ADVERTISEMENT

ಶಬರಿಮಲೆ ವಿವಾದದ ಪರಿಣಾಮ: ಹೆಚ್ಚಿದ ಮತದಾನ

ಅರ್ಜುನ್ ರಘುನಾಥ್
Published 9 ಮೇ 2019, 17:57 IST
Last Updated 9 ಮೇ 2019, 17:57 IST
   

ತಿರುವನಂತಪುರ: ಕೇರಳದ 20 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣದಲ್ಲಿ ಈ ಬಾರಿ ಸರಾಸರಿ ಶೇ 3.66ರಷ್ಟು ಏರಿಕೆಯಾಗಿದೆ. ವಿಶೇಷ ವೆಂದರೆ, ಶಬರಿಮಲೆ ದೇವಸ್ಥಾನ ಇರುವ ಪತ್ತನಂತಿಟ್ಟ ಕ್ಷೇತ್ರದಲ್ಲಿ ಮತದಾನ ಪ್ರಮಾಣವು ಗರಿಷ್ಠ ಶೇ 8ರಷ್ಟು ಮತ್ತು ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡ್‌ ಕ್ಷೇತ್ರದಲ್ಲಿ ಶೇ 7ರಷ್ಟು ಏರಿಕೆ ದಾಖಲಾಗಿದೆ.

2014ರಲ್ಲಿ ಕೇರಳದ ಒಟ್ಟಾರೆ ಮತದಾನ ಪ್ರಮಾಣ ಶೇ 74.02 ಆಗಿದ್ದರೆ ಈ ಬಾರಿ ಅದು ಶೇ 77.68ಕ್ಕೆ ಏರಿಕೆಯಾಗಿದೆ. ಪತ್ತನಂತಿಟ್ಟ ಕ್ಷೇತ್ರವು 2009 ಮತ್ತು 2014ರ ಚುನಾವಣೆಯಲ್ಲಿ ಕೇರಳದಲ್ಲಿ ಕನಿಷ್ಠ ಮತದಾನ ದಾಖಲಾದ ಕ್ಷೇತ್ರವಾಗಿತ್ತು. ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರವಾಗಿ ಉಂಟಾದ ವಿವಾದ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಪ್ರಮುಖ ‍ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ.

ಆದರೆ ಈ ಒಂದೇ ಕಾರಣಕ್ಕೆ ಬಿಜೆಪಿಯು ಈ ಕ್ಷೇತ್ರದಿಂದಲೇ ಕೇರಳ ದಲ್ಲಿ ಖಾತೆ ತೆರೆಯಬಹುದೆಂಬ ಲೆಕ್ಕಾ ಚಾರ ಹಾಕುವಂತಿಲ್ಲ. ಯಾಕೆಂದರೆ ಮತದಾನದ ಪ್ರಮಾಣವನ್ನು ವಿಧಾನಸಭಾ ಕ್ಷೇತ್ರವಾರು ವಿಭಜಿಸಿ ನೋಡಿದಾಗ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ಹೆಚ್ಚಾಗಿ ನೆಲೆಸಿ ರುವ ಪ್ರದೇಶಗಳಲ್ಲೇ ಮತದಾನ ಹೆಚ್ಚಾಗಿರುವುದು ಕಂಡುಬಂದಿದೆ.

ADVERTISEMENT

‘ಇಲ್ಲಿನ ಅಲ್ಪಸಂಖ್ಯಾತ ಸಮುದಾಯದವರಲ್ಲಿ ಬಿಜೆಪಿಯ ‘ಹಿಂದುತ್ವ ಅಜೆಂಡಾ’ ಆತಂಕ ಹುಟ್ಟಿಸಿದೆ. ಚುನಾವಣೆಗೂ ಮುನ್ನ ಅಮಿತ್‌ ಶಾ ಈ ಕ್ಷೇತ್ರದಲ್ಲಿ ಭವ್ಯವಾದ ರ್‍ಯಾಲಿ ಏರ್ಪಡಿಸಿದ್ದರು. ಆ ರ್‍ಯಾಲಿಯಲ್ಲಿ ಪಕ್ಷದ ಅಭ್ಯರ್ಥಿ ಸುರೇಂದ್ರನ್‌ ಅವರನ್ನು ‘ಸಂಪ್ರದಾಯಸ್ಥ ಹಿಂದೂಗಳ ಪ್ರತಿನಿಧಿ’ ಎಂಬಂತೆ ಬಿಂಬಿಸಲಾಗಿತ್ತು. ಇದು ಅವರ ಆತಂಕಕ್ಕೆ ಕಾರಣ’ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ.

