ADVERTISEMENT

ಅಭಿವೃದ್ಧಿ ಒತ್ತಾಸೆ ಮಧ್ಯೆ ವಿರೋಧದ ಗುಪ್ತಗಾಮಿನಿ

ಮಾಲತಿ ಭಟ್ಟ
Published 27 ಏಪ್ರಿಲ್ 2013, 19:59 IST
Last Updated 27 ಏಪ್ರಿಲ್ 2013, 19:59 IST
ಅಭಿವೃದ್ಧಿ ಒತ್ತಾಸೆ ಮಧ್ಯೆ ವಿರೋಧದ ಗುಪ್ತಗಾಮಿನಿ
ಅಭಿವೃದ್ಧಿ ಒತ್ತಾಸೆ ಮಧ್ಯೆ ವಿರೋಧದ ಗುಪ್ತಗಾಮಿನಿ   

ಹಾವೇರಿ: `ಬೊಮ್ಮೋಯಿ ಸಾಹೇಬ್ರು ಛಲೋ ಮನುಷ್ಯಾರಿ. ನಮಗೆ ಮನೆ ಕಟ್ಟಿಸಿಕೊಟ್ಯಾರು. ಮುನ್ಸಿಪಾಲಿಟಿಯಲ್ಲಿ ನೌಕರಿ ಕೊಡಿಸಿದಾರು. ಮನೆ ಮುಂದೆ ನಳದಲ್ಲಿ ನೀರು ಬರ‌ತೈತಿ.' ಎಂದರು ಸವಣೂರಿನ ರಾಜೀವ್ ಗಾಂಧಿ ನಗರದ ಭಂಗಿ ಕಾಲೋನಿಯ ನಿವಾಸಿ ಲಕ್ಷ್ಮಿ ವೆಂಕಟೇಶ ಭಂಗಿ. ಪಕ್ಕದಲ್ಲಿ ನಿಂತಿದ್ದ ಅವರ ಸಹೋದರಿ ಅಂಜಲಿ ಸಹ ಹೌದೌದು ಎಂಬಂತೆ ತಲೆಯಾಡಿಸಿದರು.

`ಮೊದ್ಲು ಡಬ್ಬಿ (ಮಲದ ಡಬ್ಬಿ) ಹೊರಬೇಕಿತ್ರಿ. ಅದ್ ಬಿಟ್ರೆ ಬ್ಯಾರೆ ಕೆಲ್ಸ ಇರ‌ಲಿಲ್ಲ. ಗೋವಾಕ್ಕೆ ಹೋಗ್‌ಬಿಡ್ತಿದ್ವಿ. ಈಗ ಮುನ್ಸಿಪಾಲ್ಟಿಲೇ ಕೆಲಸ ಸಿಕ್ಕೈತಿ. 11,000 ರೂಪಾಯಿ ಪಗಾರ' ಎಂದರು ವೆಂಕಟೇಶ ಭಂಗಿ.

ಕುಸಿದು ಬೀಳುತ್ತಿರುವ ಸೂರು, ನಿರುದ್ಯೋಗ ಸಮಸ್ಯೆ, ಸೌಲಭ್ಯಗಳ ಕೊರತೆಯಿಂದ ಬೇಸತ್ತು ಮೂರು ವರ್ಷಗಳ ಹಿಂದೆ ಸವಣೂರಿನ ಭಂಗಿ ಜನಾಂಗದ ಮೂವರು ಯುವಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದಾಗ ಇಡೀ ರಾಜ್ಯ ಬೆಚ್ಚಿಬಿದ್ದಿತ್ತು. ಈ ಘಟನೆ ರಾಜ್ಯದಲ್ಲಿ ಜೀವಂತವಾಗಿರುವ ಮಲ ಹೊರುವ ಪದ್ಧತಿಯ ಮೇಲೂ ಬೆಳಕು ಚೆಲ್ಲಿತ್ತು.

ತಮ್ಮದೇ ಕ್ಷೇತ್ರದಲ್ಲಿ ನಡೆದ ಈ ಪ್ರತಿಭಟನೆಗೆ ಸ್ಪಂದಿಸಿದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ಸವಣೂರಿನ 14 ಭಂಗಿ ಕುಟುಂಬಗಳ ಪೈಕಿ 9 ಕುಟುಂಬಗಳಿಗೆ ರಾಜೀವ್ ಗಾಂಧಿ ನಗರದಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಕುಟುಂಬದ ಗಂಡಸರಿಗೆ ಪಟ್ಟಣ ಪಂಚಾಯ್ತಿಯಲ್ಲಿ ಕಾಯಂ ಉದ್ಯೋಗ ಕೊಡಿಸಿದ್ದಾರೆ.
ಈ ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರ ದೊರಕಿದೆ. ಇದೇ ಮೊದಲ ಬಾರಿ ಮತದಾರರ ಪಟ್ಟಿಯಲ್ಲಿ ಅವರಿಗೆ ಜಾಗ ಸಿಕ್ಕಿದೆ.

