ಚಿಕ್ಕಮಗಳೂರು: ಚುನಾವಣೆ ಮಟ್ಟಿಗಂತೂ ಕನಸು ಮನಸಲ್ಲೆಲ್ಲ ಜಾತಿಯನ್ನೇ ಉಸಿರಾಡುವವರು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀವೆು ಜನ. ಇಲ್ಲಿನ ಕಡೂರು, ತರೀಕೆರೆ ಕ್ಷೇತ್ರಗಳ ಹಿಂದಿನ ಚುನಾವಣಾ ಫಲಿತಾಂಶಗಳ ಮೇಲೆ ಕಣ್ಣಾಡಿಸಿದರೆ, ಈ ಮಾತಿನಲ್ಲಿರುವ ವಾಸ್ತವಾಂಶ ಅರಿವಾಗುತ್ತದೆ.
ತಮ್ಮ ಜಾತಿ ಬಾಂಧವರ ಸಂಖ್ಯೆ ಹೆಚ್ಚಾಗಿಲ್ಲದಿದ್ದರೂ ನಿರ್ಣಾಯಕ ಪಾತ್ರ ವಹಿಸುವ ಜಾತಿಗಳ ಬೆಂಬಲ ಪಡೆದವರೇ ಮೊದಲಿನಿಂದಲೂ ಇಲ್ಲಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಇದರ ಫಲವಾಗೇ, ಅಷ್ಟೇನೂ ವರ್ಚಸ್ವಿ ಅಲ್ಲದಿದ್ದರೂ ಸರಳ, ಸಜ್ಜನ ಎನಿಸಿಕೊಂಡಿದ್ದ ಡಿ.ಸಿ.ಶ್ರೀಕಂಠಪ್ಪ ತಮ್ಮ ಕೊನೆ ಉಸಿರಿರುವವರೆಗೂ ಸಂಸತ್ ಸದಸ್ಯ ಸ್ಥಾನವನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದದ್ದು.
ಪ್ರತಿಸ್ಪರ್ಧಿಗಳಂತಿರುವ ಸಾದರು, ನೊಣಂಬರ ವೀರಶೈವ ಬಣಗಳು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಕಳೆದ ಬಾರಿ ಒಂದಾಗಿದ್ದ ಐತಿಹಾಸಿಕ ಘಟನೆಯೂ ಇಲ್ಲಿ ನಡೆದಿದೆ. ಆದರೆ ಈ ಬಾರಿ ಮಾತ್ರ ಎಂದಿನಂತೆ ಜಾತಿ ಲೆಕ್ಕಾಚಾರದ ಮೇಲೆಯೇ ಚುನಾವಣಾ `ರೇಸ್ ಕುದುರೆ' ಓಡುತ್ತಿದೆ.
ವೀರಶೈವರು, ಕುರುಬರ ಪ್ರಾಬಲ್ಯ ಇರುವ ಕಡೂರು ಕ್ಷೇತ್ರ `ಅಭಿವೃದ್ಧಿಯ ಹರಿಕಾರ' ಎನಿಸಿಕೊಂಡಿದ್ದ ದಿವಂಗತ ಕೆ.ಎಂ.ಕೃಷ್ಣಮೂರ್ತಿ ಅವರ ನೆಲೆ. ಈವರೆಗಿನ 13 ಚುನಾವಣೆಗಳಲ್ಲಿ 7 ಬಾರಿ ಕುರುಬರು ಮತ್ತು 6 ಬಾರಿ ವೀರಶೈವರು ಇಲ್ಲಿಂದ ಆರಿಸಿಬಂದಿದ್ದಾರೆ. ನಿರಂತರವಾಗಿ ನಾಲ್ಕು ಬಾರಿ ಗೆದ್ದು, ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದರೂ ತಮ್ಮ ಚಾಣಾಕ್ಷತನದಿಂದ ಕೋಟ್ಯಂತರ ರೂಪಾಯಿಯ ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದವರು ಕೃಷ್ಣಮೂರ್ತಿ.
