ಬೆಂಗಳೂರು: ಶಾಂತಲಾ ದಾಮ್ಲೆ ಬೆಂಗಳೂರಿನ ಬಸವನಗುಡಿ ಕ್ಷೇತ್ರದಲ್ಲಿ ಲೋಕಸತ್ತಾ ಪಕ್ಷದ ಅಭ್ಯರ್ಥಿ. ಅಲ್ಲಿಂದಲೇ ನೈತಿಕ ರಾಜಕೀಯ ಪರ್ವ ಆರಂಭಿಸಿದ್ದಾರೆ. ಅವರು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಬಿ.ಇ. ಪೂರ್ಣಗೊಳಿಸಿದ ನಂತರ ಅಮೆರಿಕದ ವರ್ಜೀನಿಯಾ ಟೆಕ್‌ನಲ್ಲಿ ಎಂ.ಬಿ.ಎ. ಓದಿದರು. ಸುಮಾರು 12 ವರ್ಷ ಅಮೆರಿಕದಲ್ಲಿ ಕೆಲಸ ಮಾಡಿ ಮೂರು ವರ್ಷಗಳ ಹಿಂದೆಯಷ್ಟೇ ಸ್ವದೇಶಕ್ಕೆ ಮರಳಿದರು. ಹೊಸ ರೀತಿಯ ರಾಜಕೀಯದ ಆಶಯದೊಂದಿಗೆ ಅಖಾಡಕ್ಕೆ ಇಳಿದಿರುವ ಅವರ ಮನದಾಳದ ಮಾತುಗಳು ಇಲ್ಲಿವೆ.
*ರಾಜಕೀಯಕ್ಕೆ ಬರಬೇಕು ಅನ್ನಿಸಿದ್ದು ಯಾವಾಗ, ಯಾಕೆ?
ಹನ್ನೆರಡು ವರ್ಷಗಳ ಹಿಂದಿನ ಮಾತು. ನಾನು ಅಮೆರಿಕಕ್ಕೆ ಹೋದ ಹೊಸತು. ಅಲ್ಲಿನ ವ್ಯವಸ್ಥೆಯನ್ನು ಹೋಲಿಕೆ ಮಾಡಿ ನೋಡಿದಾಗ ನಮ್ಮಲ್ಲೇಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಪದೇಪದೇ ಅನ್ನಿಸುತ್ತಿತ್ತು. ರಾಜಕೀಯ ಶುದ್ಧವಾಗಿದ್ದರೆ ಇಡೀ ವ್ಯವಸ್ಥೆಯನ್ನು ಸರಿದಾರಿಗೆ ತರಬಹುದು ಎಂಬ ತೀರ್ಮಾನಕ್ಕೆ ಬಂದಿದ್ದೇ ಆಗ.
*ನಿಮ್ಮ ಉಮೇದುವಾರಿಕೆಗೆ ಕ್ಷೇತ್ರದ ಜನರ ಪ್ರತಿಕ್ರಿಯೆ ಹೇಗಿದೆ?
ಚೆನ್ನಾಗಿಯೇ ಇದೆ. ವಿಶೇಷವಾಗಿ ಮಹಿಳೆಯರು ಬೆಂಬಲಿಸುತ್ತಿದ್ದಾರೆ. `ನಾನು ಕಟ್ಟಾ ಆರ್‌ಎಸ್‌ಎಸ್. ಆದರೆ ಈ ಬಾರಿ ನಿಮ್ಮನ್ನು ಬೆಂಬಲಿಸುತ್ತೇನೆ' ಎಂದು ಗಿರಿನಗರದಲ್ಲಿ ಒಬ್ಬರು ಹೇಳಿದರು. ಅಷ್ಟರ ಮಟ್ಟಿಗೆ ಜನ ಸ್ಪಂದಿಸುತ್ತಿದ್ದಾರೆ. ನಮ್ಮ ಉದ್ದೇಶ ಅವರಿಗೆ ಮನವರಿಕೆಯಾಗುತ್ತಿದೆ ಎಂದು ಭಾವಿಸಿದ್ದೀನಿ.
*ಗುಡಗಾಂವ್‌ನಲ್ಲಿ 2011ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಯುವ ಅಭ್ಯರ್ಥಿ ನಿಶಾ ಸಿಂಗ್ ಪರ ಪ್ರಚಾರ ಮಾಡಿದ ಅನುಭವ ಇಲ್ಲಿ ನೆರವಾಗುತ್ತಿದೆಯಾ?
