ಬಳ್ಳಾರಿ: ಮುಂಬೈ ಕರ್ನಾಟಕ ಮತ್ತು ಬಳ್ಳಾರಿ, 2008ರ ವಿಧಾನಸಭಾ ಚುನಾವಣೆಯ `ಆಟ ಬದಲಿಸಿದ' ಪ್ರದೇಶ. ಕಾಂಗ್ರೆಸ್ ದೂಳಿಪಟವಾಗಿದ್ದು ಮತ್ತು ಬಿಜೆಪಿಗೆ ಅಧಿಕಾರಕ್ಕೆ ಬರುವ ಸಂಖ್ಯಾಬಲವನ್ನು ತಂದುಕೊಟ್ಟ ಪ್ರದೇಶ ಇದು. ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳನ್ನೊಳಗೊಂಡ ಈ ಪ್ರದೇಶಕ್ಕೆ ಬಳ್ಳಾರಿಯನ್ನೂ ಸೇರಿಸಿದರೆ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 59 ಆಗುತ್ತದೆ.
ಇದರಲ್ಲಿ 44 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರೆ ಕಾಂಗ್ರೆಸ್ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ಹದಿಮೂರು ಮಾತ್ರ. ಜೆಡಿ(ಎಸ್) ಪಕ್ಷದಿಂದ ಗೆದ್ದಿದ್ದ ಇಬ್ಬರು ಶಾಸಕರು ಕೂಡಾ ನಂತರ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಈ ಭಾಗದಲ್ಲಿ ಕಾಂಗ್ರೆಸ್‌ನ ಮಾನ ಉಳಿಸಿದ್ದು, ಏಳು ಶಾಸಕರನ್ನು ನೀಡಿದ ಬೆಳಗಾವಿ ಜಿಲ್ಲೆ ಮಾತ್ರ. ಈ ಬಾರಿ ವಿಧಾನಸಭಾ ಚುನಾವಣೆಯ `ಆಟ ಬದಲಿಸಲಿರುವ' ಪ್ರದೇಶ ಕೂಡಾ ಇದೇ ಎನ್ನುವುದರಲ್ಲಿ ಅನುಮಾನ ಇಲ್ಲ.
ರಾಜ್ಯದ ಕರಾವಳಿ ಇಲ್ಲವೆ ಮಧ್ಯ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಂತೆ ಮುಂಬೈಕರ್ನಾಟಕ ಬಿಜೆಪಿಯ ಸಾಂಪ್ರದಾಯಿಕ ನೆಲೆ ಅಲ್ಲ. ಹೀಗಿದ್ದರೂ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಚೈತ್ರಯಾತ್ರೆಗೆ ಮುಖ್ಯವಾಗಿ ಕಾರಣಗಳು ಮೂರು. ಮೊದಲನೆಯದಾಗಿ ಈ ಭಾಗದಲ್ಲಿ ಸಾಂಪ್ರದಾಯಿಕವಾಗಿ ಇರುವ ಕಾಂಗ್ರೆಸ್ ವಿರೋಧಿ ಮತಗಳು, ಎರಡನೆಯದಾಗಿ ವಚನಭಂಗದಿಂದಾಗಿ ಸಾಮೂಹಿಕವಾಗಿ ಸಿಡಿದೆದ್ದ ಲಿಂಗಾಯತ ಸಮುದಾಯ, ಮೂರನೆಯದಾಗಿ ಬಳ್ಳಾರಿಯ ರೆಡ್ಡಿ ಸೋದರರ ದುಡ್ಡು ಮತ್ತು ಶ್ರಿರಾಮುಲು ಅವರಿಗೆ ವ್ಯಕ್ತವಾದ ಜಾತಿ ಮತದಾರರ ಬೆಂಬಲ.