ಮೊದಲು ಕುಡಿಯುವ ನೀರಿಗಾಗಿ ಊರವರ ಮುಂದೆ ಅಂಗಲಾಚಬೇಕಿತ್ತು. ನೀರು ಕೊಡಿ ಎಂದು ಮನೆಯಿಂದ ಮನೆಗೆ ಅಲೆದಾಡಬೇಕಿತ್ತು. ಒಂದು ರೂಪಾಯಿಗೆ ಒಂದು ಕೊಡ ನೀರು. ಅಲ್ಲದೇ ಅವರೆಲ್ಲ ನೀರು ಹಿಡಿದುಕೊಂಡ ಮೇಲೆ ನೀರು ಹಿಡಿದುಕೊಳ್ಳಬೇಕಿತ್ತು ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಂಡರು ಲಕ್ಷ್ಮಿ.

ಇವರ ಮನೆಯ ಗೋಡೆಯ ಮೇಲೆ ಈಗ ಅಂಬೇಡ್ಕರ್ ಫೋಟೊದ ಜತೆ ಬಸವರಾಜ ಬೊಮ್ಮೋಯಿ ಅವರ ಚಿತ್ರವಿರುವ ಕ್ಯಾಲೆಂಡರ್ ಸಹ ಕಾಣುತ್ತದೆ.

ಇದು ಲಕ್ಷ್ಮಿ ಅವರೊಬ್ಬರ ಅಭಿಪ್ರಾಯವಲ್ಲ. ಬಸವರಾಜ ಬೊಮ್ಮೋಯಿ ಬಿಜೆಪಿ ಅಭ್ಯರ್ಥಿಯಾಗಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಅಡ್ಡಾಡಿದಾಗ ಮೇಲ್ನೋಟಕ್ಕೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಬೊಮ್ಮೋಯಿ ಕ್ಷೇತ್ರಕ್ಕೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ ಎಂದು ಬಹುತೇಕರು ಹೇಳುತ್ತಾರೆ.

ವರದಾ ನದಿಯ ಏತ ನೀರಾವರಿ ಯೋಜನೆಯಿಂದ ಶಿಗ್ಗಾವಿಯ 24,000 ಎಕರೆ ಜಮೀನಿಗೆ ನೀರಾವರಿ ಕಲ್ಪಿಸಿದ್ದು, ನಾಗನೂರು ಕೆರೆಯಿಂದ ಶಿಗ್ಗಾವಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಸವಣೂರಿನ ಮೋತಿ ತಾಲಾಬ್‌ಗೆ ವರದಾ ನದಿಯಿಂದ ನೀರು ಹಾಯಿಸಿ, ಸವಣೂರು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಯತ್ನಿಸಿದ್ದು, (ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ), ಬಂಕಾಪುರದಲ್ಲಿ ಡಿಪ್ಲೋಮಾ, ಐಟಿಐ ಕಾಲೇಜು ಸ್ಥಾಪನೆ, ಸವಣೂರಿನಲ್ಲಿ ಎನ್‌ಟಿಟಿಎಫ್, ಶಿಗ್ಗಾವಿಯಲ್ಲಿ ಪಶು ಸಂಗೋಪನಾ ಡಿಪ್ಲೊಮಾ ಕಾಲೇಜು ಸ್ಥಾಪನೆ... ಇವೆಲ್ಲ ಬೊಮ್ಮೋಯಿ ನೇತೃತ್ವದಲ್ಲಿ ನಡೆದಿದೆ.

ಕನಕದಾಸರ ಹುಟ್ಟೂರು ಬಾಡದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಕನಕ ಅರಮನೆ ನಿರ್ಮಾಣ, ಸಂತ ಶಿಶುನಾಳ ಶರೀಫರ ಹುಟ್ಟೂರು ಶಿಶುನಾಳದಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣ, ಹಳ್ಳಿ, ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ ಇವೆಲ್ಲ ಈ ಐದು ವರ್ಷಗಳ ಅವಧಿಯಲ್ಲಿ ಆಗಿರುವ ಕೆಲಸಗಳು.

