ADVERTISEMENT

ಮುಂದಿನ ಸರ್ಕಾರ ಇಂದು ನಿರ್ಧಾರ

ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೂ ಮತದಾನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 4 ಮೇ 2013, 19:59 IST
Last Updated 4 ಮೇ 2013, 19:59 IST

ಬೆಂಗಳೂರು: ರಾಜ್ಯ ರಾಜಕೀಯದ ಮುಂದಿನ ದಿಕ್ಕನ್ನು ನಿರ್ಧರಿಸಲಿರುವ ವಿಧಾನಸಭಾ ಚುನಾವಣೆ ಭಾನುವಾರ ನಡೆಯಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿನಲ್ಲಿರುವ ಘಟಾನುಘಟಿ ನಾಯಕರ ಭವಿಷ್ಯ ಕೂಡ  ಮತಯಂತ್ರದಲ್ಲಿ ದಾಖಲಾಗಲಿದೆ.

ಎಲ್ಲ (224) ವಿಧಾನಸಭಾ ಕ್ಷೇತ್ರಗಳಿಗೂ ಭಾನುವಾರವೇ ಚುನಾವಣೆ ನಡೆಯಬೇಕಿತ್ತು. ಆದರೆ, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡ ಅವರ ನಿಧನದಿಂದಾಗಿ ಆ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಇದರಿಂದಾಗಿ 223 ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ.

ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸನ್ನದ್ಧವಾಗಿದೆ. ಮತದಾನ ಸಂದರ್ಭದಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಯಲು ಕೇಂದ್ರ ಮೀಸಲು ಪಡೆಯ ತುಕಡಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಎಲೆಕ್ಟ್ರಾನಿಕ್ ಮತಯಂತ್ರಗಳು ಸೇರಿದಂತೆ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆ ಸಿಬ್ಬಂದಿ ಶನಿವಾರ ಸಂಜೆಯೇ ಮತಗಟ್ಟೆಗಳಿಗೆ ತಲುಪಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 6ರ ತನಕ ಮತದಾನ ನಡೆಯಲಿದೆ. ಈ ಬಾರಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿನ ಚಲನವಲನಗಳ ಬಗ್ಗೆ ನಿಗಾ ವಹಿಸಲು ಪ್ರಾಯೋಗಿಕವಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ 6-7 ಮತಗಟ್ಟೆಗಳಲ್ಲಿ ವೆಬ್‌ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದಾಗಿ ಅಲ್ಲಿನ ಪ್ರತಿಯೊಂದು ಚಟುವಟಿಕೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದಲೇ ವೀಕ್ಷಿಸಬಹುದು. ಅಲ್ಲದೆ ಎಲ್ಲ ಕಡೆ ವಿಡಿಯೊ ಚಿತ್ರೀಕರಣದ ವ್ಯವಸ್ಥೆ ಮಾಡಲಾಗಿದೆ.

