ಮಡಿಕೇರಿ: ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಕೊಡಗಿನಲ್ಲೂ ಮೈತ್ರಿಕೂಟದ (ಜೆಡಿಎಸ್ – ಕಾಂಗ್ರೆಸ್) ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
‘ಮೈತ್ರಿ’ ಬಲದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ ಎಂಬ ಅಭಿಪ್ರಾಯ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿದೆ. ಇಬ್ಬರು ಬಿಜೆಪಿ ಶಾಸಕರು ಹಾಗೂ ಒಬ್ಬ ಬಿಜೆಪಿ ವಿಧಾನ ಪರಿಷತ್ ಸದಸ್ಯರಿರುವ ಕಾರಣಕ್ಕೆ ಬಿಜೆಪಿ ಅಭ್ಯರ್ಥಿಗೇ ಬಲವಿದೆ. ವಿಜಯಶಂಕರ್ ಅವರಿಗೆ ಮೈತ್ರಿಯೇ ಆನೆ ಬಲ ತಂದಿದೆ.
ಪ್ರಾಕೃತಿಕ ವಿಕೋಪದ ಬಳಿಕ ಕೊಡಗಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸ್ಥಳೀಯ ವಿಚಾರಗಳು ಚುನಾವಣೆಯಲ್ಲಿ ಗೌಣವಾಗಿವೆ. ಬಿಜೆಪಿ, ಮೋದಿ ಹವಾ ಹಾಗೂ ರಾಷ್ಟ್ರೀಯವಾದದ ವಿಚಾರವನ್ನು ನೆಚ್ಚಿಕೊಂಡು ಮತ ಸೆಳೆಯಲು ಪ್ರಯತ್ನಿಸುತ್ತಿದೆ. ಸೈನಿಕರ ನಾಡಾಗಿರುವ ಕಾರಣಕ್ಕೆ ಕೊಡಗು ಬಿಜೆಪಿಯು ದೇಶದ ಭದ್ರತೆಯ ವಿಚಾರವನ್ನೇ ಹೆಚ್ಚಾಗಿ ಪ್ರಸ್ತಾಪಿಸುತ್ತಿದೆ. ಜತೆಗೆ, 2015ರಲ್ಲಿ ಗಲಭೆಗೆ ಕಾರಣವಾಗಿದ್ದ ಟಿಪ್ಪು ಜಯಂತಿಯನ್ನು ಬಿಜೆಪಿ ‘ಅಸ್ತ್ರ’ವಾಗಿ ಮಾಡಿಕೊಂಡಿದೆ.
ಕೊಡವರ ಪ್ರಾಬಲ್ಯವಿದ್ದರೂ ಒಕ್ಕಲಿಗ ಗೌಡ, ಅರೆಭಾಷೆ ಗೌಡ, ಲಿಂಗಾಯಿತರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಲ್ಪಸಂಖ್ಯಾತ ಮತದಾರರೂ ಇದ್ದಾರೆ. ಮೈತ್ರಿ ಅಭ್ಯರ್ಥಿ ತಮ್ಮ ಸಾಂಪ್ರದಾಯಿಕ ಮತಗಳ ಮೇಲೆ ಹೆಚ್ಚು ನಂಬಿಕೆ ಇರಿಸಿಕೊಂಡಿದೆ. ಆ ನಿಟ್ಟಿನಲ್ಲೇ ಮತಬುಟ್ಟಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಸಾಗುತ್ತಿದೆ.
ವಿಜಯಶಂಕರ್ ಅವರು ‘ನಾನು ಕೊಡಗಿನ ಅಳಿಯ. ಆನೆ– ಮಾನವ ಸಂಘರ್ಷ, ಕಾಫಿ ಬೆಳೆಗಾರರ ಸಮಸ್ಯೆ, ನದಿ ಮಾಲಿನ್ಯ ಹಾಗೂ ಕಸ್ತೂರಿ ರಂಗನ್ ವರದಿಯ ವಿಚಾರಗಳ ಅರಿವಿದೆ...’ ಎಂದು ಹೇಳುತ್ತಲೇ ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ವಿಜಯಶಂಕರ್ ಸರಳ, ಸಜ್ಜನಿಕೆ ವ್ಯಕ್ತಿ ಎಂಬುದು ಪ್ಲಸ್ ಆಗಬಹುದು.
