ADVERTISEMENT

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಮೀಕ್ಷೆ: ಜಾರಕಿಹೊಳಿ–ಜೊಲ್ಲೆ ಯಾರಿಗೆ ಸಕ್ಕರೆ?

ಸಂತೋಷ ಈ.ಚಿನಗುಡಿ
Published 26 ಏಪ್ರಿಲ್ 2024, 22:59 IST
Last Updated 26 ಏಪ್ರಿಲ್ 2024, 22:59 IST
   

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌–ಬಿಜೆಪಿ ಅಭ್ಯರ್ಥಿಗಳಿಬ್ಬರಿಗೂ ಒಳಪೆಟ್ಟಿನ ಆತಂಕ ಹೆಚ್ಚಿದೆ. 

ಬಿಜೆಪಿಯಿಂದ ಎರಡನೇ ಬಾರಿ ಕಣಕ್ಕಿಳಿದಿರುವ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ರಾಮ ಮಂದಿರ ವಿಷಯವನ್ನು ನೆಚ್ಚಿಕೊಂಡಿದ್ದಾರೆ. 6 ತಿಂಗಳು ಮುಂಚೆಯೇ ಪ್ರಚಾರ ಶುರು ಮಾಡಿದ ಅವರು, ಮತ ಬ್ಯಾಂಕ್ ಗಟ್ಟಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ, ಇದೇ ಕ್ಷೇತ್ರದಿಂದ ಒಂದು ಬಾರಿ ಸಂಸದರೂ ಆಗಿದ್ದ ರಮೇಶ ಕತ್ತಿ ಪ್ರಭಾವಿ ರಾಜಕಾರಣಿ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರದ್ದೂ ಈ ಕ್ಷೇತ್ರದಲ್ಲಿ ಪ್ರಭಾವವಿದೆ. ಆದರೆ, ಇವರಿಬ್ಬರೂ ಜೊಲ್ಲೆ ಪರ ಪ್ರಚಾರಕ್ಕೆ ಬಂದಿಲ್ಲ. ಬಿಜೆಪಿಯವರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.

ADVERTISEMENT

ಪ್ರಖರ ಮಾತುಗಳ ಮೂಲಕ ಜಾರಕಿಹೊಳಿ ಕುಟುಂಬ ರಾಜಕಾರಣ ಟೀಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜೊಲ್ಲೆ ಅವರ ಬೆನ್ನಿಗೆ ನಿಂತಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿಗೂ ಒಳಪೆಟ್ಟಿನ ಆತಂಕ ಇಲ್ಲದಿಲ್ಲ. ಎಲ್ಲವೂ ಬೂದಿಮುಚ್ಚಿದ ಕೆಂಡದಂತಿವೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಕಾಶ ಹುಕ್ಕೇರಿ, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರೂ ಒಗ್ಗಟ್ಟು ಪ್ರದರ್ಶಿಸಿದರು. ‘ಶಕ್ತಿ ಪ್ರದರ್ಶನಕ್ಕಿಂತ ಒಗ್ಗಟ್ಟು ಪ್ರದರ್ಶನ ಮುಖ್ಯ’ ಎಂಬ ಸತೀಶ ಜಾರಕಿಹೊಳಿ ಮಾತು ಒಳ‍ಪೆಟ್ಟಿನ ಸಂಶಯವಿದೆ ಎಂಬುದಕ್ಕೆ ಸಾಕ್ಷ್ಯದಂತಿದೆ.

ಎಲ್ಲ ನಾಯಕರೂ ಪ್ರಿಯಾಂಕಾ ಪರ ಅಲ್ಲಲ್ಲಿ ಪ್ರಚಾರ ನಡೆಸಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕಟುವಾಗಿ ಟೀಕಿಸುತ್ತ ಸಾಗಿದ್ದಾರೆ. ‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿದರೆ ಸಚಿವ ಸ್ಥಾನ ನಿಕ್ಕಿ’ ಎಂದು ಡಿ.ಕೆ.ಶಿವಕುಮಾರ್ ಅವರ ಮಾತೂ ಇಲ್ಲಿ ಮುಖ್ಯವಾಗಿದೆ.

