ADVERTISEMENT

ಚಿತ್ರದುರ್ಗ | ಮತದಾನ ಪ್ರಮಾಣ ಹೆಚ್ಚಳಕ್ಕೆ ‘ಫ್ಲೆಕ್ಸ್‌’ ಮೊರೆ

ಚುನಾವಣೆಗೆ ಮೆರುಗು ತಂದ ‘ಸ್ವೀಪ್‌’ ತಂತ್ರ– ನಿರಂತರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 7:00 IST
Last Updated 14 ಏಪ್ರಿಲ್ 2023, 7:00 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹಾಕಿರುವ ಮತದಾನ ಜಾಗೃತಿ ಫ್ಲೆಕ್ಸ್‌.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹಾಕಿರುವ ಮತದಾನ ಜಾಗೃತಿ ಫ್ಲೆಕ್ಸ್‌.   

ಚಿತ್ರದುರ್ಗ: ಜನ್ಮ ದಿನೋತ್ಸವ, ಮದುವೆ ಮತ್ತಿತರ ಸಮಾರಂಭಕ್ಕೆ ಶುಭ ಹಾರೈಕೆ, ಅಭಿನಂದನೆ ಸಲ್ಲಿಸುವ, ಗ್ರಾಹಕರನ್ನು ಆಕರ್ಷಿಸುವ ವಿವಿಧ ಕಂಪನಿಗಳ ಉತ್ಪನ್ನಗಳ ಫ್ಲೆಕ್ಸ್‌ ಬ್ಯಾನರ್‌ಗಳಿಂದ ತುಂಬಿತುಳುಕುತ್ತಿದ್ದ ನಗರ ಹಾಗೂ ಜಿಲ್ಲೆಯ ಬಹುತೇಕ ಪ್ರಮುಖ ಪಟ್ಟಣಗಳ ಪ್ರಮುಖ ವೃತ್ತಗಳು ಸಾರ್ವಜನಿಕ ಸ್ಥಳಗಳಲ್ಲಿ ಅಚ್ಚರಿ ಎಂಬಂತೆ ವಿಭಿನ್ನ ಮಾದರಿಯ ಫ್ಲೆಕ್ಸ್‌ಗಳು ಜನರ ಗಮನ ಸೆಳೆಯುತ್ತಿವೆ.

‘ಸದೃಢ ಪ್ರಜಾಪ್ರಭುತ್ವದಲ್ಲಿ ನಾನೂ ಭಾಗಿ’, ‘ಮತ ಚಲಾಯಿಸೋಣ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸೋಣ ದೇಶವನ್ನು ಅಭಿವೃದ್ಧಿಯತ್ತ ಸಾಗಿಸೋಣ’, ‘ನನ್ನ ಮತ ನನ್ನ ಹಕ್ಕು’, ‘ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ, ಮತದಾನ ದೇಶವನ್ನು ರೂಪಿಸುತ್ತದೆ’ ಹೀಗೆ ವಿವಿಧ ರೀತಿಯ ಆಕರ್ಷಕ ಬರಹ ಇರುವ ಫ್ಲೆಕ್ಸ್‌ಗಳು ನಗರದ ವಿವಿಧೆಡೆ ರಾರಾಜಿಸುತ್ತಿವೆ.

ಅಲ್ಲದೇ, ಮತ ನೀಡುವುವಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಮಿಷಕ್ಕೆ ಒಳಗಾಗಿ ಮೋಸ ಹೋಗದಂತೆ ಮತದಾರರಿಗೆ ಈ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.

ADVERTISEMENT

ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸಿದ ಕ್ಷಣದಿಂದ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‌ ಸಮಿತಿಯು ಮತದಾನ ಜಾಗೃತಿ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದೆ. ಅದರಲ್ಲೂ ಶೇ 72ಕ್ಕಿಂತ ಕಡಿಮೆ ಮತದಾನವಾದ ಮತಗಟ್ಟೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಕಾಳಜಿವಹಿಸಿ ಮತದಾರರಿಗೆ ಮತದಾನದ ಮಹತ್ವ ತಿಳಿಸುವ ಕಾರ್ಯಕ್ಕೆ ಮುಂದಾಗಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 223 ಮತಗಟ್ಟೆಗಳಲ್ಲಿ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿ 26 ಹಾಗೂ ನಗರ ವ್ಯಾಪ್ತಿಯಲ್ಲಿ 197 ಎಂಬುದು ಅಚ್ಚರಿಗೆ ಕಾರಣವಾಗಿದೆ. ಈ ಅಂಕಿ ಸಂಖ್ಯೆ ಗಮನಿಸಿದ ಜಿಲ್ಲಾ ಸ್ಪೀಪ್‌ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌.ದಿವಾಕರ ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡಬೇಕೆಂದು ಸರಣಿ ಕಾರ್ಯಕ್ರಮ ರೂಪಿಸಿದ್ದಾರೆ.

