ADVERTISEMENT

ಕರ್ನಾಟಕ 'ಕೈ' ವಶ, ಬಿಜೆಪಿ ದೂಳೀಪಟ

​ಪ್ರಜಾವಾಣಿ ವಾರ್ತೆ
Published 8 ಮೇ 2013, 11:37 IST
Last Updated 8 ಮೇ 2013, 11:37 IST

ಬೆಂಗಳೂರು (ಐಎಎನ್ಎಸ್): ಮುಂಬರುವ ಲೋಕಸಭಾ ಚುನಾವಣೆಗಿಂತ ಮುಂಚೆ ನಡೆದಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ನೆಲಕಚ್ಚಿಸಿರುವ ಕಾಂಗ್ರೆಸ್ ಏಳು ವರ್ಷಗಳ ಬಳಿಕ ಪ್ರಚಂಡ ಬಹುಮತದೊಂದಿಗೆ ಕರ್ನಾಟಕವನ್ನು 'ಕೈ'ವಶ ಮಾಡಿಕೊಂಡಿದೆ.

ದಕ್ಷಿಣ ಭಾರತದಲ್ಲಿನ ಮೊದಲ ಬಿಜೆಪಿ ಸರ್ಕಾರದ ಐದು ವರ್ಷಗಳ ಆಳ್ವಿಕೆಗೆ ಮಂಗಳ ಹಾಡಿದ ಚುನಾವಣಾ ಫಲಿತಾಂಶಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೃಪ್ತಿ ವ್ಯಕ್ತ ಪಡಿಸಿದ್ದಾರೆ.

ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆಯ ಬಳಿಕ 225 ಸದಸ್ಯ ಬಲದ ವಿಧಾನಸಭೆಯಲ್ಲಿ ಅರ್ಧಕ್ಕಿಂತ 8 ಸ್ಥಾನ ಹೆಚ್ಚು 121 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿರುವುದು ಖಚಿತಗೊಳ್ಳುತ್ತಿದ್ದಂತೆಯೇ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವ್ಯಾಪಕ ಸಂಭ್ರಮಾಚರಣೆ ಮಾಡಿದರು. ಬೆಂಗಳೂರು ನಗರದಲ್ಲೂ ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮೇ 5ರಂದು ವಿಧಾನಸಭಾ ಚುನಾವಣೆ ನಡೆದಿತ್ತು.

ADVERTISEMENT

ಕಾಂಗ್ರೆಸ್ ವಿಜಯವು ಬಿಜೆಪಿ ಸಿದ್ಧಾಂತದ ವಿರುದ್ಧ ವ್ಯಕ್ತವಾಗಿರುವ ಸ್ಪಷ್ಟ ಫಲಿತಾಂಶ ಎಂದು ಮನಮೋಹನ್ ಸಿಂಗ್ ಅವರು ದೆಹಲಿಯಲ್ಲಿ ಹೇಳಿದರು.

'ಯಾರು ಏನು ಎಂಬುದು ರಾಷ್ಟ್ರದ ಜನತೆಗೆ ಗೊತ್ತಿದೆ. ಅವರು ಕರ್ನಾಟಕದಂತೆಯೇ ಬಿಜೆಪಿ ಸಿದ್ಧಾಂತವನ್ನು ತಿರಸ್ಕರಿಸಲಿದ್ದಾರೆ' ಎಂದು ಅವರು ನುಡಿದರು.

ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಅಧಿಕಾರಕ್ಕೆ ಬರುವ ಆಶಯದೊಂದಿಗೆ 2008ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಇದೀಗ ದೂಳೀಪಟಗೊಂಡಿದ್ದು, ಜನತಾದಳಕ್ಕೆ ಸರಿಸಮವಾಗಿ 40 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನಕ್ಕಾಗಿ ಹಣಾಹಣಿ ನಡೆಸಿದೆ. ಒಂದು ಹಂತದಲ್ಲಿ ಬಿಜೆಪಿಯು ಜೆಡಿ-ಎಸ್ ನಿಂದಲೂ ಹಿಂದೆ ಸಾಗಿ ಮೂರನೇ ಸ್ಥಾನಕ್ಕೆ ಇಳಿದಿತ್ತು.

ಎರಡನೇ ಸ್ಥಾನಕ್ಕಾಗಿ ಬಿಜೆಪಿಯೊಂದಿಗೆ ಹಣಾಹಣಿ ನಡೆಸುತ್ತಿರುವ ಜನತಾದಳ (ಎಸ್) ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದಾಗಿ ಪ್ರಕಟಿಸಿದೆ. ಜನತಾದಳ (ಎಸ್) ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವುದಾಗಿ ದಳ ಧುರೀಣ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಕಟಿಸಿದ್ದಾರೆ.

ಐದು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಈ ಬಾರಿ ಕೇವಲ 40 ಸ್ಥಾನ ಗಳಿಸಿದ್ದು, ಜನತಾದಳವೂ ಅಷ್ಟೇ ಸ್ಥಾನಗಳನ್ನು ಗಳಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕೇವಲ 6 ಸ್ಥಾನಗಳಿಗೂ, ಶ್ರೀರಾಮುಲು ನೇತೃತ್ವದ ಬಿ.ಎಸ್.ಆರ್. ಕಾಂಗ್ರೆಸ್ 4 ಸ್ಥಾನಗಳಿಗೂ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಇತರರು 12 ಸ್ಥಾನಗಳನ್ನು ಬಾಚಿಕೊಂಡಿದ್ದಾರೆ. ಇವರ ಪೈಕಿ ಒಂದು ಸ್ಥಾನ ಸಮಾಜವಾದಿ ಪಕ್ಷಕ್ಕೆ ಲಭಿಸಿದೆ.

'ಕಾಂಗ್ರೆಸ್ ವಿಜಯ ನಿರೀಕ್ಷಿತ' ಎಂದು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಕಾಂಗ್ರೆಸ್ ಧುರೀಣ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಪೂರ್ಣ ಫಲಿತಾಂಶ ಹೊರಬೀಳುವ ಮುನ್ನವೇ ಬಿಜೆಪಿ ಸೋಲು ಒಪ್ಪಕೊಂಡಿತು. 'ಸಮಯಕ್ಕೆ ಸ್ಪಂದಿಸಲು ನಮಗೆ ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಿ ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ವಿಷಾದ ವ್ಯಕ್ತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.