ಅವರು ಅನಾರೋಗ್ಯದಿಂದ ಮೃತಪಟ್ಟ ಬಳಿಕ 2010ರ ಸೆಪ್ಟೆಂಬರ್‌ನಲ್ಲಿ ನಡೆದ ಉಪಚುನಾವಣೆಯ ಗತವೈಭವವನ್ನು ಕ್ಷೇತ್ರದ ಜನ ಇನ್ನೂ ಮರೆತಿಲ್ಲ. ಈ ಬಾರಿಯ ಚುನಾವಣೆ ಬಗ್ಗೆ ಕೇಳಿದರೆ, ಹಲವರು ನಾಲಿಗೆ ಚಪ್ಪರಿಸುತ್ತಾ ಬಂದು ನಿಲ್ಲುವುದು ಉಪಚುನಾವಣೆಯ ವಿಷಯಕ್ಕೇ. ಒಂದೆರಡು ವರ್ಷದಲ್ಲೇ ಬರಲಿದ್ದ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಆಗಿನ ಬಿಜೆಪಿ ಸರ್ಕಾರಕ್ಕೆ ಉಪಚುನಾವಣೆ ಅತ್ಯಂತ ಮಹತ್ವದ್ದಾಗಿತ್ತು. ಆಳುವ ಪಕ್ಷವೇ ಸೋಲನುಭವಿಸಿದರೆ ಸರ್ಕಾರ ಸಾಕಷ್ಟು ಮುಜುಗರ ಎದುರಿಸಬೇಕಾಗುತ್ತಿತ್ತು. ಅದಕ್ಕಾಗಿ, ಶತಾಯಗತಾಯ ಗೆಲ್ಲುವ ಗುರಿಯೊಂದಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಇಡೀ ಸರ್ಕಾರವೇ ಇಲ್ಲಿ ಬೀಡುಬಿಟ್ಟಿತ್ತು.
`ಜಾತಿಗೊಬ್ಬೊಬ್ರು ಸಚಿವರುಗಳ್ನ ಆಯಪ್ಪ ಇಲ್ಲಿ ಹಂಚ್‌ಬಿಟ್ಟಿದ್ದ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸೋಮಣ್ಣ ಅವರಂತೂ ತಮ್ಮೂರನ್ನೇ ಮರೆತು ಇಲ್ಲಿಯವರೇ ಆಗಿಹೋಗಿದ್ರು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಾನ್‌ಪರಾಗ್ ಡಬ್ಬಗಳ ಮೂಲಕ, ಮಿನಿಸ್ಟ್ರು ಕಾರ್‌ನಲ್ಲೆಲ್ಲ ಹಣ ಬಂತು. ಅಯ್ಯೋ ಲಕ್ಷ ಅನ್ನೋದು ಇಲ್ಲಿ ಅಲಕ್ಷ್ಯ ಆಗೋಗಿತ್ತು. ಕಮ್ಮಿ ಅಂದ್ರೂ 50 ಕೋಟಿನಾದ್ರೂ ಅದೊಂದು ಚುನಾವಣೆಗೆ ಖರ್ಚು ಮಾಡಿದ್ರು' ಎಂದು ಕಣ್ಣರಳಿಸುತ್ತಾರೆ ಕೆಲವರು.