ಪ್ರಾರಂಭದಲ್ಲಿ ಎಸ್.ನಿಜಲಿಂಗಪ್ಪ ಅವರ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಈ ಭಾಗದ ಲಿಂಗಾಯತರು ನಿಧಾನವಾಗಿ ಜನತಾ ಪರಿವಾರದ ಭಾಗವಾಗಿ ಹೋಗಿದ್ದರು. ಎಂಬತ್ತರ ದಶಕದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿದ್ದ ಜನತಾ ಪರಿವಾರದಲ್ಲಿ ಎಸ್.ಆರ್.ಬೊಮ್ಮಾಯಿ ಅವರಂತಹ ಹಿರಿಯರ ಜತೆ ಧಾರವಾಡ ಜಿಲ್ಲೆಯ ಚಂದ್ರಕಾಂತ ಬೆಲ್ಲದ, ಬಿ.ಆರ್.ಯಾವಗಲ್, ಬಿ.ಜಿ.ಬಣಕಾರ್, ಬಿ.ಎಚ್.ಬನ್ನಿಕೋಡ್, ಪಿ.ಸಿ.ಸಿದ್ದನಗೌಡರ್, ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲೆಯ ಶಿವಾನಂದ ಕೌಜಲಗಿ, ಉಮೇಶ್ ಕತ್ತಿ, ಎ.ಬಿ.ಪಾಟೀಲ್, ಡಿ.ಬಿ.ಇನಾಂದಾರ್, ಲೀಲಾದೇವಿ ಪ್ರಸಾದ್. ಬಿಜಾಪುರ ಜಿಲ್ಲೆಯ ರಮೇಶ್ ಜಿಗಜಿಣಗಿ, ಗೋವಿಂದಪ್ಪ ಕಾರಜೋಳ, ಎಚ್.ವೈ.ಮೇಟಿ, ಜಗಜೀವನರಾವ್ ದೇಶಮುಖ್ ಮೊದಲಾದ ನಾಯಕರಿದ್ದರು.
ಇವರಲ್ಲಿ ಬಹಳಷ್ಟು ಮಂದಿ ಶಾಸಕರಾಗಿ ಚುನಾಯಿತರಾಗಿ ನಂತರ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು. ಜನತಾ ಪರಿವಾರ ಅಳಿಯುತ್ತಾ ಬಂದಂತೆ ಆ ಜಾಗವನ್ನು ಆಕ್ರಮಿಸಿಕೊಂಡದ್ದು ಬಿಜೆಪಿ. ನಿಧಾನವಾಗಿ ಮುಂಬೈ ಕರ್ನಾಟಕ ಭಾಗದ ಕಾಂಗ್ರೆಸ್ ವಿರೋಧಿ ಮತಗಳನ್ನು ನುಂಗುತ್ತಾ ಬಿಜೆಪಿ ಬೆಳೆಯುತ್ತಾ ಹೋಗಿದ್ದು ಈಗ ಇತಿಹಾಸ. ಅದರ ಅತ್ಯುನ್ನತ ಸ್ಥಿತಿಯನ್ನು ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಣಬಹುದು.
ಇಡೀ ಕರ್ನಾಟಕದಲ್ಲಿ ಲಿಂಗಾಯತ ಬಾಹುಳ್ಯ ಇರುವ ಪ್ರದೇಶ ಮುಂಬೈ ಕರ್ನಾಟಕ. ಲಿಂಗಾಯತರ ಜನಸಂಖ್ಯೆ ರಾಜ್ಯದಲ್ಲಿ ಶೇಕಡಾ ಹದಿನೇಳರಷ್ಟಿದ್ದರೂ ಮುಂಬೈ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಇದು 20ರಿಂದ 30ರಷ್ಟಿದೆ. ಇದರಿಂದಾಗಿಯೇ ಇಲ್ಲಿನ ಹೆಚ್ಚಿನ ಕ್ಷೇತ್ರಗಳ ಮೇಲೆ ಅಪ್ಪಳಿಸಿದ ವಚನಭಂಗದ ವಿರೋಧಿ ಅಲೆಯ ಮೇಲೇರಿ ಬಿಜೆಪಿ ಅಭ್ಯರ್ಥಿಗಳು ಸುಲಭದಲ್ಲಿ ಗೆಲುವಿನ ದಡ ಸೇರಿದ್ದರು. ರಾಜ್ಯದಾದ್ಯಂತ ಬಳ್ಳಾರಿಯ ರೆಡ್ಡಿ ಸೋದರರ ದುಡ್ಡು ಹರಿದಾಡಿದರೂ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದಲ್ಲಿ ಹಣದ ಹೊಳೆ ದಡಮೀರಿ ಹರಿದಿತ್ತು.
ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶ್ರಿರಾಮುಲು ಅವರು ಸಂಘಟಿಸಿದ್ದ ಜಾತಿಮೂಲದ ಬೆಂಬಲ ಕೂಡಾ ಇಲ್ಲಿ ಬಿಜೆಪಿ ಗೆಲುವಿಗೆ ನೆರವಾಯಿತು. ಇದರಿಂದಾಗಿಯೇ ಬಳ್ಳಾರಿಯ ಒಂಬತ್ತು ಕ್ಷೇತ್ರಗಳಲ್ಲಿ ಎಂಟರಲ್ಲಿ ಬಿಜೆಪಿ ಗೆದ್ದಿತ್ತು. ಆ ಎಂಟರಲ್ಲಿ ಐವರು ಶಾಸಕರು ರಾಮುಲು ಜಾತಿಯಾದ ನಾಯಕ ಸಮಾಜದವರು ಎಂಬುದು ಗಮನಾರ್ಹ. ಇದರ ಜತೆಯಲ್ಲಿ ಗದಗ ಕ್ಷೇತ್ರದ ಉಸ್ತುವಾರಿ ಸಚಿವರಾಗಿದ್ದ ಶ್ರಿರಾಮುಲು ಆ ಜಿಲ್ಲೆಯ ಎಲ್ಲ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಬಿಟ್ಟಿದ್ದರು.
ಬಿಜೆಪಿಗೆ ನಿರಾಯಾಸವಾಗಿ ಗೆಲುವು ತಂದುಕೊಟ್ಟ ಮುಂಬೈ ಕರ್ನಾಟಕ ಮತ್ತು ಬಳ್ಳಾರಿಯ ಈಗಿನ ಚಿತ್ರ ಬದಲಾಗಿರುವುದು ಮಾತ್ರವಲ್ಲ ಹೆಚ್ಚುಕಡಿಮೆ ತಲೆಕೆಳಗಾಗಿ ಬಿಟ್ಟಿದೆ. ರಾಜ್ಯದಲ್ಲಿ ಬಿಜೆಪಿಗೆ ಮಾರಣಾಂತಿಕ ಹೊಡೆತ ನೀಡಲಿರುವುದು ಈ ಪ್ರದೇಶ ಎನ್ನುವುದರಲ್ಲಿ ಅನುಮಾನ ಬೇಡ. ಏಳು ಜಿಲ್ಲೆಗಳಲ್ಲಿದ್ದ 46 ಬಿಜೆಪಿ ಶಾಸಕರ ಪೈಕಿ ಹಾವೇರಿಯಿಂದ ನಾಲ್ಕು (ಸಿ.ಎಂ.ಉದಾಸಿ, ನೆಹರೂ ಓಲೇಕಾರ್,ಜಿ.ಶಿವಣ್ಣ ಮತ್ತು ಸುರೇಶ್‌ಗೌಡ) ಮತ್ತು ಬಿಜಾಪುರ ಹಾಗೂ ಧಾರವಾಡದಿಂದ ತಲಾ ಒಬ್ಬ ಶಾಸಕರು ( ವಿಠ್ಠಲ ಕಟಕದೊಂಡ ಮತ್ತು ಚಿಕ್ಕನಗೌಡರ್) ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಸೇರಿದ್ದಾರೆ. ಇವರಲ್ಲಿ ಸುರೇಶ್‌ಗೌಡ ಪಾಟೀಲ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಶಾಸಕರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಕೆಜೆಪಿಗೆ ಪಕ್ಷಾಂತರಗೊಂಡಿರುವ ಶಾಸಕರ ಸಂಖ್ಯೆ ಕಡಿಮೆ ಎಂದು ಅನಿಸಿದರೂ ಪರಿಣಾಮ ಅಷ್ಟಕ್ಕೆ ಸೀಮಿತವಾಗಿರಲಾರದು.
ಬಿಜೆಪಿಯ ಕುಸಿತವನ್ನು ತಡೆದು ನಿಲ್ಲಿಸುವಂತಹ ಬಲಿಷ್ಠ ನಾಯಕರು ಇಲ್ಲದಿರುವುದು ಕೂಡಾ ಆ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರೂ ಮುಂಬೈ ಇಲ್ಲವೆ ಹೈದರಾಬಾದ್ ಕರ್ನಾಟಕದ ಲಿಂಗಾಯತರು ಅವರನ್ನು ಹೆಚ್ಚು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿಲ್ಲ.
