ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಡಳಿತದ ಯಶಸ್ಸಿನ ಹಿಂದೆ ಇರುವುದು ಅಧಿಕಾರಿ ವರ್ಗದ ಶ್ರಮ. ಅವಿಭಜಿತ ಆಂಧ್ರ ಪ್ರದೇಶದಲ್ಲಿ 1994ರಿಂದ ಎರಡು ಅವಧಿ ಆಡಳಿತ ನಡೆಸಿದ್ದಾಗ ಅಧಿಕಾರಿ ವರ್ಗವನ್ನೇ ನೆಚ್ಚಿಕೊಂಡಿದ್ದರು ನಾಯ್ಡು. ಇವರನ್ನು ಆಗ ಬಾಬುಗಳ (ಅಧಿಕಾರಿಗಳ) ಬಾಬು ಎಂದೂ ಕರೆಯುತ್ತಿದ್ದರಂತೆ! ಆಡಳಿತ, ರಾಜಕೀಯ ಸಲಹೆಗಳಿಗಾಗಿ ಅಧಿಕಾರಿಗಳ ತಂಡವನ್ನೇ ಕಟ್ಟಿಕೊಂಡಿದ್ದಾರೆ.
ಈ ಪೈಕಿ ಷೇರು ಬ್ರೋಕರ್ ಸಿ. ಕುಟುಂಬ ರಾವ್ ಮತ್ತು ಮುಖ್ಯಮಂತ್ರಿಗಳ ಮಾಹಿತಿ ತಂತ್ರಜ್ಞಾನ ವಿಷಯಗಳನ್ನು ನೋಡಿಕೊಳ್ಳುತ್ತಿರುವ ಹರಿಪ್ರಸಾದ್ ಪ್ರಮುಖರು. ಇವರಿಗೆ ಸೈಬರ್ ಬಾಬು ಎಂದೂ ಅಡ್ಡಹೆಸರಿದೆ. ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ನಾಯ್ಡುಗೆ ಮನವರಿಕೆ ಮಾಡಿಕೊಟ್ಟದ್ದೇ ಹರಿಪ್ರಸಾದ್. ಈ ವಿಷಯವನ್ನು ಹಲವು ವೇದಿಕೆಗಳಲ್ಲಿ ನಾಯ್ಡು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಪ್ರತಿಪಕ್ಷಗಳ ಜತೆಸೇರಿ ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ದೂರನ್ನೂ ನೀಡಿದ್ದಾರೆ. ಸದ್ಯ ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆಹರಿಪ್ರಸಾದ್.
ರಾಜಕೀಯ ತಂತ್ರಗಾರಿಕೆ ವಿಚಾರಕ್ಕೆ ಬಂದಾಗ ಹಾಲಿ ಹಣಕಾಸು ಸಚಿವ ಯನಮಾಲ ರಾಮಕೃಷ್ಣುಡು ಮತ್ತು ಕಾಲಾ ವೆಂಕಟ ರಾವ್ ಅವರನ್ನು ನೆಚ್ಚಿಕೊಂಡಿದ್ದಾರೆ ನಾಯ್ಡು. ಈ ಪೈಕಿ ತೆಲುಗುದೇಶಂ ಪಕ್ಷದಲ್ಲಿ (ಟಿಡಿಪಿ) ದೀರ್ಘ ಕಾಲದ ಒಡನಾಟ ಹೊಂದಿದ್ದಾರೆ ರಾಮಕೃಷ್ಣುಡು. 1982ರಲ್ಲಿ ಟಿಡಿಪಿ ರಚನೆಯಾದಂದಿನಿಂದ ಪಕ್ಷಕ್ಕಾಗಿ ದುಡಿದಿರುವ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2009 ಮತ್ತು 2014ರಲ್ಲಿ ಮಾತ್ರ ಸೋಲನುಭವಿಸಿದ್ದಾರೆ. ಬಳಿಕ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ನಾಯ್ಡು ಸಂಪುಟ ಸೇರಿದ್ದಾರೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.