ಉಡುಪಿ: `ನೆಹರು ಹಾಗಿರ‌್ಬೇಕಿತ್ತು, ಇಂದಿರಾ ಗಾಂಧಿ ಹೀಗಿರ್ಬೇಕಿತ್ತು, ರಾಹುಲ್ ಗಾಂಧಿ ಸರಿಯಿಲ್ಲ, ಸೋನಿಯಾ ಗಾಂಧಿ ನಮ್ಮವ್ರಲ್ಲ ಅಂತೆಲ್ಲ ಬೊಬ್ಬೆ ಹೊಡ್ಯೋ ಈ ಬಿಜೆಪಿ ಮಂದಿಗೆ, ತಮ್ಮ ಯಡಿಯೂರಪ್ಪ ಹೇಗಿದ್ದ ಅನ್ನೋದು ಮಾತ್ರ ಗೊತ್ತೇ ಆಗ್ಲಿಲ್ವಲ್ಲ ಯಾಕೆ' ಎಂದು ಆಕ್ರೋಶದಿಂದ ಕೇಳುತ್ತಾರೆ ಉಡುಪಿಯ ವ್ಯಾಪಾರಿ ಯಶವಂತ್.
`ಒಟ್ನಲ್ಲಿ ಬಟ್ಟೆ ಕಳಚಿದ್ರೆ ಎಲ್ರೂ ಬೆತ್ತಲೆಯೇ ಎಂಬ ಸತ್ಯ ಮಾತ್ರ ಈಗ ಪ್ರತಿಯೊಬ್ರಿಗೂ ಅರ್ಥವಾಗ್ತಾ ಇದೆ ನೋಡಿ' ಎಂದು ವ್ಯಂಗ್ಯವಾಡುತ್ತಾರೆ ಕುಂದಾಪುರದ ದಿನೇಶ್.ಹಿಂದೆ ಬಿಜೆಪಿಯ ಅಭಿಮಾನಿಗಳಾಗಿದ್ದ ಇವರ ಈ ಮಾತುಗಳು, ಈಗ ಜಿಲ್ಲೆಯಲ್ಲಿ ಕೇಳಿಬರುತ್ತಿರುವ ಬಿಜೆಪಿ ವಿರೋಧಿ ಅಲೆಗೆ ಕನ್ನಡಿ ಹಿಡಿಯುತ್ತವೆ.
ಈ `ಸುಶಿಕ್ಷಿತರ ಜಿಲ್ಲೆ'ಯಲ್ಲಿ ಸ್ಥಳೀಯ ಸಂಗತಿಗಳಿಗಿಂತ, ರಾಜ್ಯವನ್ನು ಮುನ್ನಡೆಸುವವರ ಆಗುಹೋಗು, ರೀತಿ ನೀತಿಗಳಿಗೇ ಅತಿ ಹೆಚ್ಚಿನ ಆದ್ಯತೆ. ಐದು ವರ್ಷ ಪೂರ್ಣ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರ ಅವಾಂತರಗಳು, ಲೈಂಗಿಕ ಹಗರಣಗಳು, ಅಧಿಕಾರಕ್ಕಾಗಿ ಹೀನಾಯವಾಗಿ ಕಚ್ಚಾಡಿಕೊಂಡ ರೀತಿ ಇಲ್ಲಿನ ಜನರ ಮೇಲೆ ಭಾರಿ ಪರಿಣಾಮ ಬೀರಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟು ಹಿಂದೆಲ್ಲ ಸ್ವಯಂಪ್ರೇರಿತರಾಗಿ ಮತ ಹಾಕುತ್ತಿದ್ದವರಿಗೆ, ಅಧಿಕಾರಾವಧಿಯ ಉದ್ದಕ್ಕೂ ಕಂಡುಬಂದ ಪಕ್ಷದ ನಾಯಕರ ನಡವಳಿಕೆ ಹೇವರಿಕೆ ತರಿಸಿದೆ. `ಅವರೆಲ್ಲ ಈ ಮಟ್ಟಕ್ಕೆ ಇಳಿಯಬಹುದು ಎಂದು ಕನಸು ಮನಸಲ್ಲೂ ನಾವು ಎಣಿಸಿರಲಿಲ್ಲ' ಎಂಬಂತಹ ಮಾತುಗಳು ಎಲ್ಲ ವರ್ಗದ ಜನರ ಬಾಯಲ್ಲೂ ಕೇಳಿಬರುತ್ತವೆ.