`ನೀತಿಸಂಹಿತೆ ಪ್ರಕಾರ ಚುನಾವಣೆ ದಿನ ಯಾವ್ದೇ ಸಚಿವರು ಕ್ಷೇತ್ರದಲ್ಲಿ ನಿಲ್ಲುವಂತಿಲ್ಲ. ಆದ್ರೆ ಒಬ್ರು ಸಚಿವರಂತೂ ಹಳೆ ಮಾರುತಿ 800 ಕಾರಿನಲ್ಲಿ ಬಣ್ಣಬಣ್ಣದ ರಂಗೀಲಾ ಟಿ ಶರ್ಟ್ ಹಾಕ್ಕೊಂಡು, ಹಣೆಗೆ ನಾಮ ಬಳ್ಕೊಂಡು ಯಾರ‌್ಗೂ ಗೊತ್ತಾಗ್ದ ವೇಷದಲ್ಲಿ ಇಡೀ ಕ್ಷೇತ್ರದಲ್ಲಿ ಸುತ್ತಾಡ್ತಾ ಇದ್ರು. ತಮ್ಮ ಮುಖಂಡರುಗಳ್ಗೆ ಸೂಚನೆಗಳ್ನ ಕೊಡ್ತಾನೇ ಇದ್ರು' ಎಂದು ಹೇಳುತ್ತಾರೆ ವೀರೇಶ್ ಕುಮಾರ್. `ಕೆಎಂಕೆ ಕಾಲ್ದಲ್ಲಿ ಉತ್ತಮ ಕೆಲ್ಸಗಳಾಗಿದ್ದವು' ಎಂದು ಪಿ.ಕೆ.ರೇವಣ್ಣಯ್ಯ ಸ್ಮರಿಸಿದರೆ, `ಟ್ಯಾಂಕರ್‌ಗೆ 500 ರೂಪಾಯಿ ದುಡ್ಡು ಕೊಟ್ರೂ ಸರಿಯಾಗಿ ನೀರು ಸಿಕ್ತಿಲ್ಲ. ಆಗ ಗೆದ್ದವ್ರ ಮೇಲೆ ಜನರಿಗೆ ನಂಬಿಕೆ ಇರ್ತಾ ಇತ್ತು. ಈಗ ಅದ್ಯಾವ್ದೆ ಇಲ್ಲ. ಎಂಥ ಕಾಲ ಬಂತು' ಎಂದು ವಿಷಾದಿಸುತ್ತಾರೆ ಹಿರಿಯರಾದ ಎಂ.ಎಸ್.ರಂಗನಾಥಸ್ವಾಮಿ.
ಇಂತಹ ಕ್ಷೇತ್ರದಲ್ಲಿ ಇದೀಗ ಅತೀವ ಅಚ್ಚರಿ ಎಂಬಂತೆ, ಸಭ್ಯ ರಾಜಕಾರಣಿ ಎನಿಸಿಕೊಂಡಿರುವ ಜೆಡಿಎಸ್‌ನ ವೈ.ಎಸ್.ವಿ.ದತ್ತ ಅವರ ಹೆಸರು, ಕಣದಲ್ಲಿರುವ ಇತರ ಪ್ರಮುಖ ಅಭ್ಯರ್ಥಿಗಳ ಜೊತೆಜೊತೆಗೇ ಕೇಳಿಬರುತ್ತಿದೆ. `ನಮ್ ದತ್ತಣ್ಣ ಈ ಬಾರಿ ಗೆಲ್ಲಲೇಬೇಕು. ಅವರ ಬ್ರಾಹ್ಮಣ ಜಾತಿಯ 500 ವೋಟುಗಳು ಇಲ್ಲಿದ್ರೆ ಹೆಚ್ಚು. ಆದ್ರೂ, ಎರಡು ಬಾರಿ ಸೋತಿರೋ ಅವ್ರ ಬಗ್ಗೆ ಕ್ಷೇತ್ರದಾದ್ಯಂತ ಜನರ ಒಲವು ಕಂಡುಬರುತ್ತಿದೆ. ನಾವೆಲ್ಲ ಅವರ ಗೆಲುವಿಗಾಗಿ ಹಗಲೂ ರಾತ್ರಿ ಶ್ರಮಿಸ್ತಾ ಇದ್ದೀವಿ. ಹಳ್ಳಿಹಳ್ಳಿಗಳಲ್ಲಿ ಜನ ಅವರಿಗೆ ಆರತಿ ಎತ್ತಿ ಪ್ರಚಾರಕ್ಕೆಂದು ಆರತಿ ತಟ್ಟೆಯಲ್ಲಿ ಹಣ ಇಡುತ್ತಿದ್ದಾರೆ' ಎನ್ನುತ್ತಾರೆ ಬಿ.ಟಿ.ಗಂಗಾಧರ ನಾಯ್ಕ.