ಕಳೆದ ನಾಲ್ಕು ವರ್ಷಗಳಿಂದ ಕಾಫಿ ಹಾಗೂ ಕಾಳು ಮೆಣಸಿನ ಧಾರಣೆ ಕುಸಿದು ಕೈಸುಟ್ಟುಕೊಂಡಿರುವ ರೈತರು ಮಾತ್ರ ಎಲ್ಲವನ್ನೂ ನಿಗೂಢವಾಗಿ ನೋಡುತ್ತಿದ್ದಾರೆ. ಜಿಲ್ಲೆಯ ಎಲ್ಲ ಸಮುದಾಯದ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಧಾರಣೆ ಕುಸಿತದಿಂದ ಕಾರ್ಮಿಕರ ವೇತನದ ಮೇಲೂ ಪರಿಣಾಮ ಬೀರಿದೆ. ನಷ್ಟ ಅನುಭವಿಸುತ್ತಿರುವ ರೈತರು ಹಾಗೂ ಸಮಸ್ಯೆಯ ಸುಳಿಗೆ ಸಿಲುಕಿರುವ ಕಾರ್ಮಿಕರ ಚಿತ್ತ ಯಾರತ್ತ ಎಂಬುದೇ ಕುತೂಹಲ.
ಕೇಂದ್ರದ ಪ್ಯಾಕೇಜ್ ಹುಸಿ!: ಕಳೆದ ಆಗಸ್ಟ್‌ನಲ್ಲಿ ಜಿಲ್ಲೆಯು ಇತಿಹಾಸದಲ್ಲೇ ದೊಡ್ಡ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿತ್ತು. ಸಾವಿರಾರು ಮಂದಿ ಆಶ್ರಯ ಕಳೆದುಕೊಂಡಿದ್ದರು. ಹಲವರು ಪ್ರಾಣ ಕಳೆದುಕೊಂಡಿದ್ದರು. ಆಶ್ರಯ ಕಳೆದುಕೊಂಡು ಪರಿಹಾರ ಕೇಂದ್ರ ಸೇರಿದ್ದರು. ಭೂಕುಸಿತದಿಂದ ಕಾಫಿ ತೋಟವನ್ನೇ ಕಳೆದುಕೊಂಡಿದ್ದ ಉದಾರಹಣೆಗಳೂ ಸಾಕಷ್ಟಿವೆ.
ಆ ನೋವು ಇನ್ನೂ ಕಾಡುತ್ತಿದೆ. ಮತ್ತೊಂದು ಮಳೆಗಾಲ ಸಮೀಪಿಸಿದ್ದರೂ ವಿಕೋಪದ ನೋಟಗಳು ಮಾತ್ರ ಮರೆಯಾಗಿಲ್ಲ. ಭೂಕುಸಿತದ ಸಂಕಷ್ಟಕ್ಕೆ ಒಳಗಾದವರು, ದೊಡ್ಡ ಮೊತ್ತದ ಪ್ಯಾಕೇಜ್ ನೀಡಬೇಕೆಂದು ಅಂದು ಕೇಂದ್ರವನ್ನು ಆಗ್ರಹಿಸಿದ್ದರು. ಆದರೆ, ಕೇಂದ್ರ ಸರ್ಕಾರವು ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸೇರಿ ₹ 546 ಕೋಟಿ ನೆರವನ್ನು ಬಿಡುಗಡೆ ಮಾಡಿತ್ತು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮದಂತೆ ಅಲ್ಪಪ್ರಮಾಣದ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಪ್ರತ್ಯೇಕ ಪ್ಯಾಕೇಜ್ ಬೇಡಿಕೆ ಹುಸಿಯಾಗಿದ್ದರ ಸಿಟ್ಟು ಇನ್ನೂ ಉಳಿದಿದೆ. ಅದೂ ಸಹ ಪರಿಣಾಮ ಬೀರುವ ಸಾಧ್ಯತೆಯಿದೆ.