ಒಟ್ಟು 2,940 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಐದು ರಾಷ್ಟ್ರೀಯ ಪಕ್ಷಗಳಿಂದ 643 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಾದೇಶಿಕ ಪಕ್ಷಗಳಿಂದ 599 ಮತ್ತು ಪಕ್ಷೇತರರಾಗಿ 1,222 ಮಂದಿ ಸ್ಪರ್ಧಿಸಿದ್ದಾರೆ. ಇತರ ಪಕ್ಷಗಳಿಂದ ಒಟ್ಟು 475 ಮಂದಿ ಸ್ಪರ್ಧೆಯಲ್ಲಿದ್ದಾರೆ. 2,770 ಪುರುಷರು ಮತ್ತು 170 ಮಹಿಳೆಯರು ಈ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಜಗದೀಶ ಶೆಟ್ಟರ್ (ಧಾರವಾಡ ಕೇಂದ್ರ), ಬಿ.ಎಸ್.ಯಡಿಯೂರಪ್ಪ (ಶಿಕಾರಿಪುರ), ಎಚ್.ಡಿ.ಕುಮಾರಸ್ವಾಮಿ (ರಾಮನಗರ), ಸಿದ್ದರಾಮಯ್ಯ (ವರುಣಾ-ಮೈಸೂರು), ಡಾ.ಜಿ.ಪರಮೇಶ್ವರ್ (ಕೊರಟಗೆರೆ), ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ ನಗರ), ಆರ್.ಅಶೋಕ (ಪದ್ಮನಾಭನಗರ- ಬೆಂಗಳೂರು), ಅಂಬರೀಶ್ (ಮಂಡ್ಯ), ಶೋಭಾ ಕರಂದ್ಲಾಜೆ (ರಾಜಾಜಿನಗರ), ಎಚ್.ಡಿ.ರೇವಣ್ಣ (ಹೊಳೆನರಸೀಪುರ), ಸಿ.ಎಂ.ಉದಾಸಿ (ಹಾನಗಲ್) ಸೇರಿದಂತೆ ಹಲವು ಘಟಾನುಘಟಿ ರಾಜಕಾರಣಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಡಾ.ಮನಮೋಹನ್ ಸಿಂಗ್, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ನಾಯಕರು, ಚಲನಚಿತ್ರ ನಟ-ನಟಿಯರು ರಾಜ್ಯದ ಹಲವೆಡೆ ಸಂಚರಿಸಿ ಮತದಾರರನ್ನು ತಮ್ಮತ್ತ ಸೆಳೆಯುವ ಕಸರತ್ತು ನಡೆಸಿದ್ದಾರೆ.

ಮತದಾರರು ಯಾರತ್ತ ಒಲಿಯಲಿದ್ದಾರೆ ಎಂಬುದು ಮತ ಎಣಿಕೆ ನಡೆಯಲಿರುವ ಬುಧವಾರ ಬಹಿರಂಗಗೊಳ್ಳಲಿದೆ.

4.35 ಕೋಟಿ ಮತದಾರರು: ಈ ಚುನಾವಣೆಯಲ್ಲಿ 4.35 ಕೋಟಿ ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಈ ಪೈಕಿ 2.22 ಕೋಟಿ ಪುರುಷ ಮತದಾರರಿದ್ದರೆ, 2.12 ಕೋಟಿ ಮಹಿಳಾ ಮತದಾರರಿದ್ದಾರೆ. 2,931 ಮಂದಿ ಲೈಂಗಿಕ ಅಲ್ಪಸಂಖ್ಯಾತರೂ ಈ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದಿದ್ದಾರೆ.

ಪ್ರತಿ ಸಾವಿರ ಪುರುಷ ಮತದಾರರಿಗೆ 957 ಮಹಿಳಾ ಮತದಾರರಿದ್ದಾರೆ. 18ರಿಂದ 22 ವರ್ಷ ವಯಸ್ಸಿನ 35.58 ಲಕ್ಷ ಮತದಾರರು ಈ ಬಾರಿ ಹಕ್ಕು ಚಲಾಯಿಸುವ ಅವಕಾಶ ಹೊಂದಿದ್ದಾರೆ. 37,190 ಸೇವಾ ಮತದಾರರಿದ್ದು, ಅವರಿಗೆ 12 ದಿನಗಳ ಹಿಂದೆ ಅಂಚೆ ಮತಪತ್ರಗಳನ್ನು ವಿತರಿಸಲಾಗಿದೆ.

51 ಸಾವಿರ ಮತಗಟ್ಟೆ: ಮತದಾನಕ್ಕಾಗಿ ಒಟ್ಟು 51,829 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 12,753 ಸೂಕ್ಷ್ಮ ಮತಗಟ್ಟೆಗಳು ಮತ್ತು 10,762 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿರುವ ಆಯೋಗ, ಅಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಿದೆ. ಮತದಾನದ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ.

