ADVERTISEMENT

ಬೊಮ್ಮನಹಳ್ಳಿ ಕ್ಷೇತ್ರ: ಮೊದಲ ಗೆಲುವಿಗೆ ಕಾಂಗ್ರೆಸ್‌ ಪ್ರಬಲ ಪೈಪೋಟಿ

ಬೊಮ್ಮನಹಳ್ಳಿ ಕ್ಷೇತ್ರ: ಬಿಜೆಪಿ ಮಣಿಸಲು ‘ಒಕ್ಕಲಿಗ’ ಅಸ್ತ್ರ ಪ್ರಯೋಗ

ಚಂದ್ರಹಾಸ ಹಿರೇಮಳಲಿ
Published 5 ಮೇ 2023, 5:11 IST
Last Updated 5 ಮೇ 2023, 5:11 IST
ಸತೀಶ್‌ ರೆಡ್ಡಿ
ಸತೀಶ್‌ ರೆಡ್ಡಿ   

ಬೆಂಗಳೂರು: ಸತತ ಮೂರು ಅವಧಿ ಗೆಲುವು ಪಡೆದು, ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿರುವ ಬಿಜೆಪಿ ಮಣಿಸಲು ‘ಒಕ್ಕಲಿಗ‘ ಅಸ್ತ್ರ ಪ್ರಯೋಗಿಸಿರುವ ಕಾಂಗ್ರೆಸ್‌, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಪ್ರಬಲ ಸ್ಪರ್ಧೆ ಒಡ್ಡಿದೆ.

2008ರಿಂದ ನಡೆದ ಮೂರು ಚುನಾವಣೆಗಳಲ್ಲೂ ಅಭ್ಯರ್ಥಿಗಳನ್ನು ಬದಲಾಯಿಸುತ್ತಲೇ ಬಂದಿರುವ ಕಾಂಗ್ರೆಸ್‌, ಈ ಬಾರಿಯೂ ಹೊಸ ಮುಖಕ್ಕೆ ಟಿಕೆಟ್‌ ನೀಡಿದ್ದರೂ, ಸುಮಾರು 90 ಸಾವಿರದಷ್ಟಿರುವ ಒಕ್ಕಲಿಗ ಮತಗಳನ್ನು ಸೆಳೆಯಲು ಆ ಸಮಾಜದ ಪ್ರಭಾವಿ ಮುಖಂಡ, ಅದೇ ಕ್ಷೇತ್ರದ ಉಮಾಪತಿ ಎಸ್‌. ಗೌಡ ಅವರನ್ನು ಕಣಕ್ಕೆ ಇಳಿಸಿರುವುದು ಪ್ರಬಲ ಪೈಪೋಟಿಗೆ ಕಾರಣವಾಗಿದೆ.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಬೊಮ್ಮನಹಳ್ಳಿ 2008ರಲ್ಲಿ ಹೊಸ ಕ್ಷೇತ್ರವಾಗಿ ಉದಯಿಸಿತ್ತು. ಆ ವರ್ಷ ಬಿಜೆಪಿಯ ಎಂ.ಸತೀಶ್‌ ರೆಡ್ಡಿ ಕಾಂಗ್ರೆಸ್‌ನ ಕುಪೇಂದ್ರ ರೆಡ್ಡಿ ಅವರನ್ನು 13,640 ಮತಗಳ ಅಂತರದಿಂದ ಸೋಲಿಸಿದ್ದರು. 2013ರಲ್ಲಿ ಸಿ.ನಾಗಭೂಷಣ ಅವರನ್ನು 25,852 ಹಾಗೂ 2018ರಲ್ಲಿ ಸುಷ್ಮಾ ರಾಜಗೋಪಾಲ ರೆಡ್ಡಿ ಅವರನ್ನು 47,162 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಹ್ಯಾಟ್ರಿಕ್‌ ಗೆಲುವು ಪಡೆದಿದ್ದರು.

ADVERTISEMENT
ಉಮಾಪತಿ ಗೌಡ

ಪ್ರತಿ ಚುನಾವಣೆಯಲ್ಲೂ ಸೋಲಿನ ಅಂತರ ಹೆಚ್ಚುತ್ತಲೇ ಹೋಗಿದ್ದು, ಕಾಂಗ್ರೆಸ್‌ ನಿದ್ದೆಗೆಡಿಸಿತ್ತು. ಸೋಲಿನ ಸರಪಳಿ ಕಳಚಲು ಹಾಗೂ ಒಮ್ಮೆಯಾದರೂ ಗೆಲುವು ಪಡೆಯಲು ಕಾಂಗ್ರೆಸ್ ಕೊನೆಗೂ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಿದೆ. ಇದೇ ಮೊದಲ ಬಾರಿ ಬಿಜೆಪಿ ಎದುರು ಪ್ರಬಲ ಸ್ಪರ್ಧೆ ಏರ್ಪಟ್ಟಿರುವುದನ್ನು ನೋಡುತ್ತಿದ್ದೇವೆ ಎನ್ನುವುದು ಕ್ಷೇತ್ರದ ಹಲವು ಮತದಾರರ ಅಭಿಪ್ರಾಯ.

ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಉಮಾಪತಿ ಬಾಬು, ಜೆಡಿಎಸ್‌ನಿಂದ ಎನ್‌.ನಾರಾಯಣ ರಾಜು, ಎಎಪಿಯಿಂದ ಸೀತಾರಾಮ್ ಗುಂಡಪ್ಪ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಂದಾ ರೆಡ್ಡಿ, ಉತ್ತಮ ಪ್ರಜಾಕೀಯ ಪಕ್ಷದಿಂದ ಆರ್.ಮಮತಾ ಸೇರಿದಂತೆ 14 ಅಭ್ಯರ್ಥಿಗಳು ಕಣದಲ್ಲಿದ್ದರೂ, ಕಾಂಗ್ರೆಸ್–ಜೆಡಿಎಸ್‌ ಮಧ್ಯೆ ನೇರ ಪೈಪೋಟಿ ಇದೆ.

ಬಿಎಸ್‌ಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಒಂದೇ ಆಗಿರುವುದರಿಂದ ಮತಗಳ ವಿಭಜನೆಯಾಗಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಮಾಡುತ್ತಿದೆ. ’ಜನರು ಹೆಸರಿನ ಜತೆಗೆ ಚಿಹ್ನೆಯನ್ನೂ ನೋಡುತ್ತಾರೆ. ಹಸ್ತದ ಚಿಹ್ನೆ ಎಲ್ಲರಿಗೂ ಗೊತ್ತಿರುವ ಕಾರಣ ಗೊಂದಲವಾಗದು‘ ಎನ್ನುವುದು ಕಾಂಗ್ರೆಸ್‌ ನಂಬಿಕೆ. ಹಾಗೆಯೇ, ಬಿಜೆಪಿಯಿಂದ ಹೊರ ಬಂದು ಜೆಡಿಎಸ್‌ ಸೇರಿರುವ ಬಿಬಿಎಂಪಿ ಸದಸ್ಯ ನಾರಾಯಣ ರಾಜು ಬಿಜೆಪಿ ಮತ ವಿಭಜಿಸದಂತೆ ಬಿಜೆಪಿ ತಂತ್ರಗಾರಿಕೆ ಮಾಡುತ್ತಿದೆ.

ಬಿಜೆಪಿ ಸಾಂಪ್ರದಾಯಿಕ ಮತಗಳನ್ನು ನಂಬಿಕೊಂಡಿದ್ದರೆ, ಕಾಂಗ್ರೆಸ್‌ ಪರಿಶಿಷ್ಟ ಜಾತಿ, ಪಂಗಡಗಳು, ಮುಸ್ಲಿಂ, ಒಕ್ಕಲಿಗ ಹಾಗೂ ಹಿಂದುಳಿದ ವರ್ಗದ ಮತಗಳ ಕ್ರೋಡೀಕರಣಕ್ಕೆ ಕೈ ಹಾಕಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು, ಅವರ ಬೆಂಬಲಿಗರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೂ, ಎರಡೂ ಪಕ್ಷಗಳ ರಾಷ್ಟ್ರೀಯ, ರಾಜ್ಯ ನಾಯಕರು ಕ್ಷೇತ್ರದತ್ತ ಮುಖ ಮಾಡಿಲ್ಲ. ಪ್ರಧಾನಿ ಮೋದಿ ರೋಡ್‌ ಶೋ ನಂತರ ಇನ್ನಷ್ಟು ಲಾಭ ತರಬಹುದು ಎಂಬ ಆಶಯ ಬಿಜೆಪಿ ಕಾರ್ಯಕರ್ತರದ್ದು.

ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಘನತ್ಯಾಜ್ಯ ಸಂಗ್ರಹಗಾರದಿಂದ ಸ್ಥಳೀಯ ಕೆರೆಗಳು ಕಲುಷಿತವಾಗಿವೆ. ಮಳೆ ಬಂದರೆ ಇಡೀ ಕ್ಷೇತ್ರ ಜಲಾವೃತವಾಗುತ್ತದೆ. ರಸ್ತೆಗಳು ಹಾಳಾಗಿವೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ದೊರಕಿಸಲು ಒಮ್ಮೆ ಅವಕಾಶ ಕೊಡಿ ಎನ್ನುವುದು ಕಾಂಗ್ರೆಸ್ ಮನವಿ. ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮುಗಿಸಲು ಇನ್ನೊಂದು ಬಾರಿ ಅವಕಾಶ ಕೊಡಿ, ಎಲ್ಲ ಸಮಸ್ಯೆಗೂ ಪರಿಹಾರ ದೊರಕುತ್ತದೆ ಎನ್ನುವುದು ಬಿಜೆಪಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.