ADVERTISEMENT

ಸಾಕ್ಷಾತ್‌ ಸಮೀಕ್ಷೆ – ಬಸವನಗುಡಿ ಕ್ಷೇತ್ರ : ‘ಬಿಜೆಪಿ ಭದ್ರಕೋಟೆ’ಗೆ ನುಗ್ಗಲು ರಣತಂತ್ರ

ಬಸವನಗುಡಿ ಕ್ಷೇತ್ರ: ವಶಪಡಿಸಿಕೊಳ್ಳಲು ಕಾಂಗ್ರೆಸ್‌, ಜೆಡಿಎಸ್‌ ಪೈಪೋಟಿ

ಪ್ರಜಾವಾಣಿ ವಿಶೇಷ
Published 2 ಮೇ 2023, 21:56 IST
Last Updated 2 ಮೇ 2023, 21:56 IST
   

ಆದಿತ್ಯ ಕೆ.ಎ.

ಬೆಂಗಳೂರು: ಪ್ರಜ್ಞಾವಂತರು ನೆಲೆಸಿರುವ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಬಸವನಗುಡಿಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹಲವು ಚುನಾವಣೆಗಳಲ್ಲಿ ಕ್ಷೇತ್ರವು ಬಿಜೆಪಿ ಭದ್ರಕೋಟೆ ಎನ್ನುವಂತೆ ಫಲಿತಾಂಶ ಬಂದಿದ್ದು, ಈ ಕೋಟೆ ಛಿದ್ರಗೊಳಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್ ‘ರಣತಂತ್ರ’ ರೂಪಿಸುತ್ತಿವೆ. ಕ್ಷೇತ್ರದಲ್ಲಿ ನಾಲ್ಕನೇ ಜಯದ ಕನಸು ಕಾಣುತ್ತಿರುವ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಅವರಿಗೆ ಉಳಿದವರು ಸವಾಲು ಹಾಕುತ್ತಿದ್ದಾರೆ.

ADVERTISEMENT

ವಿಜ್ಞಾನಿಗಳು, ಸಾಹಿತಿಗಳು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ. ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೂ ಈ ಭಾಗದಲ್ಲಿವೆ. ಬ್ರಾಹ್ಮಣರು ಹಾಗೂ ಹೊರ ಜಿಲ್ಲೆಯಿಂದ ಬಂದ ಒಕ್ಕಲಿಗರೂ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರ ಮನ ಗೆಲ್ಲಲು ಕಣದಲ್ಲಿರುವ 12 ಮಂದಿ ಸಹ ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿಯಿಂದ ರವಿ ಸುಬ್ರಮಣ್ಯ, ಕಾಂಗ್ರೆಸ್‌ನಿಂದ ಯು.ಬಿ.ವೆಂಕಟೇಶ್‌, ಜೆಡಿಎಸ್‌ನಿಂದ ಅರಮನೆ ಶಂಕರ್‌, ಆಮ್‌ ಆದ್ಮಿ ಪಕ್ಷ(ಎಎಪಿ)ದಿಂದ ಸತ್ಯಲಕ್ಷ್ಮಿರಾವ್‌, ಕೆಆರ್‌ಎಸ್‌ನಿಂದ ಎಲ್‌.ಜೀವನ್ ಸ್ಪರ್ಧಿಸಿದ್ಧಾರೆ. ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ.

ರವಿ ಸುಬ್ರಹಣ್ಯ ಅವರು ಸತತ ಮೂರು ಬಾರಿ ಜಯಿಸಿ ಕ್ಷೇತ್ರದ ಆಳ–ಅಗಲವನ್ನು ಅರಿತಿದ್ದಾರೆ. ಟಿಕೆಟ್‌ ನಿರೀಕ್ಷೆಯಲ್ಲಿದ್ದ ಕಟ್ಟೆ ಸತ್ಯನಾರಾಯಣ ಅವರೂ ರವಿ ಜತೆಗೇ ಓಡಾಟ ನಡೆಸುತ್ತಿದ್ಧಾರೆ. ಇದು ‘ಪ್ಲಸ್‌ ಪಾಯಿಂಟ್’ ಆಗಿದೆ. ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅವರು ಇದೇ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆಯಲ್ಲಿದ್ದರು. ಅವರಿಗೆ ಟಿಕೆಟ್‌ ಸಿಗದಿರುವ ಕಾರಣ ಸಕ್ರಿಯವಾಗಿಲ್ಲ. ಇದು ಯಾರಿಗೆ ಲಾಭ ತರುಲಿದೆ ಎಂಬುದನ್ನು ನೋಡಬೇಕಿದೆ.

