ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸಲು ಮಾಡುವ ಯಾವುದೇ ಷಡ್ಯಂತ್ರ ಯಶಸ್ಸು ಕಾಣುವುದಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಿಳಿಸಿದರು.
ಚನ್ನಪಟ್ಟಣ ನಗರ ಹಾಗೂ ತಾಲ್ಲೂಕಿನ ಕೋಡಂಬಹಳ್ಳಿ ಭಾಗದಲ್ಲಿ ಗುರುವಾರ ತಮ್ಮ ಪತಿ ಎಚ್.ಡಿ. ಕುಮಾರಸ್ವಾಮಿ ಪರ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಜಕಾರಣದಲ್ಲಿ ಇದೆಲ್ಲವೂ ಸಾಮಾನ್ಯ. ಅಂತಿಮವಾಗಿ ಜಯ ನಮಗೆ ಸಿಕ್ಕೆ ಸಿಗುತ್ತದೆ. ಈ ಕ್ಷೇತ್ರದ ಜನರು, ಮುಖಂಡರ ಮೇಲೆ ನಮಗೆ ನಂಬಿಕೆ ಇದೆ. ಎಲ್ಲದಕ್ಕೂ ಮೇ 13 ರಂದು ಉತ್ತರ ಸಿಗಲಿದೆ’ ಎಂದರು.
‘ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ. ಇವೆರಡೂ ನನ್ನ ಹಳೆಯ ಕ್ಷೇತ್ರಗಳು. ಪರಿಚಯ ಇರುವುದರಿಂದ ಪ್ರಚಾರ ಮಾಡುತ್ತಿದ್ದೇನೆ. ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ನಾನು ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಚನ್ನಪಟ್ಟಣ ಕ್ಷೇತ್ರದ ಉಸ್ತುವಾರಿಯನ್ನು ನಮ್ಮ ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆ’ ಎಂದರು.
ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನ್ನನ್ನು ಏನನ್ನೂ ಕೇಳಬೇಡಿ, ಇದನ್ನು ಕುಮಾರಸ್ವಾಮಿ ಅವರು ನೋಡಿಕೊಳ್ಳುತ್ತಾರೆ. ಪಕ್ಷದ ವರಿಷ್ಠರು ಇದರ ತೀರ್ಮಾನ ಮಾಡುತ್ತಾರೆ. ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಮನಗರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿ. ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಅನಿತಾ ಕುಮಾರಸ್ವಾಮಿ ಅವರು ನಗರದಲ್ಲಿ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರ ಸಭೆ ನಡೆಸಿದರು. ನಂತರ ಕೋಡಂಬಹಳ್ಳಿ ಭಾಗದಲ್ಲಿ ಕುಮಾರಸ್ವಾಮಿ ಅವರ ಅಭಿವೃದ್ಧಿ ಬಗೆಗಿನ ಕಿರುಹೊತ್ತಿಗೆ ನೀಡಿ ಮತಯಾಚನೆ ಮಾಡಿದರು. ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ಮುಖಂಡರು ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.