ಎಲ್ಲ ಅಭ್ಯರ್ಥಿಗಳೂ ಸ್ಥಳೀಯವಾಗಿ ಘಟಾನುಘಟಿಗಳೇ. ಆದರೂ ಇದೆಲ್ಲದರ ನಡುವೆಯೂ, ಈವರೆಗೆ ಜಾತಿಯೇ ಮೇಲುಗೈ ಸಾಧಿಸುತ್ತಾ ಬಂದಿರುವ ಈ ಕ್ಷೇತ್ರದಲ್ಲಿ ದತ್ತ ಅವರು ಆಯ್ಕೆಯಾಗಿದ್ದೇ ಆದರೆ, ನಿಜಕ್ಕೂ ರಾಜ್ಯದಲ್ಲೇ ಒಂದು ಇತಿಹಾಸ ಸೃಷ್ಟಿಯಾದಂತೆ; ಪ್ರಜಾಪ್ರಭುತ್ವದಲ್ಲಿ ಅದಕ್ಕಿಂತ ಉತ್ತಮವಾದ ಬೆಳವಣಿಗೆ ಮತ್ತೊಂದಿಲ್ಲ ಎನ್ನುತ್ತಾರೆ ಈ ಭಾಗದ ವಿಚಾರವಂತರು.
ಕಡೂರಿನ ಸ್ವರ್ಣಾಂಭ ದೇವಸ್ಥಾನದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ವೈ.ಎಸ್.ವಿ. ದತ್ತ ಅವರು `ಪ್ರಜಾವಾಣಿ'ಗೆ ನೀಡಿದ ಸಂದರ್ಶನ ಇಲ್ಲಿದೆ.
*ಜಾತಿ ರಾಜಕಾರಣ ಮೇಲುಗೈ ಸಾಧಿಸುತ್ತಾ ಬಂದಿರುವ ಕ್ಷೇತ್ರದಲ್ಲಿ ಯಾವ ಧೈರ್ಯದ ಮೇಲೆ ಚುನಾವಣೆ ಎದುರಿ ಸುತ್ತಿದ್ದೀರಿ?
ನನ್ನದು ಜಾತಿ ರಾಜಕಾರಣ ಅಲ್ಲ, ಪ್ರೀತಿ ರಾಜಕಾರಣ. ಅಂತಹದ್ದೊಂದು ಪ್ರಯೋಗವನ್ನು ನಾನಿಲ್ಲಿ ಮಾಡಲು ಹೊರಟಿದ್ದೇನೆ. 2010ರ ಉಪಚುನಾವಣೆ ಇಡೀ ಕ್ಷೇತ್ರವನ್ನು ವಿಕೃತಗೊಳಿಸಿದ ಅತ್ಯಂತ ಕೆಟ್ಟ ಚುನಾವಣೆ. ದತ್ತನನ್ನು ಸೋಲಿಸಲೇಬೇಕೆಂಬ ಒನ್ ಪಾಯಿಂಟ್ ಪ್ರೋಗ್ರಾಂ ಹಾಕಿಕೊಂಡು ಇಡೀ ಬಿಜೆಪಿ ಸರ್ಕಾರವೇ ಇಲ್ಲಿಗೆ ಬಂದಿಳಿದಿತ್ತು. ಆದರೆ ಹಿಂದಿನ ಎರಡು ಚುನಾವಣೆಗಳ ಒಟ್ಟಾರೆ ಪರಿಣಾಮ ಈಗ ಎದ್ದು ಕಾಣುತ್ತಿದೆ. ಈ ಪರಿಯ ಜಾತಿ ರಾಜಕೀಯ ಆಯಾಯ ಸಮುದಾಯದವರಿಗೇ ಅಸಹ್ಯ ಮೂಡಿಸಿದೆ. ಜಾತಿಯ ವೈಭವೀಕರಣದ ವಿರುದ್ಧ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಂಡಿದ್ದಾರೆ. ಎಲ್ಲ ವರ್ಗದವರೂ ನನ್ನ ಜೊತೆ ಇದ್ದಾರೆ. ಅದೇ ನನಗೆ ಶಕ್ತಿ.
*ನಿಮ್ಮ ಮೈನಸ್ ಪಾಯಿಂಟ್ ಏನು?