ಅದಕ್ಕೆ ಪುರಾವೆ ಎಂಬಂತೆ, ಜನರ ಈ ಅಸಹನೆ ಈಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪಷ್ಟವಾಗೇ ವ್ಯಕ್ತವಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಉಡುಪಿ ನಗರಸಭೆ ಕಾಂಗ್ರೆಸ್ ಪಾಲಾಗಿದ್ದು ಬಿಜೆಪಿಗಿಂತಲೂ ಹೆಚ್ಚಾಗಿ, ಸಂಘ ಪರಿವಾರಕ್ಕೆ ಭಾರಿ ಆಘಾತ ತಂದಿದೆ. ರಾಜ್ಯದ ತನ್ನ ಪ್ರಮುಖ ನೆಲೆಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಪರಿವಾರ ಅಂತಹದ್ದೊಂದು ಹಿನ್ನಡೆ ಅನುಭವಿಸಿದೆ.
ರಾಜ್ಯ ಸರ್ಕಾರದ ದುರಾಡಳಿತದ ಫಲಿತಾಂಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಣ್ಣಿಗೆ ರಾಚಿದರೂ, ಅದಕ್ಕೂ ಸಾಕಷ್ಟು ಹಿಂದಿನಿಂದಲೇ ಹಲವಾರು ಅಂಶಗಳು ಇಲ್ಲಿನ ಜನರ ಮೇಲೆ ಪರಿಣಾಮ ಬೀರುತ್ತಾ ಬಂದಿವೆ. ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸಿನಿಂದಲೇ ಜನರ ಗೌರವಾದರ ಗಳಿಸಿದ್ದವರು ದಿವಂಗತ ಸಚಿವ ವಿ.ಎಸ್.ಆಚಾರ್ಯ. ಅವರ ಅಕಾಲಿಕ ಸಾವು ಸಹ ಬಿಜೆಪಿಗೆ ದೊಡ್ಡ ಪೆಟ್ಟು. ಇದರಿಂದ `ಕ್ಲೀನ್ ಇಮೇಜ್' ಉಳ್ಳ ಪ್ರಮುಖ ನಾಯಕರ ಕೊರತೆ ಜಿಲ್ಲೆಯನ್ನು ಕಾಡುತ್ತಿದೆ. ಎದ್ದು ಕಾಣುವಂತಹ ಎರಡನೇ ಹಂತದ ಜನಪ್ರಿಯ ನಾಯಕರ ಸಂಖ್ಯೆ ಸಹ ಹೆಚ್ಚಾಗಿಲ್ಲ.
ಕಡೇ ಗಳಿಗೆಯಲ್ಲಿ ಲೈಂಗಿಕ ಸಿ.ಡಿ. ಹಗರಣದಲ್ಲಿ ಸಿಲುಕಿದ ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸಿ, ಪಕ್ಷದ ಇಮೇಜ್ ಕಾಯ್ದುಕೊಳ್ಳಲು ಬಿಜೆಪಿ ಯತ್ನಿಸಿದೆ. ಆದರೂ ಭಟ್ಟರ ರೇವ್ ಪಾರ್ಟಿ ಹಗರಣ, ಪತ್ನಿ ಪದ್ಮಪ್ರಿಯ ಅವರ ವಿವಾದಾತ್ಮಕ ಸಾವು ಯಾವುದನ್ನೂ ವಿದ್ಯಾವಂತ ವರ್ಗ ಮರೆತಿಲ್ಲ. `ಆಕೆ ಭಾರಿ ಒಳ್ಳೆ ಹೆಂಗಸು. ಅಂತಾ ಹೆಂಗಸಿಗೆ ಬಂದ ಗತಿಯನ್ನು ಇಷ್ಟು ಬೇಗ ಮರೀಲಿಕ್ಕೆ ಆಗ್ತದಾ' ಎನ್ನುವ ಜಯಶ್ರೀ, ವನಜಾ, ರೇವತಿ ಅಂತಹವರು, ಪದ್ಮಪ್ರಿಯ ಅವರ ದುರ್ಗತಿಯ ಬಗ್ಗೆ ಮಹಿಳೆಯರಲ್ಲಿ ಹುದುಗಿರುವ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತಾರೆ. `ಹಿಂದೂ ಸಂಸ್ಕೃತಿ ಅಂತ ಹೇಳಿಕೊಂಡು ವಿದೇಶಿಯರನ್ನು ಒಟ್ಟು ಮಾಡಿ ರೇವ್ ಪಾರ್ಟಿ ಮಾಡಿದ್ರೆ ಹೇಗೆ ಒಪ್ಪಲಿಕ್ಕಾಗ್ತದೆ. ಹಿಂದೆ ಮನೆಯವರೆಲ್ಲ ಒಂದೇ ಪಕ್ಷಕ್ಕೆ ವೋಟ್ ಹಾಕ್ತಿದ್ದರು. ಆದರೆ ಈಗ ಗಂಡ ಹಾಕಿದ ಪಕ್ಷಕ್ಕೇ ಹೆಂಡತಿ ಹಾಕುತ್ತಾಳೆ ಎಂಬ ಗ್ಯಾರಂಟಿ ಇಲ್ಲ' ಎನ್ನುತ್ತಾರೆ ಬ್ಯಾಂಕೊಂದರ ವ್ಯವಸ್ಥಾಪಕರು.