ಬೊಮ್ಮೋಯಿ ಅವರ ಗೆಲುವಿಗೆ ಸಹಕಾರಿಯಾಗುವಂತೆ ಕಾಣುವ ಅಭಿವೃದ್ಧಿ ಯೋಜನೆಗಳ ಮಧ್ಯೆಯೂ ಈ ಕ್ಷೇತ್ರದಲ್ಲಿ ಅವರ ಕುರಿತಾದ ವಿರೋಧದ ಅಲೆ ಗುಪ್ತಗಾಮಿನಿಯಂತೆ ಹರಡುತ್ತಿದೆ. ಅಭಿವೃದ್ಧಿ ಕಾರ್ಯದಲ್ಲಿ ನಡೆದ ತಾರತಮ್ಯ, ಜಾತಿ ಲೆಕ್ಕಾಚಾರ, ಕ್ಷೇತ್ರದ ಸಾಮಾನ್ಯ ಜನರ ಕೈಗೆ ಸಿಗದ ಅವರ ನಡವಳಿಕೆ ಚುನಾವಣೆಯಲ್ಲಿ ಅವರಿಗೆ ಮುಳುವಾಗುವ ಲಕ್ಷಣಗಳಿವೆ.

ಶಿಗ್ಗಾವಿಯ 90 ಗ್ರಾಮಗಳು, ಸವಣೂರು ತಾಲ್ಲೂಕಿನ 33 ಹಳ್ಳಿಗಳು ಶಿಗ್ಗಾವಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ನೀರು, ರಸ್ತೆ ಇತ್ಯಾದಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಾಗ ಸವಣೂರು ಭಾಗವನ್ನು ಶಾಸಕರು ನಿರ್ಲಕ್ಷ್ಯಿಸಿದ್ದಾರೆ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ಶಂಭಣ್ಣ ಕಡಕೋಳ.

ಜನರೊಂದಿಗೆ ನೇರವಾಗಿ ಬೆರೆಯುವುದಿಲ್ಲ. ಎಲ್ಲ ವ್ಯವಹಾರಗಳನ್ನು ಬೆಂಬಲಿಗರ ಮೂಲಕ ಮಾಡುತ್ತಾರೆ. ಕ್ಷೇತ್ರದ ಶಾಸಕರನ್ನು ಸಾಮಾನ್ಯ ಜನ ಸಂಪರ್ಕಿಸಲು ಸಾಧ್ಯವಿಲ್ಲ ಎಂಬ ಆರೋಪವೂ ಬೊಮ್ಮೋಯಿ ಮೇಲಿದೆ.

ಮುಸ್ಲಿಂ ಸಮುದಾಯದ ಸೈಯದ್ ಖಾದ್ರಿ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಕ್ಷೇತ್ರದಲ್ಲಿ 40,000ದಷ್ಟಿರುವ ಮುಸ್ಲಿಂ ಮತಗಳು ಖಾದ್ರಿ ಅವರಿಗೆ ವರವಾಗಬಹುದು. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಕೆಲವಷ್ಟು ಕುರುಬ ಮತಗಳು ಸಹ ಕಾಂಗ್ರೆಸ್ ಪಾಲಾಗುವ ಸಾಧ್ಯತೆಯಿದೆ.

ಕ್ಷೇತ್ರದಲ್ಲಿ ಹೆಚ್ಚಾಗಿರುವ ಪ್ರಬಲ ಪಂಚಮಸಾಲಿ ಲಿಂಗಾಯತರು ಬಿಜೆಪಿಯ ಸಾಂಪ್ರದಾಯಿಕ ಮತದಾರರು. ಆದರೆ, ಬೊಮ್ಮೋಯಿ ಲಿಂಗಾಯತರಲ್ಲೇ ಅಲ್ಪಸಂಖ್ಯೆಯಲ್ಲಿ ಇರುವ ಸಾದರ ಉಪಪಂಗಡಕ್ಕೆ ಸೇರಿದವರು. ಕೆಜೆಪಿಯಿಂದ ಸ್ಪರ್ಧಿಸಿರುವ ಪಂಚಮಸಾಲಿ ಉಪಪಂಗಡದ ಬಾಪೂಗೌಡ ಪಾಟೀಲ್ ದುರ್ಬಲ ಅಭ್ಯರ್ಥಿಯಾದರೂ ಬಿಜೆಪಿಯ 5-6 ಸಾವಿರ ಮತಗಳನ್ನು ಕಸಿಯಬಹುದು. ಈ ನಡುವೆ ಬಿಜೆಪಿಯಲ್ಲಿಯೇ ಇರುವ ಪಂಚಮಸಾಲಿ ನಾಯಕರು ಬೊಮ್ಮೋಯಿ ಅವರ ವಿರುದ್ಧ ಒಳಗೊಳಗೆ ಮಸಲತ್ತು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ರಾಜಶೇಖರ ಸಿಂಧನೂರು, ಬೊಮ್ಮೋಯಿ ಅವರ ವೇಗಕ್ಕೆ ತಡೆ ಹಾಕಲು ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಸದ ಬಿಜೆಪಿ ಕಾರ್ಯಕರ್ತರು.