ಅನುಮಾನವೇ ಇಲ್ಲ. ಹಾಗೆ ನೋಡಿದರೆ ಗುಡಗಾಂವ್‌ಗೂ ಬಸವನಗುಡಿಗೂ ತುಂಬಾ ಸಾಮ್ಯತೆ ಇದೆ. ಅಲ್ಲಿ ಕೂಡ ಸುಶಿಕ್ಷಿತರು ಇದ್ದಾರೆ. ನಗರಸಭೆ ಚುನಾವಣೆಯಲ್ಲಿ ಶೇ 89ರಷ್ಟು ಮತದಾನದ ಗುರಿ ಇಟ್ಟುಕೊಂಡಿದ್ದೆವು. ಸುಶಿಕ್ಷಿತರಲ್ಲಿ ಜಾಗೃತಿ ಮೂಡಿಸಿದ ಫಲವಾಗಿ ಶೇ 69ರಷ್ಟು ಮತದಾನವಾಗಿತ್ತು. `ನಿಮ್ಮಂಥವರು ಸ್ಪರ್ಧಿಸಿದರೆ ಖಂಡಿತವಾಗಿಯೂ ವೋಟ್ ಹಾಕುತ್ತೇವೆ' ಎಂದು ಜನ ಪ್ರತಿಕ್ರಿಯಿಸುತ್ತಿದ್ದರು. ಗುಡಗಾಂವ್‌ನಲ್ಲಿ ನಿಶಾ ಅವರಿಗೆ ಆದ ಅನುಭವ ನನಗೆ ಈಗ ಬಸವನಗುಡಿಯಲ್ಲಿ ಆಗುತ್ತಿದೆ. ಚುನಾವಣೆ ಬಗ್ಗೆ ತಾತ್ಸಾರ ಇಟ್ಟುಕೊಂಡವರು ಕೂಡ ನನ್ನನ್ನು ಬೆಂಬಲಿಸುತ್ತಿದ್ದಾರೆ.
*ನಿಮ್ಮ ಪ್ರಚಾರ ತಂತ್ರ ಹೇಗಿದೆ?
ಈ ಸಲದ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಒಂಬತ್ತು ತಿಂಗಳ ಹಿಂದೆಯೇ ಪ್ರಚಾರ ಶುರುಮಾಡಿದೆ. ಭಾವಚಿತ್ರ ಇಲ್ಲ ಎನ್ನುವ ಕಾರಣಕ್ಕೆ ಬಸವನಗುಡಿಯಲ್ಲಿ ಸುಮಾರು 70 ಸಾವಿರ ಜನರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇಡೀ ಬೆಂಗಳೂರಿನಲ್ಲಿ ಈ ರೀತಿ 11 ಲಕ್ಷ ಮಂದಿಯ ಹೆಸರು ಕೈಬಿಟ್ಟು ಹೋಗಿತ್ತು. ನಾನು ಇದನ್ನು ಸಾರ್ವಜನಿಕರ ಗಮನಕ್ಕೆ ತಂದೆ.
ಮತದಾರರ ನೋಂದಣಿ ಕಾರ್ಯ ಮುಗಿದ ಮೇಲೆ ಪ್ರಣಾಳಿಕೆಯ ಕಿರು ಹೊತ್ತಿಗೆಯನ್ನು ಮನೆಮನೆಗೆ ಹಂಚಿದೆ. ಆಗ ಜನ ಸಂಪರ್ಕ ಶುರುವಾಯಿತು. ಈಗ ಮನೆಮನೆಗೂ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಗುಂಪುಗೂಡಿ ಹೋದರೆ ಅಭ್ಯರ್ಥಿ ಯಾರು ಎನ್ನುವುದು ಜನರಿಗೆ ಗೊತ್ತಾಗುವುದಿಲ್ಲ. ಹಾಗಾಗಿ ಆದಷ್ಟು ಕಡಿಮೆ ಜನ ಹೋಗುತ್ತಿದ್ದೇವೆ. ವಿಶೇಷವಾಗಿ ಹೆಣ್ಣು ಮಕ್ಕಳು ಹೊರಗೆ ಬಂದು ಮಾತನಾಡುತ್ತಾರೆ. ನಮ್ಮ ಪ್ರಣಾಳಿಕೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಪ್ರಚಾರ ವೆಬ್‌ಸೈಟ್ ರೀತಿಯಲ್ಲಿಯೇ ಕ್ಷೇತ್ರದ ವೆಬ್‌ಸೈಟ್ ರಚಿಸಿ, ಸ್ಥಳೀಯ ಅಭಿವೃದ್ಧಿ ಯೋಜನೆಗಳ ವಿವರಗಳನ್ನು ಸಾರ್ವಜನಿಕರ ಮುಂದಿಡುವ ಆಲೋಚನೆ ಇದೆ. ಒಂದು ಕ್ಷೇತ್ರಕ್ಕೆ ಎಷ್ಟು ಹಣ ಬಿಡುಗಡೆಯಾಗುತ್ತದೆ, ಅದು ಎಲ್ಲಿ ಹೋಗುತ್ತದೆ ಇತ್ಯಾದಿ ವಿವರಗಳು ಜನರಿಗೆ ಗೊತ್ತೇ ಆಗದ ಪರಿಸ್ಥಿತಿ ಈಗಿದೆ.