ಕಳೆದ 50 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯ ಕೇವಲ 5 ವರ್ಷಗಳಲ್ಲಿ ಆಗಿರುವ ಬಗ್ಗೆ ಬಹುತೇಕರಿಗೆ ಸಮಾಧಾನವೂ ಇದೆ. ಬಹಳ ಕಿರಿದಾಗಿದ್ದ ಉಡುಪಿ- ಮಣಿಪಾಲದ 7 ಕಿ.ಮೀ ರಸ್ತೆ ಈಗ ವಿಶಾಲವಾಗಿದೆ. ಸ್ವರ್ಣಾ ನದಿಯ 2ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದಿದೆ. ಸರ್ಕಾರಿ ಕಚೇರಿಗಳ ಸುಂದರ ಸಂಕೀರ್ಣ `ರಜತಾದ್ರಿ' ಎದ್ದು ನಿಂತಿದೆ. 2 ವರ್ಷಕ್ಕೊಮ್ಮೆ ಪರ್ಯಾಯದ ಸಂದರ್ಭದಲ್ಲಿ ಮಾತ್ರ ತೇಪೆ ಹಚ್ಚಿಸಿಕೊಳ್ಳುತ್ತಿದ್ದ ಜಿಲ್ಲಾ ಕೇಂದ್ರದ ಎಲ್ಲ ರಸ್ತೆಗಳೂ ಈಗ ನಳನಳಿಸುತ್ತಿವೆ. ಆದರೂ, ರಾಜ್ಯ ಮಟ್ಟದ ಬೆಳವಣಿಗೆಗಳಿಂದ ಒಡೆದುಹೋಗಿರುವ ಜನರ ಮನಸ್ಸನ್ನು ಒಗ್ಗೂಡಿಸಲು ಬಿಜೆಪಿ ಸಾಕಷ್ಟು ನೀರು ಕುಡಿಯುತ್ತಿದೆ.
`ಉಡುಪಿ- ಮಣಿಪಾಲ ರಸ್ತೆ ಅಭಿವೃದ್ಧಿಯೇನೋ ಆಯ್ತು. ಆದ್ರೆ ಅಲ್ಲಿ ಎರಡು ದಿನಕ್ಕೆ ಒಬ್ಬೊಬ್ರು ಅಪಘಾತದಲ್ಲಿ ಪ್ರಾಣ ಕಳ್ಕೊಳ್ತಿದಾರಲ್ಲ ಅದಕ್ಕೆ ಏನ್ ಹೇಳ್ತೀರಿ? ಹಾಗಂತ ಅಭಿವೃದ್ಧಿ ಬೇಡ ಅಂತ ನಾನು ಹೇಳ್ತಿಲ್ಲ. ಆದ್ರೆ ಅಭಿವೃದ್ಧಿಯ ಮಾತೆತ್ತಿದ್ರೆ ಸಾಕು, ಬರೀ ರಸ್ತೆಯನ್ನೇ ತೋರ‌್ಸೋದು ಈ ಜನ. ರಸ್ತೆ ಅಭಿವೃದ್ಧಿ ಮಾಡೋದಂದ್ರೆ ಎಲ್ಲ ರಾಜಕಾರಣಿಗಳಿಗೂ ಭಾರೀ ಇಷ್ಟ. ಅದಕ್ಕೆ ದೀಪ ಹಾಕಿಸಲು, ಮಧ್ಯದಲ್ಲಿ ಹುಲ್ಲು ಬೆಳೆಸಲು ಎಲ್ಲಕ್ಕೂ ಪ್ರತ್ಯೇಕ ಟೆಂಡರ್ ಕರ‌್ದು ದುಡ್ಡು ಮಾಡ್‌ಬಹ್ದು ನೋಡಿ ಅದಕ್ಕೇ' ಎಂದು ಪರೋಕ್ಷವಾಗಿ ತಮ್ಮ ಅಸಹನೆಯನ್ನು ಹೊರಹಾಕುತ್ತಾರೆ ಜಯಂತ್.