ಯುವ ಮತದಾರರನ್ನು ಆಕರ್ಷಿಸಲು ಚಿತ್ರದುರ್ಗ ನಗರದಲ್ಲೇ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ‘ಸದೃಢ ಪ್ರಜಾಪ್ರಭುತ್ವದಲ್ಲಿ ನಾನೂ ಭಾಗಿ’ ಎಂಬ ಫ್ಲೆಕ್ಸ್‌ಗಳನ್ನು ಆಳವಡಿಸಲಾಗಿದೆ. ಉಳಿದಂತೆ ಪ್ರತಿ ತಾಲ್ಲೂಕು ಕೇಂದ್ರಗಳ ಸಾರ್ವಜನಿಕ ಸ್ಥಳ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ 10ರಂತೆ 189 ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಗೃತಿ ಫಲಕ ಹಾಕಲಾಗಿದೆ.

ಯುವಕರನ್ನು ಮತದಾನಕ್ಕೆ ಪ್ರೇರೇಪಿಸಬೇಕೆಂದು ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಸರ್ಕಾರಿ ಕಚೇರಿ, ಆಸ್ಪತ್ರೆಗಳಲ್ಲಿ ‘ನಾನು ಹೆಮ್ಮೆಯ ಮತದಾರ’ ಎಂಬ ಸೆಲ್ಫಿ ಸ್ಥಳಗಳನ್ನು ನಿರ್ಮಿಸಲಾಗಿದೆ. ಕಡಿಮೆ ಮತದಾನ ಆಗಿರುವ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಚುನಾವಣಾ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಮನೆಗೆ ಮನೆಗೆ ತೆರಳಿ ಮೇ 10ರಂದು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಜತೆಗೆ ರಂಗೋಲಿ ಸ್ಪರ್ಧೆ, ಬೈಕ್‌ ರ‍್ಯಾಲಿ, ಜಾಥಾ, ಬೀದಿ ನಾಟಕ ಸೇರಿ ಇತರೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

‘ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದೇ ಸ್ವಯಂ ಇಚ್ಛೆಯಿಂದ ನಿರ್ಧಾರ ಕೈಗೊಂಡು ಮತದಾನ ಮಾಡಬೇಕು. ಯಾರಾದರೂ ಆಮಿಷಕ್ಕೆ ಒಳಪಡಿಸಲು ಪ್ರಯತ್ನಿಸಿದರೆ ಅಂತಹ ವಿಚಾರಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಅಧಿಕಾರಿಗಳ ತಂಡ ಮನವಿ ಮಾಡುತ್ತಿದೆ.

ಚುನಾವಣೆಯಲ್ಲಿ ಅಕ್ರಮ ಕಂಡಲ್ಲಿ ಚಿತ್ರೀಕರಿಸಿ ದೂರು ದಾಖಲಿಸಬಹುದಾದ ‘ಸಿವಿಜಿಲ್‌’ ಆ್ಯಪ್‌ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ. ಇದಕ್ಕಾಗಿ ‘ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು’ ಎಂಬ ಬರಹದ ಫ್ಲೆಕ್ಸ್‌ಗಳನ್ನು ಅಧಿಕವಾಗಿ ಆಳವಡಿಸಲಾಗಿದೆ.

ಕಡಿಮೆ ಮತದಾನವಾದ ಚಿತ್ರದುರ್ಗ ತಾಲ್ಲೂಕಿನ ಜೆ.ಜೆ. ಹಟ್ಟಿ, ನೆಹರೂ ನಗರ, ಆಯಿತೋಳು ಸೇರಿ ಜಿಲ್ಲೆಯ ಇತರೆ ಭಾಗಗಳಿಗೆ ಖುದ್ದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಎಂ.ಎಸ್‌.ದಿವಾಕರ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

‘ವಲಸೆ’ಯಿಂದ ಮತದಾನ ಕುಸಿತ

ಜೀವನ ನಿರ್ವಹಣೆಗೆ ಉದ್ಯೋಗ ಅರಸಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿರುವುದೇ ಮತದಾನ ಪ್ರಮಾಣ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಮತಗಟ್ಟೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡ ಸಂಗ್ರಹಿಸಿದ ಮಾಹಿತಿಯಲ್ಲಿ ಈ ಅಂಶ ತಿಳಿದು ಬಂದಿದೆ.

‘ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ. ಆದರೆ ವಲಸೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಮತದಾನ ಆಗುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಬಹುತೇಕರು ಮತದಾನಕ್ಕೆ ನಿರ್ಲಕ್ಷ್ಯವಹಿಸುವುದು ಕುಸಿತಕ್ಕೆ ಕಾರಣ’ ಎಂದು ಎಂ.ಎಸ್‌.ದಿವಾಕರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.