ನವದೆಹಲಿ: ‘ರಾಮ ಮನೋಹರ್ ಲೋಹಿಯಾ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿರುವ ಪ್ರಾದೇಶಿಕ ಪಕ್ಷಗಳು, ಲೋಹಿಯಾ ಅವರ ವಿರೋಧಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಜತೆಗೇ ‘ಮಹಾ ಕಲಬೆರಕೆ’ಗೆ ಮುಂದಾಗಿವೆ. ಇದು ಅತ್ಯಂತ ವಿಪರ್ಯಾಸದ ಮತ್ತು ಖಂಡನೀಯ ಬೆಳವಣಿಗೆ. ಲೋಹಿಯಾ ಅವರು ಇಂದು ಇದ್ದಿದ್ದರೆ ಇದನ್ನು ನೋಡಿ ದಂಗಾಗುತ್ತಿದ್ದರು’ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ರಾಮ ಮನೋಹರ್ ಲೋಹಿಯಾ ಅವರ 109ನೇ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಅವರು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಈ ಮಾತು ಇದೆ.
‘ಲೋಹಿಯಾ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಪಕ್ಷಗಳೆಲ್ಲಾ ಇಂದು ಅವರ ತತ್ವಗಳನ್ನು ಕಡೆಗಣಿಸಿವೆ. ಲೋಹಿಯಾ ಅವರಿಗೆ ಅಪಮಾನ ಮಾಡುವ ಯಾವ ಅವಕಾಶವನ್ನೂ ಈ ಪಕ್ಷಗಳು ಬಿಟ್ಟಿಲ್ಲ’ ಎಂದು ಅವರು ಮಹಾಮೈತ್ರಿಕೂಟದ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್‌ಗೆ ನಡುಕ
‘ಸಂಸತ್ತಿನ ಹೊರಗಾಗಲೀ, ಸಂಸತ್ತಿನ ಒಳಗಾಗಲೀ ಲೋಹಿಯಾ ಮಾತು ಆರಂಭಿಸಿದರೆ ಕಾಂಗ್ರೆಸ್‌ಗೆ ನಡುಕ ಆರಂಭವಾಗುತ್ತಿತ್ತು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೃಷಿ ಕ್ಷೇತ್ರವಾಗಲೀ, ಕೈಗಾರಿಕಾ ಕ್ಷೇತ್ರವಾಗಲೀ ಸುಧಾರಿಸಲಿಲ್ಲ ಎಂದು ಲೋಹಿಯಾ ಅವರು ಸದಾ ಟೀಕಿಸುತ್ತಿದ್ದರು. ಲೋಹಿಯಾ ಯುಗದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲೂ ಹೀಗೇ ಆಗಿತ್ತು. ಆ ಸರ್ಕಾರಗಳಂತೂ ರೈತರನ್ನು ಶೋಷಿಸಿದವು, ಉದ್ದಿಮೆಗಳನ್ನು ತುಳಿದವು (ಕಾಂಗ್ರೆಸ್ ಸ್ನೇಹಿತರ ಮತ್ತು ಕಾಂಗ್ರೆಸ್ ನಾಯಕರ ಉದ್ದಿಮೆಗಳು ಮಾತ್ರ ಸುಧಾರಣೆಗೊಂಡವು) ಮತ್ತು ದೇಶದ ಭದ್ರತೆಯನ್ನು ಕಡೆಗಣಿಸಿದವು’ ಎಂದು ಮೋದಿ ತಮ್ಮ ಬ್ಲಾಗ್ ಬರಹದಲ್ಲಿ ಆರೋಪಿಸಿದ್ದಾರೆ.
* ಲೋಹಿಯಾ ಅವರ ಬೆನ್ನಿಗೆ ಚೂರಿ ಹಾಕಿದವರು ದೇಶವನ್ನು ಆಳಬೇಕು ಎಂದು ಹೇಗೆ ನಿರೀಕ್ಷಿಸುತ್ತಿದ್ದಾರೋ? ಇವತ್ತು ಆ ಪಕ್ಷಗಳು ಲೋಹಿಯಾ ಅವರ ಬೆನ್ನಿಗೆ ಚೂರಿ ಹಾಕುತ್ತಿವೆ. ನಾಳೆ ಭಾರತೀಯರೆಲ್ಲರ ಬೆನ್ನಿಗೂ ಚೂರಿ ಹಾಕುತ್ತವೆ.
-ನರೇಂದ್ರ ಮೋದಿ, ಪ್ರಧಾನಿ
* ಮೋದಿ ಯಾವ ತತ್ವಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಬಿಜೆಪಿಯದ್ದು ದ್ವಿಮುಖ ನಿಲುವು. ಒಂದೆಡೆ ಅವರು ಮಹಾತ್ಮ ಗಾಂಧಿ, ಭಗತ್ ಸಿಂಗ್, ಸರ್ದಾರ್ ಪಟೇಲ್, ಡಾ. ಅಂಬೇಡ್ಕರ್ ಮತ್ತು ಡಾ. ಲೋಹಿಯಾ ಅವರ ಅನುಯಾಯಿ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದೆಡೆ ಈ ನಾಯಕರನ್ನೆಲ್ಲಾ ವಿರೋಧಿಸುತ್ತಿದ್ದ ಜನರನ್ನು ಬಿಜೆಪಿ ಅನುಕರಿಸುತ್ತದೆ
-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.