`ಹೌದು ಇಲ್ಲಿನವರೆಲ್ಲ ಹೆಚ್ಚು ಅಕ್ಷರಸ್ಥರು, ವಿಚಾರವಂತರು. ರಾಜ್ಯ, ರಾಷ್ಟ್ರದ ಎಲ್ಲ ವಿಚಾರಗಳನ್ನೂ ಅವರು ಗಮನಿಸುತ್ತಾರೆ. ಯುಪಿಎ ಎರಡನೇ ಅವಧಿಯ ಸರ್ಕಾರದ ಹಗರಣಗಳನ್ನೂ ಅವರು ಕಂಡಿದ್ದಾರೆ. ರಾಜ್ಯದಲ್ಲಿ ಹಗರಣ ಮಾಡಿದವರೆಲ್ಲ ಈಗ ಬಿಜೆಪಿಯಲ್ಲಿ ಇಲ್ಲ, ಕೆಜೆಪಿ ಸೇರಿದ್ದಾರೆ ಎಂಬುದು ಸಹ ಅವರಿಗೆ ತಿಳಿದಿದೆ' ಎಂದು ಸಮರ್ಥಿಸಿಕೊಳ್ಳುತ್ತಾರೆ ಹಿರಿಯ ಬಿಜೆಪಿ ಮುಖಂಡ ಎಂ.ಕೆ.ವಿಜಯ ಕುಮಾರ್.
ಈವರೆಗೆ ಕಣ್ಣುಮುಚ್ಚಿ ತನ್ನ ನಿರ್ದೇಶನಗಳನ್ನು ಪಾಲಿಸುತ್ತಿದ್ದ ಬಿಜೆಪಿ ನಾಯಕರು, ಅಧಿಕಾರದ ರುಚಿ ಕಾಣುತ್ತಿದ್ದಂತೆಯೇ ತನ್ನ ಲಕ್ಷ್ಮಣ ರೇಖೆ ದಾಟುವ ಧೈರ್ಯ ತೋರುತ್ತಿರುವುದು ಸಂಘ ಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಸಚಿವ ಸ್ಥಾನದ ಆಸೆ ಹುಟ್ಟಿಸಿ ಕಡೇ ಗಳಿಗೆಯಲ್ಲಿ ಕೈಕೊಟ್ಟ ನಾಯಕರಿಗೆ ಸೆಡ್ಡು ಹೊಡೆದು, ಕುಂದಾಪುರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಜನಪ್ರಿಯ ಹಾಲಾಡಿ ಶ್ರೀನಿವಾಸ ಶೆಟ್ಟರಂತಹ `ಮಗ್ಗುಲ ಮುಳ್ಳು'ಗಳನ್ನು ಅರಗಿಸಿಕೊಳ್ಳುವುದೂ ಅದಕ್ಕೆ ಕಷ್ಟವಾಗಿದೆ. ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಪ್ರಚಾರ ಕಾರ್ಯದವರೆಗೂ ಬಿಜೆಪಿಯ ಪ್ರತಿ ನಡೆಯನ್ನೂ ನಿರ್ದೇಶಿಸುವ ಪರಿವಾರವನ್ನು ಇಂತಹ ಬೆಳವಣಿಗೆಗಳು ಕಂಗೆಡಿಸಿವೆ.
`ಮಕ್ಕಳು ದಾರಿ ತಪ್ಪುವುದು ಸಹಜ. ಆದರೆ ತಂದೆ ತಾಯಿ ತಿದ್ದಿ ಬುದ್ಧಿ ಹೇಳುವುದಿಲ್ಲವೇ? ಹಾಗೇ ಇದೂ. ಬರಬರುತ್ತಾ ಎಲ್ಲ ಸರಿ ಹೋಗುತ್ತದೆ' ಎಂದು ಮೇಲ್ನೋಟಕ್ಕೆ ಸಮರ್ಥಿಸಿಕೊಳ್ಳುತ್ತದೆ, ನಗರಸಭೆ ಚುನಾವಣಾ ಫಲಿತಾಂಶದಿಂದ ನೈತಿಕವಾಗಿ ಕುಸಿದುಹೋಗಿರುವ ಪರಿವಾರದ ಆಂತರಿಕ ವಲಯ. ಬಿಜೆಪಿಯ ಸೋಲು- ಗೆಲುವು ತನ್ನ ಪ್ರತಿಷ್ಠೆಯ ಪ್ರಶ್ನೆಯಾದ್ದರಿಂದ `ಮಾಡು ಇಲ್ಲವೇ ಮಡಿ' ಎಂಬಷ್ಟು ಗಂಭೀರವಾಗಿ ಜನರಲ್ಲಿ ತನ್ನ ಪರ ಪುನರ್ ಸಂಚಲನ ಮೂಡಿಸುವತ್ತ ಪರಿವಾರ ಕಾರ್ಯೋನ್ಮುಖವಾಗಿದೆ.
