ADVERTISEMENT

ಬಿಜೆಪಿ ಕೋಟೆಯಲ್ಲಿ ಮೋಡಿ ಮಾಡುವರೆ ಊರ್ಮಿಳಾ...

ಮೃತ್ಯುಂಜಯ ಬೋಸ್
Published 25 ಏಪ್ರಿಲ್ 2019, 19:40 IST
Last Updated 25 ಏಪ್ರಿಲ್ 2019, 19:40 IST
ಕೊಳೆಗೇರಿ ನಿವಾಸಿಯೊಬ್ಬರ ಮತ ಯಾಚಿಸಿದ ಊರ್ಮಿಳಾ ಮಾತೋಂಡ್ಕರ್
ಕೊಳೆಗೇರಿ ನಿವಾಸಿಯೊಬ್ಬರ ಮತ ಯಾಚಿಸಿದ ಊರ್ಮಿಳಾ ಮಾತೋಂಡ್ಕರ್   

ಮುಂಬೈ: ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಬಿಜೆಪಿಯು ಹಾಲಿ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ನಿಂದ ಊರ್ಮಿಳಾ ಮಾತೋಂಡ್ಕರ್ ಸ್ಪರ್ಧೆಗೆ ಇಳಿದಿದ್ದಾರೆ. ಈ ಕಾರಣಕ್ಕೇ ಈ ಕ್ಷೇತ್ರವು ದೇಶದ ಗಮನ ಸೆಳೆದಿದೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂಜಯ್ ನಿರುಪಮ್ ಅವರನ್ನು ಬಿಜೆಪಿಯ ಗೋಪಾಲ್ ಶೆಟ್ಟಿ ಅವರು ಬರೋಬ್ಬರು 4.46 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಗೋಪಾಲ್ ಶೆಟ್ಟಿ ಅವರಿಗೆ ಈ ಕ್ಷೇತ್ರದಲ್ಲಿ ಭಾರಿ ಹಿಡಿತವಿದೆ. ಕಾರ್ಪೊರೇಟರ್‌ ಆಗಿ, ಮುಂಬೈ ಮೇಯರ್ ಆಗಿ ಮತ್ತು ಶಾಸಕನಾಗಿಯೂ ಅವರು ದುಡಿದಿದ್ದಾರೆ. 1989ರಿಂದ 2004ರವರೆಗೂ ಬಿಜೆಪಿಯ ಹಿರಿಯ ನಾಯಕ ರಾಮ್ ನಾಯಕ್ ಅವರು ಈ ಕ್ಷೇತ್ರವನ್ನು ಸಂಸತ್ತಿನಲ್ಲಿ ಐದು ಭಾರಿ ಪ್ರತಿನಿಧಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇದನ್ನು ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತದೆ.

ಕಾಂಗ್ರೆಸ್‌ ಸಹ ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದೆ.2004ರಿಂದ 2009ರವರೆಗೆ ನಟ ಗೋವಿಂದ ಅವರು ಕಾಂಗ್ರೆಸ್‌ ಸಂಸದನಾಗಿಮತ್ತು 2009ರಲ್ಲಿ ಸಂಜಯ್ ನಿರುಪಮ್ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ADVERTISEMENT

ಆದರೆ 2014ರ ಚುನಾವಣೆ ಏಕಪಕ್ಷೀಯವಾಗಿತ್ತು. ಈ ಬಾರಿಯೂ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವನ್ನು ಗೋಪಾಲ್‌ ಶೆಟ್ಟಿ ಹೊಂದಿದ್ದಾರೆ.‘28 ವರ್ಷಗಳಿಂದ ನಾನು ಈ ಕ್ಷೇತ್ರದಲ್ಲಿ ದುಡಿದಿದ್ದೇನೆ. ನಾನು ಮಾಡಿರುವ ಕೆಲಸಗಳೇ ನನ್ನ ಖಜಾನೆ. ಜನರ ಮುಂದೆ ಹೋಗಲು ನನಗೆ ಶಕ್ತಿ ನೀಡುವುದೂ ಅದೇ’ ಎಂದು ಅವರು ಹೇಳಿದ್ದಾರೆ.

‘ಇದು ತತ್ವ–ಸಿದ್ದಾಂತಗಳ ಹೋರಾಟ. ನಾವು ಹೋದೆಡೆಯೆಲ್ಲಾ ಅಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಜನರು ಮಾತನಾಡುತ್ತಾರೆ. ಅವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ನ ಪ್ರಣಾಳಿಕೆ ತೀರಾ ದೊಡ್ಡದು’ ಎಂಬುದುಕಾಂಗ್ರೆಸ್‌ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಅವರ ವಿಶ್ವಾಸದ ಮಾತು.

ನಾವು ಜನರ ಬಳಿಗೆ ಹೋಗುತ್ತಿದ್ದೇವೆ. ಹೀಗಾಗಿ ಗೆಲುವು ನಮ್ಮದೇ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.

ವಲಸಿಗರೇ ನಿರ್ಣಾಯಕ
* ಇಲ್ಲಿ ಗುಜರಾತಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುತೇಕರು ಬಿಜೆಪಿಗೆ ಮತ ಹಾಕುತ್ತಾರೆ

* ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ನಾಲ್ಕರಲ್ಲಿ ಬಿಜೆಪಿ, ತಲಾ ಒಂದರಲ್ಲಿ ಕಾಂಗ್ರೆಸ್‌ ಮತ್ತು ಶಿವಸೇನಾ ಗೆಲುವು ಸಾಧಿಸಿವೆ

* ದೇಶದ ಬೇರೆ ಬೇರೆ ಕಡೆಯಿಂದ ಪ್ರತಿದಿನ ಹೊಸಬರು ಬಂದು ನೆಲೆಸುವುದರಿಂದ, ವಲಸಿಗರ ಮತ ಯಾರಿಗೆ ಸಿಗಲಿದೆ ಎಂಬುದು ಅನಿಶ್ಚಿತ

* ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದ ಎಲ್ಲಾ ವರ್ಗದ ಜನರ ಮನೆಗಳಿಗೆ ಎಡತಾಕುತ್ತಿದ್ದಾರೆ

* ಕ್ಷೇತ್ರದಲ್ಲಿರುವ ಕೊಳೆಗೇರಿ ನಿವಾಸಿಗಳು, ಆಟೊ ಮತ್ತು ಟ್ಯಾಕ್ಸಿ ಚಾಲಕರು,ಪೌರ ಕಾರ್ಮಿಕರನ್ನು ಕೇಂದ್ರೀಕರಿಸಿ ಊರ್ಮಿಳಾ ಪ್ರಚಾರ ನಡೆಸುತ್ತಿದ್ದಾರೆ.

2014ರ ಫಲಿತಾಂಶ
*
ಗೋಪಾಲ್ ಶೆಟ್ಟಿ (ಬಿಜೆಪಿ) 6.64 ಲಕ್ಷ ಮತಗಳು
* ಸಂಜಯ್ ನಿರುಪಮ್ (ಕಾಂಗ್ರೆಸ್‌) 2.17 ಲಕ್ಷ ಮತಗಳು
*4.46 ಲಕ್ಷ ಗೆಲುವಿನ ಅಂತರ
* 17.25 ಈ ಬಾರಿಯ ಮತದಾರರ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.