ಇನ್ನೊಂದೆಡೆ ಕೆಜೆಪಿಯ ದಾಳಿಯನ್ನು ಬಿಜೆಪಿಯಲ್ಲಿ ಅಳಿದುಳಿದ ಜನತಾ ಪರಿವಾರದ ನಾಯಕರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಮೊದಲಾದವರು ಎದುರಿಸುವ ಪ್ರಯತ್ನ ಮಾಡುತ್ತಿದ್ದರೂ ಅದು ಪರಿಣಾಮಕಾರಿಯಾಗಿಲ್ಲ. ಅವರ ಪ್ರಭಾವ ಸ್ವಂತ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿಯಲ್ಲಿದ್ದಾಗ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾ ಬಂದ ಲಿಂಗಾಯತರ ಜತೆ, ಬಿಜೆಪಿಯಲ್ಲಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ವಿರೋಧಿಸುತ್ತಿದ್ದ ಲಿಂಗಾಯತರು ಕೂಡಾ ಈ ಬಾರಿ ಕೆಜೆಪಿ ಬೆಂಬಲಿಸುತ್ತಿರುವುದನ್ನು ಕಾಣಬಹುದು. ಇವರಲ್ಲಿ ಬಹಳಷ್ಟು ಲಿಂಗಾಯತ ಬುದ್ದಿಜೀವಿಗಳೆನ್ನುವುದು ಆಶ್ಚರ್ಯಕರವಾದರೂ ನಿಜ.
ಬಿ.ಎಸ್.ಯಡಿಯೂರಪ್ಪನವರ ವಿರುದ್ಧದ ಮುಖ್ಯ ಆರೋಪವಾದ ಭ್ರಷ್ಟಾಚಾರ ಈ ಚುನಾವಣೆಯಲ್ಲಿ ಮುಖ್ಯವಿಷಯವಾಗಿ ಚರ್ಚೆಗೊಳಗಾಗದೆ ಇರುವುದು ಅವರನ್ನು ಬೆಂಬಲಿಸುತ್ತಿರುವವರ ಮುಜುಗರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.
ಆದರೆ ಹೈದರಾಬಾದ್ ಕರ್ನಾಟಕದಂತೆ ಇಲ್ಲಿಯೂ ಕೂಡಾ ಕೆಜೆಪಿಗೆ ವ್ಯಕ್ತವಾಗುತ್ತಿರುವ ಬೆಂಬಲ ಸ್ಥಾನಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ಕಡಿಮೆ. ಬಿ.ಎಸ್.ಯಡಿಯೂರಪ್ಪನವರು ಸ್ವಂತ ಪಕ್ಷ ಕಟ್ಟಿದಾಗ ಆಧಾರಸ್ತಂಭಗಳಾಗುತ್ತಾರೆಂದು ನಿರೀಕ್ಷಿಸಿದ್ದ ಸಂಪನ್ಮೂಲಭರಿತ ನಾಯಕರೆಲ್ಲರೂ ಜತೆಯಲ್ಲಿ ಉಳಿದುಕೊಂಡಿದ್ದರೆ ಆಟ ಬದಲಾಗುತ್ತಿತ್ತು.
ಕೊನೆಗಳಿಗೆಯ ವರೆಗೆ ಜತೆಯಲ್ಲಿದ್ದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿಯವರು ಕೈಕೊಟ್ಟದ್ದು ಕೆಜೆಪಿಗೆ ದೊಡ್ಡ ಹೊಡೆತ. ಇದರಿಂದಾಗಿ ಕೆಜೆಪಿಯ ಬಲ ಬಿಜೆಪಿಯನ್ನು ಸೋಲಿಸಲು ವ್ಯಯವಾಗಬಹುದೇ ಹೊರತು ಹೆಚ್ಚಿನ ಸಂಖ್ಯೆಯ ಶಾಸಕರನ್ನು ವಿಧಾನಸಭೆಗೆ ಕಳುಹಿಸಲು ನೆರವಾಗಲಾರದು. ಇಲ್ಲಿಯೂ ಇಬ್ಬರ ನಡುವಿನ ಜಗಳದ ಆದಾಯ ತಮಗೆ ಆಗಬಹುದೆಂಬ ನಿರೀಕ್ಷೆಯಲ್ಲಿದೆ ಕಾಂಗ್ರೆಸ್. ಇದರಿಂದಾಗಿ ಕಳೆದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಸಂಖ್ಯೆ ಅದಲುಬದಲಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.