ಶಿವಮೊಗ್ಗ: ಸಾಗರದ ಹೆಗ್ಗೋಡು ಬಳಿಯ ಕೆರೆಕೊಪ್ಪ ಗ್ರಾಮದ ಪಿ. ಆರ್. ಬಾಲಚಂದ್ರ ಅವರಿಗೆ ನಾಲ್ಕು ವರ್ಷಗಳ ಹಿಂದೆ ತಹಸೀಲ್ದಾರ್ ಕಚೇರಿಯಿಂದ ನೋಟಿಸ್ ಬಂತು. `ನಿಮ್ಮ ಮನೆ ಸರ್ಕಾರಿ ಗೋಮಾಳ ಜಾಗದಲ್ಲಿದ್ದು, ಅದನ್ನು ಕಿತ್ತು ಹಾಕಬೇಕಾಗುತ್ತದೆ' ಎಂಬ ಒಕ್ಕಣೆ ಅದರಲ್ಲಿತ್ತು. 40 ವರ್ಷಗಳಿಂದ ವಾಸವಿದ್ದ ಹಳೆ ಮನೆ ಕೆಡವಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಮನೆ ಕಟ್ಟಿಸಿದ್ದ ಅವರಿಗೆ ಎದೆ ಒಡೆದುಹೋಯ್ತು.
ಅಲ್ಲಿಂದ ಬಾಲಚಂದ್ರ ಅವರ ಸಂಕಷ್ಟದ ಸರಮಾಲೆ ಆರಂಭವಾಯ್ತು. `40 ವರ್ಷಗಳ ಹಿಂದೆ ನನ್ನ ಅಪ್ಪ ಖರೀದಿಸಿದ್ದ ಜಾಗ ಇದು. ಆಗಿನಿಂದ ಗ್ರಾಮ ಪಂಚಾಯ್ತಿಗೆ ಕಂದಾಯ ಕಟ್ಟುತ್ತಿದ್ದೇವೆ. 30 ವರ್ಷಗಳ ಹಿಂದೆಯೇ ಮನೆಗೆ ವಿದ್ಯುತ್ ಸಂಪರ್ಕ ಬಂದಿದೆ. ನನ್ನ ಮನೆ ಅಕ್ರಮವಲ್ಲ' ಎಂಬ ಅವರ ಮನವಿಯನ್ನು ತಹಸೀಲ್ದಾರ್, ಎ ಸಿ, ಡಿ ಸಿ ತಿರಸ್ಕರಿಸಿದರು. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು.
ಬಾಲಚಂದ್ರ ಅವರು ತಮ್ಮ ಮನೆ ಇರುವ 15 ಗುಂಟೆ ಜಾಗದ ಬದಲು ತೋಟದ ಕೆಳಗಿರುವ 1 ಎಕರೆ 7 ಗುಂಟೆ ಜಾಗವನ್ನು ಸರ್ಕಾರಕ್ಕೆ ಬಿಡಲು ಒಪ್ಪಿಕೊಂಡ ಮೇಲೆ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಅವರ ಮನೆ ತೆರವು ಆದೇಶಕ್ಕೆ ತಡೆ ನೀಡಿದೆ.
ಈ ಸಮಸ್ಯೆಗೆಲ್ಲ ಕಾರಣ ಕರ್ನಾಟಕ ಭೂಕಂದಾಯ ಕಾಯ್ದೆಯ ತಂದ ತಿದ್ದುಪಡಿ. ಬೆಂಗಳೂರು, ಮೈಸೂರಿನಂತಹ ನಗರಗಳ ಸುತ್ತ ಸರ್ಕಾರಿ ಭೂಮಿ, ಗೋಮಾಳ ಜಮೀನು ನುಂಗಿ ಕೊಬ್ಬುತ್ತಿರುವ ರಿಯಲ್ ಎಸ್ಟೇಟ್ ಕುಳಗಳಿಗೆ ಕಡಿವಾಣ ಹಾಕಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಜೆಡಿಎಸ್-ಬಿಜೆಪಿ ಸಮಿಶ್ರ ಸರ್ಕಾರದಲ್ಲಿ 1964ರ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಈ ಕಾಯ್ದೆಯ 14 `ಎ' ಉಪನಿಯಮ, `192 ಎ' ಪ್ರಕಾರ ಸರ್ಕಾರಿ ಜಮೀನು ಒತ್ತುವರಿ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧ. ಅದರಲ್ಲೂ, ಕಣ್ಣಿಗೆ ಬಿದ್ದಾಗ ನಿರ್ಲಕ್ಷಿಸಿದಲ್ಲಿ ತಹಸೀಲ್ದಾರರು ಮತ್ತು ಇತರ ಅಧಿಕಾರಿಗಳೂ ಕಠಿಣ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.