ಪಕ್ಷೇತರರಾಗಿ ಕಣಕ್ಕಿಳಿದ ಶಂಭು ಕಲ್ಲೋಳಿಕರ ಕಾಂಗ್ರೆಸ್‌ನ ‘ಅಹಿಂದ’ ಮತಗಳನ್ನು ಕಿತ್ತುಕೊಳ್ಳಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರೇ ತಮಗೆ ಟಿಕೆಟ್‌ ತಪ್ಪಿಸಿದರು ಎಂಬ ಕೋಪ ಕಲ್ಲೋಳಿಕರ ಅವರಿಗಿದೆ. ‘ದಲಿತರು ಗೆಲ್ಲಿಸಿ ತೋರಿಸಿದ್ದೇವೆ. ಈಗ ಸೋಲಿಸಿ ತೋರಿಸುತ್ತೇವೆ’ ಎಂಬ ಕಲ್ಲೋಳಿಕರ ಮಾತನ್ನು ಹಗುರವಾಗಿ ತೆಗೆದುಕೊಳ್ಳಲಾಗದು. ದೊಡ್ಡ ಬೆಂಬಲಿಗರ ಪಡೆ ಹೊಂದಿರುವ ಕಲ್ಲೋಳಿಕರ ಈಗಲೂ ಇಷ್ಟೇ ಮತಗಳನ್ನು ಪಡೆದರೆ ಕಾಂಗ್ರೆಸ್‌ಗೆ ‘ಹೊರೆ’ ಆಗುವುದರಲ್ಲಿ ಸಂದೇಹವಿಲ್ಲ.

ಸಹಕಾರ ಕ್ಷೇತ್ರ ಹಾಗೂ ಬ್ಯಾಂಕ್‌ ಉದ್ಯಮದಲ್ಲಿ ಹೆಸರು ಮಾಡಿರುವ ಅನುಭವಿ ಅಣ್ಣಾಸಾಹೇಬ ಜೊಲ್ಲೆ. ಚುನಾವಣಾ ನೀತಿಯಲ್ಲಿ ‘ಮಾಸ್ಟರ್‌ ಮೈಂಡ್‌’ ಎಂದೇ ಹೆಸರಾದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ (ಅಭ್ಯರ್ಥಿ ತಂದೆ) ಅವರ ಮಧ್ಯೆಯೇ ಈ ಚುನಾವಣೆ ನಡೆದಿದೆ ಎನ್ನುವ ರೀತಿ ಪ್ರಚಾರ ಕಾರ್ಯಕ್ರಮಗಳು ಸ್ವರೂಪ ಬದಲಾಯಿಸಿಕೊಂಡಿವೆ.

ಕ್ಷೇತ್ರದ ಅಭಿವೃದ್ಧಿಗಾಗಿ ಅತಿ ಹೆಚ್ಚು ಅನುದಾನ ಬಳಸಿದ ಕೀರ್ತಿ ನನಗಿದೆ. ಮೋದಿ ಅಲೆಯಲ್ಲಿ ಗೆಲುವುದು ಖಾತ್ರಿಯಾಗಿದೆ. ಮತದಾರರು ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ.
–ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್‌ನ ಹಿರಿಯ ನಾಯಕರ ಬೆಂಬಲ ನನಗಿದೆ. ತಂದೆಯು ಮಾಡಿರುವ ಅಭಿವೃದ್ಧಿ ಕೆಲಸ ಕೈ ಹಿಡಿಯಲಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳ ಮಹತ್ವ ಜನರಿಗೆ ಗೊತ್ತಾಗಿದೆ.
–ಪ್ರಿಯಾಂಕಾ ಜಾರಕಿಹೊಳಿ, ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.