ಬಿಜೆಪಿ ಬಿಟ್ಟು ಕೆಜೆಪಿ ಸೇರಿದಲ್ಲಿ, ಕ್ಷೇತ್ರ ಈ ನಾಯಕರ ವಶವಾಗುವ ಆತಂಕದಿಂದ, ತಾವು ರಾಜಕೀಯ ನೆಲೆ ಕಳೆದುಕೊಳ್ಳುವ ಭೀತಿಯಿಂದ ಬೊಮ್ಮೋಯಿ ಕಡೆಯ ಕ್ಷಣದಲ್ಲಿ ಕೆಜೆಪಿ ಸೇರುವ ನಿರ್ಧಾರ ಕೈಬಿಟ್ಟರು ಎನ್ನಲಾಗಿದೆ.

ಈ ಬಾರಿ ಶಿಗ್ಗಾವಿ ಕ್ಷೇತ್ರದ ಮತದಾರರ ಸಂಖ್ಯೆ 1,88,333. ಕಳೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು 1,23,029. ಬೊಮ್ಮೋಯಿ ಅವರಿಗೆ ಬಿದ್ದಿದ್ದು 63,780 ಮತಗಳು. ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಖಾದ್ರಿ ಅವರಿಗೆ 50,918 ಮತಗಳು ಬಿದ್ದಿದ್ದವು. 13,000 ಮತಗಳ ಅಂತರದಿಂದ ಬೊಮ್ಮೋಯಿ ಗೆದ್ದಿದ್ದರು.

ಮೇಲ್ನೋಟಕ್ಕೆ ಗೋಚರಿಸದ ವಿರೋಧದ ಅಲೆಯಿಂದ ಈ ಬಾರಿ ಗೆಲ್ಲಲು ಅವರು ಹರಸಾಹಸ ಮಾಡಬೇಕಿದೆ. ಈ ಆತಂಕದಿಂದಲೋ ಏನೋ ಅವರು ವ್ಯಾಪಕವಾಗಿ ಕ್ಷೇತ್ರ ಸುತ್ತುತ್ತಿದ್ದಾರೆ. ಬರೀ 20-30 ಮತಗಳಿರುವ ಹಳ್ಳಿಗಳಿಗೂ ಹೋಗುತ್ತಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಒಂದೊಂದು ಹಳ್ಳಿಗೂ ಎರಡು-ಮೂರು ಬಾರಿ ಭೇಟಿ ನೀಡಿದ್ದಾರೆ.

ಬೊಮ್ಮೋಯಿ ಸಾಹೇಬರಿಗೆ ಒಮ್ಮಿಂದೊಮ್ಮೆಲೆ ಜನರ ಮೇಲೆ ಪ್ರೀತಿ ಉದ್ಭವಿಸಿದೆ ಎಂದು ಹಲಗೂರು ಬಸ್ ನಿಲ್ದಾಣದ ಬಳಿ ಸಿಕ್ಕ ಇಮಾಮ್‌ಸಾಬ್ ನದಾಫ್ ವ್ಯಂಗ್ಯವಾಡುತ್ತಾರೆ.

ಸದ್ದಿಲ್ಲದೇ ಹರಿಯುವ ಹಣ, ಕೊನೆಯ ಕ್ಷಣದ ರಾಜಕೀಯ ಸಮೀಕರಣಗಳಿಂದ ಮತದಾರರ ಒಲವು ಬದಲಾಗಬಹುದಾದರೂ ಬಸವರಾಜ ಬೊಮ್ಮೋಯಿ ಅವರಿಗೆ ಈ ಬಾರಿ ಸುಲಭ ಗೆಲುವು ಅನುಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.