*ಬೆಂಬಲ ಸೂಚಿಸಲು ಮಿಸ್ಡ್ ಕಾಲ್ ಕೊಡಿ ಎಂದು ಕರಪತ್ರದಲ್ಲಿ ಮೊಬೈಲ್ ಸಂಖ್ಯೆ ಹಾಕಿದ್ದೀರಿ. ಪ್ರತಿಕ್ರಿಯೆ ಹೇಗಿದೆ? ಕೀಟಲೆ ಕರೆಗಳು ಬಂದಿಲ್ಲವೇ?
ಕೀಟಲೆ ಮಾಡುವುದಕ್ಕೆ ಯಾರೂ ಕರೆ ಮಾಡಿಲ್ಲ ಎಂದು ಭಾವಿಸಿದ್ದೀನಿ. ಇವರೇನು ಮಾಡುತ್ತಾರೆ ಎನ್ನುವ ಕುತೂಹಲ ಇರಬಹುದೇನೋ. ಕೆಲವರು ವಾಪಸ್ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ನಮ್ಮನ್ನು ಬೆಂಬಲಿಸಿ ದಿನಕ್ಕೆ ಏನಿಲ್ಲವೆಂದರೂ 20ರಿಂದ 25ಕರೆಗಳು ಬರುತ್ತವೆ. ಈವರೆಗೆ ಸುಮಾರು *-5 ಸಾವಿರ ಕರೆಗಳು ಬಂದಿವೆ. ನಮ್ಮ ಕಾರ್ಯಕ್ರಮ ಇದ್ದ ದಿನ 300ರಿಂದ 350ಕರೆಗಳು ಬಂದಿದ್ದೂ ಉಂಟು.
*ನಿಮ್ಮ ಮತದಾರರು ಯಾರು?
ಎಲ್ಲ ಥರದವರೂ ಇದ್ದಾರೆ. ಸುಶಿಕ್ಷಿತರು ನನ್ನನ್ನು ಬೆಂಬಲಿಸುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಕೊಳೆಗೇರಿ ಮಹಿಳೆಯರು ಸ್ಪಂದಿಸುತ್ತಿದ್ದಾರೆ. ಇದು ಗಮನಾರ್ಹ ಬೆಳವಣಿಗೆ.
*ಈ ಚುನಾವಣೆ ಮುಂದಿನ ಹೋರಾಟದ ವೇದಿಕೆ ಎಂದು ಪರಿಗಣಿಸುವಿರಾ?
ಹೌದು. ಸುಮ್ಮನೆ ಕೂತರೆ ನಮ್ಮ ದೇಶ ನೈಜೀರಿಯಾ ಆಗುವ ಅಪಾಯ ಇದೆ. ಬದಲಾವಣೆ ತಾನೇ ತಾನಾಗಿ ಆಗುವಂಥದ್ದಲ್ಲ. ಹೋರಾಟ ಮಾಡುವುದು ಅನಿವಾರ್ಯ. ರಾಜಕೀಯ ಬದಲಾಗಬೇಕು. ನಮ್ಮಲ್ಲಿ ಒಂದಿಬ್ಬರು ಗೆದ್ದರೂ ಜನರಿಗೆ ನಮ್ಮ ಬಗ್ಗೆ ಭರವಸೆ ಮೂಡುತ್ತದೆ.
*ಕರ್ನಾಟಕದಲ್ಲಿ ಲೋಕಸತ್ತಾ ಪಕ್ಷದ ಭವಿಷ್ಯ?
ಇದು ಆರಂಭವಷ್ಟೆ. ಇನ್ನೂ ಇಂಥ ಮೂರ್ನಾಲ್ಕು ಚುನಾವಣೆಗಳನ್ನು ನಾವು ಎದುರಿಸಬೇಕಾಗುತ್ತದೆ. ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ಹೋರಾಟದ ಅನಿವಾರ್ಯತೆ ಬರಬಾರದು. ಆ ಹಂತವನ್ನು ನಾವು ತಲುಪಬೇಕಾದರೆ ನಮ್ಮಂಥವರು (30ರಿಂದ 50ವರ್ಷದೊಳಗಿನವರು) ಕಷ್ಟಪಡಲೇಬೇಕು.
*ನೀವು ಎಷ್ಟು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೀರಿ?