ಸೋತ ನಂತರ ನಾನು ಮನೆಯಲ್ಲಿ ಕೂರಲಿಲ್ಲ. ಜನರಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದೇನೆ. ಎಚ್.ಡಿ.ದೇವೇಗೌಡರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ, ಅಲ್ಲಿಂದ ಫಂಡ್ ತಂದು ಕೆಲಸ ಮಾಡಿಸಿದ್ದೇನೆ. ಆದರೂ ಆರ್ಥಿಕವಾಗಿ ಪ್ರಬಲರಾದ ಸಾಕಷ್ಟು ಅಭ್ಯರ್ಥಿಗಳಿದ್ದಾರೆ. ಕೊನೇ ಗಳಿಗೆಯಲ್ಲಿ ಅವರೆಲ್ಲ ಏನಾದರೂ ಕಸರತ್ತು ಮಾಡಿದರೆ, ಆಗ ಜನಶಕ್ತಿಯನ್ನೂ ಮೀರಿ ಹಣ ಶಕ್ತಿ ಗೆದ್ದಿದ್ದೇ ಆದರೆ, ಅದು ದತ್ತನಿಗೆ ಮೈನಸ್ ಪಾಯಿಂಟ್
*ಪಕ್ಷದ ಮುಖಂಡರ‍್ಯಾರೂ ಪ್ರಚಾರಕ್ಕೆ ಬರುವುದು ಬೇಡ ಎಂದಿದ್ದೀರಂತೆ?
ಉಪಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆಸಿದ್ದೆ. ತುಂಬಾ ಜನ ಸೇರಿದ್ದರು. ಮಲಗಿದ್ದ ಎದುರಾಳಿಗಳನ್ನೆಲ್ಲ ನಾನೇ ಹೊಡೆದು ಎಬ್ಬಿಸಿದಂಗಾಯ್ತು. ಅದಕ್ಕೇ ಈ ಬಾರಿ ಸಂಸದರಾಗಿ ಇತರ ಕ್ಷೇತ್ರಗಳಂತೆ ಇಲ್ಲೂ ಒಮ್ಮೆ ಬಂದು ಹೋಗಿ ಅಷ್ಟೆ ಎಂದು ದೇವೇಗೌಡರಿಗೆ ತಿಳಿಸಿದ್ದೇನೆ. ಮೊನ್ನೆ ನಾಮಪತ್ರ ಸಲ್ಲಿಸಿದಾಗ ಕಾಸಿಲ್ಲದೆ, ಕರಿಮಣಿ ಇಲ್ಲದೆ ಸಾವಿರಾರು ಜನ ಸೇರಿದ್ದರು. ಅದೇ ನನಗೆ ಧೈರ್ಯ.
*ನಿಮಗಿಂತ ಇಲ್ಲಿ ನಿಮ್ಮ ಬೆಂಬಲಿಗರ ಪ್ರಭಾವವೇ ಹೆಚ್ಚು; ಒಂದು ವೇಳೆ ನೀವೇನಾದರೂ ಶಾಸಕರಾದರೆ ಹತ್ತಾರು ಜನ ಶಾಸಕರಾದಂತೆ ಎಂಬ ಆಕ್ಷೇಪ ಇದೆಯಲ್ಲ...
ಹೌದು, ನಾನೊಬ್ಬ ಶಾಸಕನಾದರೆ ಬರೀ ಹತ್ತಾರಲ್ಲ ಇಡೀ ಕ್ಷೇತ್ರದ ಜನರೆಲ್ಲ ಶಾಸಕರೇ ಆದಂತೆ. ನಾನು ಬೇರೆಯವರಂತೆ ಜನರ ನಡುವೆ ಕೋಟೆ ನಿರ್ಮಿಸಿಕೊಂಡಿಲ್ಲ. ಯಾರು ಬೇಕಾದರೂ 2* ಗಂಟೆಯೂ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ನಾನು ದುಡ್ಡು ಹಂಚುವುದಿಲ್ಲ. ನನ್ನ ಮೊಬೈಲ್ ನಂಬರ್ ಹಂಚುತ್ತೇನೆ. ಯಾರಿಗಾದರೂ ಕಷ್ಟ ಬಂದಾಗ ಕಾಯಿನ್ ಬೂತ್‌ನಿಂದ ಮಧ್ಯರಾತ್ರಿಯಲ್ಲಿ ಮಿಸ್ಡ್ ಕಾಲ್ ಕೊಟ್ಟರೂ ಪ್ರತಿಕ್ರಿಯಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.