ಮಲೆನಾಡಿನ ಎಲ್ಲ ಅಡಿಕೆ ತೋಟಗಳಂತೆ ಬಾಲಚಂದ್ರ ಅವರ ಅಡಿಕೆ ತೋಟ ಬೆಟ್ಟಗಳ ನಡುವಿನ ತಗ್ಗು ಪ್ರದೇಶದಲ್ಲಿದೆ. ಅಲ್ಲಿ ಮನೆ ಕಟ್ಟುವುದು ಅಸಾಧ್ಯ. ಬ್ರಿಟಿಷ್ ಕಾಲದಲ್ಲಿ ತೋಟದ ಬಳಕೆಗಾಗಿ ಬಿಡಲಾದ ಬೆಟ್ಟದಲ್ಲಿ (ಬೆಟ್ಟಾ ಲ್ಯಾಂಡ್) ಅವರು ಮನೆ ಕಟ್ಟಿಕೊಂಡಿದ್ದಾರೆ. ಬೆಟ್ಟ ಯಾವುದು, ಗೋಮಾಳ ಯಾವುದು ಎಂಬ ಸರ್ವೇ ಕಾರ್ಯ ಈವರೆಗೂ ಅಲ್ಲಿ ನಡೆದೇ ಇಲ್ಲ. ಹೊಸ ಕಂದಾಯ ಕಾಯ್ದೆ ಜಾರಿಗೆ ಬಂದ ತಕ್ಷಣ ಬಾಲಚಂದ್ರ ಅವರಿಗೆ ಆಗದ ಯಾರೋ ತಹಸೀಲ್ದಾರ್ ಕಚೇರಿಗೆ ಪತ್ರ ಬರೆದಿದ್ದರು. ಅಲ್ಲಿಂದ ಅವರ ಕಷ್ಟಗಳೆಲ್ಲ ಆರಂಭವಾದವು.
ಇದು ಬಾಲಚಂದ್ರ ಅವರೊಬ್ಬರ ಕಥೆಯಲ್ಲ. ಈ ಕಾಯ್ದೆ ಸಮರ್ಪಕವಾಗಿ ಜಾರಿಯಾದಲ್ಲಿ ಸಾಗರ ತಾಲ್ಲೂಕಿನಲ್ಲಿ 10 ಸಾವಿರ ಮನೆಗಳು, ಶಿವಮೊಗ್ಗ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಕುಟುಂಬಗಳು ಸಮಸ್ಯೆಯ ಸುಳಿಗೆ ಸಿಲುಕಲಿವೆ. ಬೆಟ್ಟ, ಗುಡ್ಡಗಳಿಂದ ಕೂಡಿದ ಉತ್ತರಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆಗಳ ಮಲೆನಾಡಿನ ಭಾಗಗಳ ಲಕ್ಷಾಂತರ ಜನ ಇದೇ ತೊಂದರೆ ಎದುರಿಸಲಿದ್ದಾರೆ. ಮನೆಯ ಮುಂದೆ ತುಳಸಿಕಟ್ಟೆ, ಹಿಂದೆ ಕೊಟ್ಟಿಗೆ ಕಟ್ಟಿದರೂ, ಗೊಬ್ಬರ ಗುಂಡಿ ತೋಡಿದರೂ ಜೈಲಿಗೆ ತಳ್ಳುವಂತಹ ಕಾನೂನು ಇದು ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಹೋರಾಟಗಾರ ರಮೇಶ್ ಹೆಗ್ಡೆ.