27ಸ್ಥಾನಗಳಲ್ಲಿಯೂ ಗೆಲ್ಲುವ ಹೋರಾಟ ಇದ್ದೇ ಇದೆ. ನಾಲ್ಕೈದು ಸ್ಥಾನಗಳಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದೇವೆ. ಅದೇನೇ ಇರಲಿ, ಫಲಿತಾಂಶವನ್ನು ಬದಲಾಯಿಸುವ ಶಕ್ತಿ ಇದೆ ಎನ್ನುವುದು ಸತ್ಯ.
*ಈ ಚುನಾವಣೆಯಲ್ಲಿ ಅಣ್ಣಾ ಹಜಾರೆ ಚಳವಳಿಯ ಪರಿಣಾಮ ಕಾಣುತ್ತಿದೆಯಾ?
ಖಂಡಿತವಾಗಿಯೂ ಇದೆ. ನಮ್ಮ ಪಕ್ಷದ ಸ್ವಯಂಸೇವಕರಲ್ಲಿ ಅಣ್ಣಾ ಚಳವಳಿಯಲ್ಲಿ ಕೆಲಸ ಮಾಡಿದವರೇ ಹೆಚ್ಚು. ಯುವಜನತೆಯಲ್ಲಿ ಬದಲಾವಣೆಯ ಹಂಬಲ ಹೆಚ್ಚಾಗಿದೆ. ಹಾಗಾಗಿ ನಮ್ಮಂಥ ಅಭ್ಯರ್ಥಿಗಳನ್ನು ಜನ ಬೆಂಬಲಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ರಾಜಧಾನಿ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ನಮ್ಮಲ್ಲಿಯೂ ಪ್ರತಿಭಟನೆ ನಡೆಯಿತು. ಅಣ್ಣಾ ಚಳವಳಿಯ ಪರಿಣಾಮವನ್ನು ಕಾಣಲು ಇವೆರಡು ನಿದರ್ಶನ ಸಾಕಲ್ಲವೇ?
*ಅಣ್ಣಾ ಹೋರಾಟದ ಕಿಚ್ಚು ಏಕಾಏಕಿ ತಣ್ಣಗಾಯಿತಲ್ಲ?
ಹಾಗೆ ಅನ್ನಿಸಿದರೂ ಅದು ಬೂದಿ ಮುಚ್ಚಿದ ಕೆಂಡದ ಹಾಗಿದೆ. ಎಲ್ಲೋ ಒಂದು ಕಿಡಿ ನಮ್ಮನ್ನು ಸುಡುತ್ತಲ್ಲೇ ಇದೆ. ಅವಕಾಶ ಸಿಕ್ಕರೆ ಅದು ಜ್ವಾಲಾಮುಖಿಯಾಗುತ್ತದೆ. 1857ರ ಸಿಪಾಯಿ ದಂಗೆಯನ್ನೇ ತೆಗೆದುಕೊಳ್ಳೋಣ. ಶುರುವಿನಲ್ಲಿ ಅದು ಸಣ್ಣ ಪ್ರಮಾಣದಲ್ಲಿ ಇತ್ತು. ಆಗ ನಮ್ಮ ಹಿರಿಯರೆಲ್ಲ ಅರ್ಧಕ್ಕೆ ಕೈಚೆಲ್ಲಿ ಕೂತಿದ್ದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಈಗ ಮಾಧ್ಯಮ ಪ್ರಬಲವಾಗಿದೆ. ವ್ಯವಸ್ಥೆಯನ್ನು ಬದಲಾಯಿಸಲು 90 ವರ್ಷಗಳು ಬೇಕಿಲ್ಲ. ಕೇವಲ 10ರಿಂದ 15ವರ್ಷಗಳು ಸಾಕು ಅಷ್ಟೆ.
ನನ್ನ ಪ್ರಕಾರ ರಾಜಕೀಯ ಬದಲಾಗದೇ ಹೋರಾಟ, ಪ್ರತಿಭಟನೆಗೆ ಅರ್ಥವಿಲ್ಲ. ಈ ಪಕ್ಷ ಕಟ್ಟುವ ಮುನ್ನ ಡಾ. ಜಯಪ್ರಕಾಶ್ ನಾರಾಯಣ್ ಅವರು ಲೋಕಸತ್ತಾ ಜನಾಂದೋಲನ ಶುರುಮಾಡಿ ಸುಮಾರು 10ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ಪಕ್ಷ ಅಸ್ತಿತ್ವಕ್ಕೆ ಬಂತು. ಹೋರಾಟಕ್ಕೆ ರಾಜಕೀಯ ನೆಲೆಗಟ್ಟು ಬೇಕು ಎಂದು ನಮಗೆ ಆರು ವರ್ಷಗಳ ಹಿಂದೆಯೇ ಮನವರಿಕೆಯಾಗಿತ್ತು. ಆದರೆ ಆಂ ಆದ್ಮಿ ಪಕ್ಷದವರಿಗೆ ಈಗ ಅರಿವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.