ಬಂಡಾಯ ಶಮನ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.ಎಂ.ಬಿ. ಗಣೇಶ್ ಅವರು ನೇಮಕವಾದ ನಂತರ ಮಾಜಿ ಸಚಿವ ಬಿ.ಎ. ಜೀವಿಜಯ ಬಂಡಾಯ ಎದ್ದಿದ್ದರು. ಪ್ರಚಾರದಿಂದಲೂ ದೂರ ಸರಿದಿದ್ದರು. ಕಾಂಗ್ರೆಸ್ ಕೊಡಗು ಉಸ್ತುವಾರಿ ಎಚ್.ಸಿ. ಮಹಾದೇವಪ್ಪ ಅವರು ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮೈತ್ರಿ ಅಭ್ಯರ್ಥಿಗೆ ಬಲ ತಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕಾರ್ಯಕರ್ತರು ಹಾಗೂ ಮುಖಂಡರು ಜಂಟಿ ಪ್ರಚಾರ ನಡೆಸುತ್ತಿದ್ದಾರೆ. ಐದು ವರ್ಷದಲ್ಲಿ ಪ್ರತಾಪ ಸಿಂಹ ಜಿಲ್ಲೆಗೆ ಯಾವ ಅಭಿವೃದ್ಧಿ ಮಾಡಿದ್ದಾರೆ? ರೈಲು ತರುವ ಭರವಸೆ ಈಡೇರಿದೆಯೇ ಎಂದೂ ಪ್ರಶ್ನಿಸುತ್ತಿದ್ದಾರೆ.
ಕೈಗೆ ಸಿಗುವುದಿಲ್ಲ: ಸಂಸದ ಪ್ರತಾಪ ಸಿಂಹ ಅವರು ಕೊಡಗು ಜಿಲ್ಲೆಯ ಜನರ ಕೈಗೆ ಸಿಗುವುದಿಲ್ಲ ಎನ್ನುವುದು ದೊಡ್ಡಮಟ್ಟಿಗೆ ಚರ್ಚೆಯಾಗುತ್ತಿದೆ. ಪ್ರಚಾರಕ್ಕೆ ಹೋದ ಕಡೆಯೆಲ್ಲ ಜನರು ಅದನ್ನೇ ಪ್ರಶ್ನಿಸುತ್ತಿದ್ದಾರೆ.
‘ಕೊಡಗು ಪುಟ್ಟ ಜಿಲ್ಲೆ. ಮೈಸೂರು ದೊಡ್ಡ ಜಿಲ್ಲೆಯಾಗಿರುವ ಕಾರಣಕ್ಕೆ ಅಲ್ಲಿಗೆ ಹೆಚ್ಚು ಸಮಯ ನೀಡಬೇಕಾಯಿತು. ಕಳೆದ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಸಾಧ್ಯವಾಗಿಲ್ಲ’ ಎಂದು ಪ್ರತಾಪ ಸಿಂಹ ಅವರೇ ಸ್ಪಷ್ಟನೆ ನೀಡುತ್ತಿದ್ದಾರೆ. ಜನರ ಆ ಸಿಟ್ಟು ಹೇಗೆ ಪರಿವರ್ತನೆ ಆಗಲಿದೆ ಎಂಬುದು ಕುತೂಹಲ ತಂದಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ, ಗ್ರಾಮೀಣ ರಸ್ತೆಗಳ ದುಸ್ಥಿತಿ, ಕಾವೇರಿ ನದಿಯ ಮಾಲಿನ್ಯ ವಿಚಾರಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.