ಮಲೆನಾಡಿನ ಜನರನ್ನು ಈಗ ಮತ್ತೊಂದು ಭೂತ ಕಾಡುತ್ತಿದೆ. ಅದು ಇಂಡೀಕರಣದ ಭೂತ. 150-200 ವರ್ಷಗಳ ಹಿಂದಿನ ಬ್ರಿಟಿಷ್ ಕಾಲದ, ಮಹಾರಾಜರ ಆಳ್ವಿಕೆಯ ದಾಖಲೆಗಳಲ್ಲಿ ಅರಣ್ಯಭೂಮಿ ಎಂದು ನಮೂದಾಗಿರುವ ಪ್ರದೇಶಗಳನ್ನು ಅರಣ್ಯ ಎಂದೇ ಘೋಷಿಸುತ್ತಿದ್ದಾರೆ. ಅಲ್ಲಿ ಜನವಸತಿ ಇತ್ತೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಗೋಜಿಗೂ ಹೋಗುತ್ತಿಲ್ಲ. ಜನರಿಗೆ ಗೊತ್ತಿಲ್ಲದಂತೆ ಪಹಣಿ ಪತ್ರಗಳಲ್ಲಿ ಅವರ ಜಾಗ ಅರಣ್ಯ ಭೂಮಿ ಎಂದು ನಮೂದಾಗುತ್ತಿದೆ. ಒಮ್ಮೆ ಅರಣ್ಯಭೂಮಿ ಎಂದು ಘೋಷಣೆಯಾದ ಮೇಲೆ ಆ ಜಾಗವನ್ನು ಯಾವುದೇ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ.
ಈ ಸಂಕಷ್ಟಗಳಿಗೆಲ್ಲ ಕಳಶವಿಟ್ಟಂತೆ ಬಗರ್‌ಹುಕಂ ಸಮಸ್ಯೆಯೂ ಈ ಜನರನ್ನು ಕಾಡುತ್ತಿದೆ. ಬಗರ್‌ಹುಕಂ ಅಂದರೆ 70-80 ವರ್ಷಗಳ ಹಿಂದೆ ಕಾಡಂಚಿನ ಭೂಮಿಯನ್ನು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವುದು. 1978ಕ್ಕಿಂತ ಪೂರ್ವದಲ್ಲಿ ಒತ್ತುವರಿಯಾದ ಭೂಮಿಯನ್ನು ಸಕ್ರಮಗೊಳಿಸಲು ಸರ್ಕಾರಿ ಆದೇಶವೇ ಇದೆ. ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡಗಳ ಜನರ ಬಗರ್‌ಹುಕಂ ಭೂಮಿಯನ್ನು ಸಕ್ರಮಗೊಳಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಬಗರ್‌ಹುಕಂ ಜಮೀನಿನ ಸಕ್ರಮಕ್ಕಾಗಿ ಮೂರು ದಶಕಗಳಿಂದ ಸಲ್ಲಿಸಿರುವ ಅರ್ಜಿಗಳು ಇನ್ನೂ ಇತ್ಯರ್ಥವಾಗದೇ ಕೊಳೆಯುತ್ತಿವೆ.
ಇಡೀ ರಾಜ್ಯದ ಎಲ್ಲ ತಾಲ್ಲೂಕುಗಳಿಂದ ಅರ್ಜಿ ಬಂದ ಮೇಲೆ ಅದನ್ನು ಸಂಪುಟ ಸಭೆ, ವಿಧಾನಸಭೆಯಲ್ಲಿ ಇಟ್ಟು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಸರ್ಕಾರ ಹೇಳುತ್ತಿದೆ. ಮಲೆನಾಡಿನ ಜನ ಮೂರು ತಲೆಮಾರಿನಿಂದ ಸಾಗುವಳಿ ಮಾಡುತ್ತಿರುವ ತಮ್ಮ ಜಮೀನು ಸಕ್ರಮಗೊಳಿಸಿಕೊಳ್ಳಲು ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸುತ್ತಾರೆ ಶಿವಮೊಗ್ಗ ಕಾಂಗ್ರೆಸ್ ಉಪಾಧ್ಯಕ್ಷ ತಿ. ನ. ಶ್ರೀನಿವಾಸ್.