ಬಿಜೆಪಿ ಕಣ್ಣಿಟ್ಟಿರುವ ಇನ್ನೊಂದು ಕ್ಷೇತ್ರ ತಿರುವನಂತ ಪುರದಲ್ಲೂ ಅಲ್ಪಸಂಖ್ಯಾತರ ಮತಗಳು ಧ್ರುವೀಕರಣಗೊಂಡಿರುವಂತೆ ಕಾಣಿಸುತ್ತಿದೆ. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರೇ ಹೆಚ್ಚಾಗಿರುವ ಕರಾವಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಿದೆ. ಆದರೆ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆಟ್ಟಿಂಗಲ್‌ ಮತ್ತು ತ್ರಿಶ್ಶೂರ್‌ನಲ್ಲಿ ಮತದಾನ ಪ್ರಮಾಣ ಶೇ 5ರಷ್ಟು ಏರಿಕೆಯಾಗಿದ್ದು, ಹೆಚ್ಚುವರಿ ಮತದಾನ ತನ್ನ ಪರ ಆಗಿರಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ.

ವಯನಾಡ್‌ನಲ್ಲಿ ಮತದಾನ ಪ್ರಮಾಣ ಶೇ 7ರಷ್ಟು ಹೆಚ್ಚಾಗಲು ರಾಹುಲ್‌ ಸ್ಪರ್ಧೆಯೊಂದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ‘ಇಲ್ಲಿನ ಮತದಾರರು, ವಿಶೇಷವಾಗಿ ಯುವ ಮತದಾರರು ತಾವು ಮುಂದಿನ ಪ್ರಧಾನಿಗೆ ಮತ ನೀಡುತ್ತಿದ್ದೇವೆ ಎಂದು ಭಾವಿಸಿದ್ದಾರೆ. ಆದ್ದರಿಂದ ರಾಹುಲ್‌ ಇಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂಬ ಭಾವನೆಯನ್ನು ಕಾಂಗ್ರೆಸ್‌ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಸಿಟ್ಟಾದ ಸಿಎಂ

ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಾಗಿರುವುದರ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಬುಧವಾರ ಸಿಟ್ಟಿಗೆದ್ದರು. ಕೇರಳದಲ್ಲಿ ಈ ಬಾರಿ ಮೂರು ದಶಕಗಳಲ್ಲೇ ಗರಿಷ್ಠ ಎನ್ನುವಷ್ಟು ಮತದಾನ ದಾಖಲಾಗಿದೆ.

ಕೊಚ್ಚಿಯ ಸರ್ಕಾರಿ ವಸತಿಗೃಹದಿಂದ ಹೊರಬರುತ್ತಿದ್ದ ವಿಜಯನ್‌ ಅವರನ್ನು ಭೇಟಿಮಾಡಿದ ಮಾಧ್ಯಮದವರು ಮತದಾನ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಪ್ರಶ್ನೆ ಕೇಳಲು ಮುಂದಾದರು. ಇದರಿಂದ ಸಿಟ್ಟಾದ ವಿಜಯನ್‌, ‘ದಾರಿ ಬಿಟ್ಟು ಆಚೆ ನಡೀರಿ’ ಎಂದು ಒರಟಾಗಿ ಪ್ರತಿಕ್ರಿಯೆ ನೀಡಿ ಮುಂದೆ ಸಾಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.