ಅನಂತಕುಮಾರ್‌ ಅವರಿಂದ ರಾಜಕೀಯವಾಗಿ ಬೆಳೆದವರೇ ಅವರನ್ನು ಮರೆತಿದ್ದಾರೆ ಎಂಬ ಭಾವನಾತ್ಮಕ ವಿಷಯವು ಕ್ಷೇತ್ರದ ಬಿಜೆಪಿ ಮುಖಂಡರಲ್ಲಿಯೇ ಚರ್ಚೆಯಾಗುತ್ತಿದೆ. 

‘ಒಳಚರಂಡಿ ವ್ಯವಸ್ಥೆ, ರಸ್ತೆ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದಿರುವೆ’ ಎಂದು ರವಿ ಸುಬ್ರಹಣ್ಯ ಅವರು ಅಬ್ಬರದ ಪ್ರಚಾರ ನಡೆಸುತ್ತಿದ್ಧಾರೆ. ರವಿ ಪರವಾಗಿ ಅವರ ಸಂಬಂಧಿ ಸಂಸದ ತೇಜಸ್ವಿ ಸೂರ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದು ಲಾಭ ತರುವ ನಿರೀಕ್ಷೆಯಲ್ಲಿ ಬಿಜೆಪಿಯಿದೆ.

2013 ಹಾಗೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿರುವ ಜೆಡಿಎಸ್‌ ಈ ಬಾರಿ ಅದ್ಯಮ ವಿಶ್ವಾಸದಲ್ಲಿದೆ. ಎರಡು ತಿಂಗಳ ಮೊದಲೇ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದ್ದು ಜೆಡಿಎಸ್‌ ಅಭ್ಯರ್ಥಿಗೆ ವರದಾನವಾಗಿದೆ.

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿ ಹೋಗಿದ್ದಾರೆ. ‘ನಿಮ್ಮ ಮನೆಯ ಮಗ ನಾನು. ಇದೇ ಶ್ರೀನಗರದಲ್ಲಿ ಜನಿಸಿದ್ದು, ಕ್ಷೇತ್ರದ ಸಮಸ್ಯೆಗಳ ಅರಿವಿದೆ’ ಎಂದು ಶಂಕರ್ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿಯಿಂದ ಮುನಿಸಿಕೊಂಡಿರುವ ಸ್ಥಳೀಯ ನಾಯಕರನ್ನು ಜೆಡಿಎಸ್‌ಗೆ ಕರೆತಂದಿದ್ದಾರೆ. ಈ ನಡೆ ಜೆಡಿಎಸ್‌ ವೇಗ ಹೆಚ್ಚಿಸುವಂತೆ ಮಾಡಿದೆ ಎಂಬುದು ಮತದಾರರ ಲೆಕ್ಕಾಚಾರ. 

ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌ ಅವರೂ ತಮ್ಮದೇ ‘ಕಾರ್ಯತಂತ್ರ’ ರೂಪಿಸಿಕೊಂಡು ಅಖಾಡ ಸಜ್ಜುಗೊಳಿಸಿದ್ದಾರೆ. ಬಿಜೆಪಿ ಓಟಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿದ್ಧಾರೆ. ಕ್ಷೇತ್ರದಲ್ಲಿ ನಡೆದಿದ್ದ ಸಹಕಾರ ಬ್ಯಾಂಕ್‌ಗಳ ಬಹುಕೋಟಿ ಹಗರಣವನ್ನು ಪ್ರಸ್ತಾಪಿಸುತ್ತಲೇ ಪ್ರಚಾರ ನಡೆಸುತ್ತಿದ್ದಾರೆ. ‘ಠೇವಣಿದಾರರಿಗೆ ನ್ಯಾಯ ಕೊಡಿಸುತ್ತೇನೆ. ಪ್ರಕರಣ ಸಿಬಿಐಗೆ ವಹಿಸಲು ಬದ್ಧ’ ಎಂಬ ಭರವಸೆ ಮಾತನ್ನಾಡುತ್ತಿದ್ದಾರೆ.

ರವಿ ಸುಬ್ರಮಣ್ಯ
ಯು.ಬಿ.ವೆಂಕಟೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.