ಇಲ್ಲಿ ಹೇಳಿರುವುದು ಕೇವಲ ಸಾಗರ ತಾಲ್ಲೂಕಿನ ಸಮಸ್ಯೆಯಲ್ಲ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸೊರಬ, ಶಿಕಾರಿಪುರ ತಾಲ್ಲೂಕುಗಳಲ್ಲೂ ಈ ಸಮಸ್ಯೆ ವ್ಯಾಪಕವಾಗಿದೆ. ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಬಗರಹುಕುಂ ಸಮಸ್ಯೆ ಮುಂದಿಟ್ಟುಕೊಂಡೇ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು. ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸಹ ಸೊರಬದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿದ್ದರು.
ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಈ ಬಾರಿ ಮಲೆನಾಡಿನ ಕೃಷಿಕರು, ಬಡವರ ಪರ ದನಿ ಎತ್ತಿದ್ದಾರೆ. ಕಂದಾಯ ಕಾಯ್ದೆಗೆ ತಂದಿರುವ ತಿದ್ದುಪಡಿ, ಇಂಡೀಕರಣ, ಬಗರ್‌ಹುಕುಂ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಪಕ್ಕದ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ ಸಹ ಈ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದಾರೆ.
ಹೆಗ್ಗೋಡು ಬಳಿ ಹೆಬ್ಬರಿಗೆ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ಕಾಗೋಡು ಅವರನ್ನು 'ಪ್ರಜಾವಾಣಿ' ಪ್ರತಿನಿಧಿ ಭೇಟಿಯಾದಾಗ, `ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇದಕ್ಕೆ ಹೊಸ ಆಯಾಮ ಬರುತ್ತದೆ. ಶಾಸಕನಾಗಿ ಆಯ್ಕೆಯಾದರೂ ಕಂದಾಯ ಕಾಯ್ದೆಯಲ್ಲಿ ಸೇರಿಸಿರುವ 192 ಎ ಉಪನಿಯಮ ರದ್ದುಗೊಳಿಸಲು ಹೋರಾಡುತ್ತೇನೆ' ಎಂದರು.
ಬೆಂಗಳೂರು, ಮೈಸೂರು ಸುತ್ತಲೂ ಭೂಗಳ್ಳರಿಗೆ ಕಡಿವಾಣ ಹಾಕಲು ತಂದ ಕಾಯ್ದೆಯನ್ನು ವಿವೇಚನೆಯಿಲ್ಲದೇ ಮಲೆನಾಡಿಗೂ ಅನ್ವಯಿಸಿದ್ದಾರೆ. ಬಡ ಕಷಿಕರನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ ಎಂಬುದು ಅವರ ನೋವು.
ತಿಮ್ಮಪ್ಪ ಅವರ ಎದುರಾಳಿ ಜೆಡಿಎಸ್ ಅಭ್ಯರ್ಥಿ ಬೇಳೂರು ಗೋಪಾಲಕಷ್ಣ. ಕಳೆದ ಚುನಾವಣೆಯಲ್ಲಿಯೂ ತಿಮ್ಮಪ್ಪ ಎದುರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಆ ಗೆಲುವಿನ ಅಂತರ 2845 ಮತಗಳು. ಬೇಳೂರು ಎಂದಿನಂತೆ ಅಬ್ಬರದ ಪ್ರಚಾರದ ಮೂಲಕ ಮತದಾರರನ್ನು ಆಕರ್ಷಿಸುವ ತಂತ್ರದಲ್ಲಿ ತೊಡಗಿದ್ದಾರೆ. ನಾ. ಡಿಸೋಜ, ಕೆ.ವಿ. ಅಕ್ಷರ ಸೇರಿದಂತೆ ಮಲೆನಾಡು ಭಾಗದ ಸಾಹಿತಿಗಳು, ಪ್ರಗತಿಪರರು ಸಜ್ಜನ ಕಾಗೋಡು ತಿಮ್ಮಪ್ಪ ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೀಗಾಗಿ ಕಾಗೋಡು ಅವರನ್ನು ಮಲೆನಾಡ ಜನ ಆಯ್ಕೆ ಮಾಡಲಿದ್ದಾರೆಯೆ ಅಥವಾ ಅವರದ್ದೇ ಸೋದರಳಿಯ ಯುವ ರಾಜಕಾರಣಿ ಬೇಳೂರು ಅವರನ್ನು ಮತ್ತೆ ವಿಧಾನಸೌಧಕ್ಕೆ ಕಳಿಸಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.