ತನ್ನ ಬಗ್ಗೆ ಏನೇ ಅಸಹನೆ ಇದ್ದರೂ ಸಾಂಪ್ರದಾಯಿಕ ಮತದಾರರು ಇತರ ಪಕ್ಷಗಳತ್ತ ಮುಖ ಮಾಡುವುದಿಲ್ಲ ಎಂಬ ಗ್ಯಾರಂಟಿಯೇನೋ ಬಿಜೆಪಿಗಿದೆ. ಆದರೆ ಅವರು ಮತ ಚಲಾವಣೆಯನ್ನೇ ಮಾಡದೆ ತಟಸ್ಥರಾಗಿ ಉಳಿದುಬಿಟ್ಟರೆ ಎಂಬ ಆತಂಕವೂ ಅದನ್ನು ಕಾಡುತ್ತಿದೆ. ಹೀಗಾಗಿ, ಹೇಗಾದರೂ ಮಾಡಿ ಮತಗಟ್ಟೆಗೆ ಅವರು ಬರುವಂತೆ ಮನವೊಲಿಸುವ ಕಾರ್ಯ ಭರದಿಂದ ಸಾಗಿದೆ. ದೂರದೂರುಗಳಲ್ಲಿ ನೆಲೆಸಿರುವ ಸ್ಥಳೀಯರನ್ನು ಕರೆತಂದು ವೋಟು ಹಾಕಿಸುವುದನ್ನೂ ಪಕ್ಷ ಮಹತ್ವದ ಕಾರ್ಯವೆಂದೇ ಪರಿಗಣಿಸಿದೆ.
ಇಂತಹ ಬೆಳವಣಿಗೆಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆ ಪ್ರಬಲವಾಗಿ ಬೀಸುತ್ತಿದೆ ಎಂದು ಸಹ ಹೇಳಲಾಗದು. ಈ ಸತ್ಯ ಗೊತ್ತಿರುವ ಕಾಂಗ್ರೆಸ್ ಕೂಡ ಜನಬೆಂಬಲಕ್ಕಾಗಿ ಸಾಕಷ್ಟು ಹೆಣಗಾಡುತ್ತಿದೆ.
`ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಭಾಗದಲ್ಲಿ ಜನರಿಗೆ ಅದರ ಬಗ್ಗೆ ಮೂಡಿರುವ ಅಸಹನೆಯನ್ನು ಇಲ್ಲಿ ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ, ರಾಜ್ಯದಲ್ಲಿ ಅದು ಅಧಿಕಾರ ಹಿಡಿಯುವುದು ಅವಲಂಬಿಸಿದೆ. ಕುಂದಾಪುರ, ಕಾಪು, ಕಾರ್ಕಳದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಗೆದ್ದರೆ ಮಾತ್ರ ನೈತಿಕವಾಗಿ ಕಾಂಗ್ರೆಸ್‌ಗೆ ಜಯ ಸಿಕ್ಕಂತೆ' ಎನ್ನುತ್ತಾರೆ ಫಣಿರಾಜ್.
`ಪ್ರಮುಖ ಸಂಗತಿಗಳಲ್ಲಿ ರಾಜಕೀಯ ಇಚ್ಛಾಶಕ್ತಿ ತೋರದ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಪರ್ಯಾಯ ಏನಲ್ಲ. ಜನರಿಗೆ ಅದು ಅನಿವಾರ್ಯ ಆಯ್ಕೆ ಆಗಬಹುದೇ ಹೊರತು ಮನಃಪೂರ್ವಕವಾಗಿಯೇನೂ ಅದನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ವಿಶ್ಲೇಷಿಸುತ್ತಾರೆ ಜಯರಾಜ್, ಆಲ್ಬರ್ಟ್ ಡಿಸೋಜಾ ಮುಂತಾದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.