ವಿಧಾನಸಭಾ ಚುನಾವಣೆಗೆ 57,012 ವಿದ್ಯುನ್ಮಾನ ಮತಯಂತ್ರಗಳನ್ನು ಆಯೋಗ ಸಿದ್ಧಪಡಿಸಿಕೊಂಡಿದೆ. ಈ ಪೈಕಿ ಶೇಕಡ 10ರಷ್ಟು ಮತಯಂತ್ರಗಳನ್ನು ತುರ್ತು ಬಳಕೆಗಾಗಿ ಮೀಸಲಿಡಲಾಗುತ್ತದೆ. ಒಟ್ಟು 63,764 ಮತಪತ್ರ ಘಟಕಗಳನ್ನು (ಬ್ಯಾಲೆಟ್ ಯೂನಿಟ್) ಸಜ್ಜುಗೊಳಿಸಲಾಗಿದೆ.

ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆ 16 ಮೀರದಿದ್ದರೆ ಒಂದೇ `ಬ್ಯಾಲೆಟ್ ಯೂನಿಟ್' ಬಳಸಲಾಗುತ್ತದೆ. ಅಭ್ಯರ್ಥಿಗಳ ಸಂಖ್ಯೆ 16ಕ್ಕಿಂತ ಹೆಚ್ಚಿದ್ದರೆ, ಎರಡು `ಬ್ಯಾಲೆಟ್ ಯೂನಿಟ್'ಗಳನ್ನು ಬಳಸಲಾಗುತ್ತದೆ. ಈ ಬಾರಿ 33 ವಿಧಾನಸಭಾ ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಒಟ್ಟು 3,11,142 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 2.53 ಲಕ್ಷ ಮಂದಿ ಚುನಾವಣಾ ಸಿಬ್ಬಂದಿ ಇದ್ದಾರೆ. 48,182 ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನೇಮಿಸಲಾಗಿದೆ. ಮತಯಂತ್ರಗಳು, ಮತಗಟ್ಟೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಸಾಗಿಸಲು 9,957 ಚಾಲಕರು ಮತ್ತು ನಿರ್ವಾಹಕರನ್ನು ನಿಯೋಜಿಸಲಾಗಿದೆ.

ಬುಧವಾರ ಎಣಿಕೆ: ಕಳೆದ ಚುನಾವಣೆಯಲ್ಲಿ ಮೂರು ಹಂತದಲ್ಲಿ ಮತದಾನ ನಡೆದಿತ್ತು. 2008ರ ಮೇ 10, ಮೇ 16 ಮತ್ತು ಮೇ 22ರಂದು ಮತದಾನ ನಡೆದಿತ್ತು. ಮೇ 25ರಂದು ಮತ ಎಣಿಕೆ ನಡೆದಿತ್ತು. ಮೊದಲ ಹಂತದ ಮತದಾನ ನಡೆದಿದ್ದ ಕ್ಷೇತ್ರಗಳ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ 15 ದಿನಗಳ ಕಾಲ ಕಾದಿದ್ದರು. ಆದರೆ, ಈ ಚುನಾವಣೆಯಲ್ಲಿ ಮತದಾನ ಮತ್ತು ಎಣಿಕೆಯ ನಡುವೆ ಎರಡೇ ದಿನಗಳ ಅಂತರವಿದೆ. ಭಾನುವಾರ ಮತದಾನ ನಡೆದು, ಬುಧವಾರವೇ  (ಮೇ 8) ಫಲಿತಾಂಶ ಹೊರಬೀಳಲಿದೆ.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬುಧವಾರ ಏಕಕಾಲಕ್ಕೆ ಮತ ಎಣಿಕೆ ಆರಂಭವಾಗುತ್ತದೆ. ಮತ ಎಣಿಕೆಗಾಗಿ 35 ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಬೆಂಗಳೂರಿನಲ್ಲಿ ನಾಲ್ಕು, ರಾಯಚೂರು ಮತ್ತು ಮೈಸೂರಿನಲ್ಲಿ ತಲಾ ಎರಡು ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ತಲಾ ಒಂದು ಎಣಿಕೆ ಕೇಂದ್ರಗಳಿರುತ್ತವೆ.

