಿದ್ಯುನ್ಮಾನ ಮತಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರು ಇರುತ್ತವೆ. ಸುಮಲತಾ ಕ್ರಮಸಂಖ್ಯೆ 20 ಆಗಿದ್ದು 2ನೇ ಮತಯಂತ್ರದಲ್ಲಿ ಅವರ ಹೆಸರು ಬರುತ್ತದೆ. ಮತದಾರರಿಗೆ ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ 20ನೇ ಕ್ರಮ ಸಂಖ್ಯೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲೆ, ಕೆಳಗೆ ಸುಮಲತಾ
ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಮಾತನಾಡಿದ ಸುಮಲತಾ ‘ನನ್ನ ಹೆಸರಿನ ಮೇಲೆ ಒಬ್ಬರು ಸುಮಲತಾ ಇದ್ದಾರೆ, ಅವರಿಗೆ ಯಾವುದೇ ಸಂಕೇತಾಕ್ಷರಗಳಿಲ್ಲ. ಕೆಳಗೆ ಎಂ.ಸುಮಲತಾ, ಪಿ.ಸುಮಲತಾ ಇದ್ದಾರೆ. ಮತದಾರರ ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ. ಜೊತೆಗೆ ನಾಮಪತ್ರ ಪರಿಶೀಲನೆ ವೇಳೆ ನಮ್ಮ ಏಜೆಂಟರ ಆಕ್ಷೇಪಣೆಗೆ ಮನ್ನಣೆ ನೀಡಿಲ್ಲ. ಇದರ ವಿರುದ್ಧ ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ’ ಎಂದು ಹೇಳಿದರು.
* ಇದನ್ನೂ ಓದಿ:ಮಂಡ್ಯ:ಚುನಾವಣಾಧಿಕಾರಿ ವಿರುದ್ಧ ತನಿಖೆ- ಸಂಜೀವ್ ಕುಮಾರ್
ನೋಟಿಸ್‌ನಲ್ಲೂ ತಪ್ಪು
ಜಿಲ್ಲಾ ಚುನಾವಣಾಧಿಕಾರಿ ಶುಕ್ರವಾರ ಸುಮಲತಾ ಅವರಿಗೆ ಜಾರಿಮಾಡಿರುವ ನೋಟಿಸ್‌ನಲ್ಲಿ ಅವರ ಹೆಸರನ್ನು ಎರಡು ರೀತಿಯಲ್ಲಿ ನಮೂದಿಸಿ ಗೊಂದಲ ಸೃಷ್ಟಿಸಿದ್ದಾರೆ. ನೋಟಿಸ್ ಆರಂಭದಲ್ಲಿ ಎಂ.ಸುಮಲತಾ ಎಂದು ನಮೂದಿಸಲಾಗಿದೆ, ಕೊನೆಯಲ್ಲಿ ಎ.ಸುಮಲತಾ ಎಂದು ಪೂರ್ಣಗೊಳಿಸಲಾಗಿದೆ. ಕಣದಲ್ಲಿ ಎಂ.ಸುಮಲತಾ ಎಂಬ ಮತ್ತೊಬ್ಬ ಅಭ್ಯರ್ಥಿ ಇದ್ದು ನೋಟಿಸ್ ಜಾರಿ ಮಾಡಿರುವುದು ಯಾರಿಗೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
‘ನೋಟಿಸ್ ನನ್ನ ಕೈಸೇರಿಲ್ಲ. ನನ್ನ ಅಧಿಕೃತ ಚಿನ್ಹೆಯೂ ಬಂದಿಲ್ಲ. ಅಧಿಕಾರಿಗಳ ನಡೆಯ ಬಗ್ಗೆ ಅನುಮಾನವಿದೆ. ನಾವು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದು ಮುಂದಿನ ಕ್ರಮದ ಬಗ್ಗೆ ಭಾನುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತೇನೆ’ ಎಂದು ಸುಮಲತಾ ತಿಳಿಸಿದರು.
ಬಿಎಸ್‌ಪಿ ಅಭ್ಯರ್ಥಿ ಆರೋಪ: ರಾಷ್ಟ್ರೀಯ ಪಕ್ಷವಾಗಿರುವ ಬಿಎಸ್‌ಪಿ ಅಭ್ಯರ್ಥಿಗೆ ಕ್ರಮಸಂಖ್ಯೆ 2 ನೀಡಿ, ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿಗೆ ಕ್ರಮಸಂಖ್ಯೆ 1 ನೀಡಿ ತಾರತಮ್ಯ ಮಾಡಲಾಗಿದೆ ಎಂದು ಬಿಎಸ್‌ಪಿ ಅಭ್ಯರ್ಥಿ ನಂಜುಂಡಸ್ವಾಮಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.