ಮತಗಟ್ಟೆ ಸಮೀಕ್ಷೆ ನಿಷೇಧ
ಭಾನುವಾರ ಬೆಳಿಗ್ಗೆ 7ರಿಂದ ಸಂಜೆ 6.30ರವರೆಗೂ ಮತಗಟ್ಟೆ ಸಮೀಕ್ಷೆಗೆ ನಿರ್ಬಂಧ ವಿಧಿಸಲಾಗಿದೆ. ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಚರ್ಚೆಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಡೆಸಲು ಅವಕಾಶ ಇಲ್ಲ. ಪಕ್ಷದ ಹೆಸರು ಪ್ರಸ್ತಾಪಿಸಿ ಮುನ್ನಡೆಯಲ್ಲಿದೆ ಎಂದು ಹೇಳುವುದು ಸಹ ತಪ್ಪು. ಕಾನೂನು ಪ್ರಕಾರ ಅಪರಾಧ.
- ಅನಿಲ್‌ಕುಮಾರ್ ಝಾ,
ಮುಖ್ಯಚುನಾವಣಾಧಿಕಾರಿ

ಅವಧಿ ಹೆಚ್ಚಳ: ಮತದಾನಕ್ಕೆ 11 ತಾಸು
ಈ ಬಾರಿ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿಂದೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತಿತ್ತು. ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಈ ಅವಧಿಯನ್ನು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಿಗದಿ ಮಾಡಲಾಗಿತ್ತು. ಇದರಿಂದ ಒಂದು ಗಂಟೆ ಅವಧಿ ಕಡಿತವಾಗಿತ್ತು. ಆದರೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಬೇಡಿಕೆಯಂತೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಿ ಕೇಂದ್ರ ಚುನಾವಣಾ ಆಯೋಗ ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿತ್ತು.

ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚುತ್ತಿರುವುದರಿಂದ ವೃದ್ಧರು ಮತ್ತು ರೋಗಿಗಳು ಮತದಾನಕ್ಕೆ ಬರುವುದು ಸಾಧ್ಯವಾಗದೇ ಇರುವುದನ್ನು ಮನಗಂಡ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಅವರು, ಮತದಾನದ ಅವಧಿಯನ್ನು ಇನ್ನೂ ಒಂದು ಗಂಟೆ ವಿಸ್ತರಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದರು. ಶನಿವಾರ ಈ ಸಂಬಂಧ ಆದೇಶ ಹೊರಡಿಸಿರುವ ಆಯೋಗ, ಮತದಾನದ ಅವಧಿಯನ್ನು ಸಂಜೆ 6 ಗಂಟೆಯವರೆಗೂ ವಿಸ್ತರಿಸಿದೆ.

ADVERTISEMENT

ಕಿಯಾಸ್ಕ್‌ಗಳ ಸ್ಥಾಪನೆ
ಪ್ರತಿಯೊಂದು ಮತಗಟ್ಟೆಯ ಹೊರಗೆ ಆಯೋಗವು ಕಿಯಾಸ್ಕ್‌ಗಳನ್ನು ಸ್ಥಾಪಿಸಲಿದೆ. `ವೋಟರ್ಸ್‌ ಸ್ಲಿಪ್' ಮನೆಗೆ ತಲುಪದೆ ಇದ್ದರೆ ಕಿಯಾಸ್ಕ್ ಮೂಲಕ ಮತಗಟ್ಟೆ ಬಳಿಯೇ ಪಡೆದುಕೊಳ್ಳಬಹುದು.

ಗುರುತಿನ ಚೀಟಿ ಇಲ್ಲದೆ ಇದ್ದರೆ `ವೋಟರ್ಸ್‌ ಸ್ಲಿಪ್' ಅನ್ನೇ ಬಳಸಬಹುದು. ಇದಲ್ಲದೆ ಆಯೋಗ ಗುರುತಿಸಿರುವ ಭಾವಚಿತ್ರವುಳ್ಳ 23 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ತೋರಿಸಿ ಮತ ಚಲಾಯಿಸಬಹುದು ಎಂದು ಅನಿಲ್‌ಕುಮಾರ್ ಝಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.