ADVERTISEMENT

ಗುಜರಾತ್‌ ಅಖಾಡದಲ್ಲೊಂದು ಸುತ್ತು| ವಡಗಾವ್‌ ಮೆವಾನಿಗೆ ಹೂವಿನ ಹಾಸಿಗೆಯಲ್ಲ!

ಮಂಜುನಾಥ್ ಹೆಬ್ಬಾರ್‌
Published 3 ಡಿಸೆಂಬರ್ 2022, 19:30 IST
Last Updated 3 ಡಿಸೆಂಬರ್ 2022, 19:30 IST
   

ವಡಗಾವ್‌: ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರಿಗೆ2017ರ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದವರೆಲ್ಲ ಈ ಸಲ ಕತ್ತಿ ಝಳಪಿಸುತ್ತಾ ನಿಂತಿದ್ದಾರೆ. ಇದರಿಂದಾಗಿ, ವಡಗಾವ್‌ ಕ್ಷೇತ್ರದಲ್ಲಿ ಮೆವಾನಿ ಅವರು ಗೆಲುವಿನ ಕುದುರೆಯನ್ನು ಮತ್ತೊಮ್ಮೆ ಏರಲು ಬೆವರು ಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಜುನಾಥ ಹೆಬ್ಬಾರ

ವಡಗಾವ್‌ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರ. ಮೆವಾನಿ ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಜಯ ಗಳಿಸಿದ್ದರು. 2012ರಲ್ಲಿ ಕಾಂಗ್ರೆಸ್‌ನ ಮಣಿಲಾಲ್‌ ವಘೇಲಾ ಗೆದ್ದಿದ್ದರು. ಕಳೆದ ಬಾರಿ ಮೆವಾನಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಸಬರಕಂಠ ಜಿಲ್ಲೆಯ ಐದರ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು.

ಕಳೆದ ಸಲ ಮೆವಾನಿ ಅವರು ಬಿಜೆಪಿಯ ವಿಜಯ ಚಕ್ರವರ್ತಿ ಅವರನ್ನು 20 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್‌ ಜತೆಗೆ ಮುನಿಸಿಕೊಂಡು ಮಣಿಲಾಲ್‌ ವಘೇಲಾ ಅವರು ಈ ವರ್ಷದ ಏಪ್ರಿಲ್‌ನಲ್ಲಿ ಕಮಲ ಪಾಳಯಕ್ಕೆ ಜಿಗಿದರು. ಅವರು ಈಗ ಬಿಜೆಪಿಯ ಅಭ್ಯರ್ಥಿ. ಮೆವಾನಿ ಈ ಸಲ ‘ಕೈ’ ಅಭ್ಯರ್ಥಿ. ಆಮ್‌ ಆದ್ಮಿ ಪಕ್ಷವು ಸಾಮಾಜಿಕ ಕಾರ್ಯಕರ್ತ ದಲ್ಪತ್‌ಭಾಟಿಯಾ ಅವರನ್ನು ಕಣಕ್ಕೆ ಇಳಿಸಿದೆ. ಭಾಟಿಯಾ ಅವರಿಗೆ ಜಿಲ್ಲೆಯಲ್ಲಿ ಉತ್ತಮ ಹೆಸರಿದೆ. ಜತೆಗೆ, ಬಿಎಸ್‌ಪಿ ಹಾಗೂ ಎಐಎಂಐಎಂ ಪಕ್ಷಗಳ ಹುರಿಯಾಳುಗಳು ಕಣದಲ್ಲಿದ್ದಾರೆ. ಇದರಿಂದಾಗಿ, ವಡಗಾವ್‌ ಕಣವು ಮೆವಾನಿ ಅವರಿಗೆ ಹೂವಿನ ಹಾಸಿಗೆಯಲ್ಲ.

ADVERTISEMENT

ಈ ಸಲ ದಲಿತ ಮತಗಳ ವಿಭಜನೆ ದೊಡ್ಡ ಪ್ರಮಾಣದಲ್ಲಿ ಆಗಬಹುದು ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆದಿವೆ. ಚೌಧರಿ ಸಮುದಾಯ ಹಾಗೂ ಬಿಜೆಪಿ ನಡುವಿನ ತಿಕ್ಕಾಟವೂ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಹಲವು ಮತದಾರರು ಅಭಿಪ್ರಾಯಪಡುತ್ತಾರೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಧರಿ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ವಿಫುಲ್‌ ಚೌಧರಿ ಅವರನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಬಂಧಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಚೌಧರಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿಯವರು ಜಿಲ್ಲೆಯಲ್ಲಿ ಗೌರವ ಯಾತ್ರೆ ನಡೆಸಿದ ಸಂದರ್ಭದಲ್ಲೂ ಧರಣಿ ನಡೆಸಿದ್ದರು. ಖುದ್ದು ಮುಖ್ಯಮಂತ್ರಿಯವರೇ ಪ್ರತಿಭಟನಾನಿರತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಅದರ ಬಳಿಕವೂ ಚೌಧರಿ ಸೇನೆಯ ಕಾರ್ಯಕರ್ತರ ಮುನಿಸು ಕಡಿಮೆಯಾಗಿರಲಿಲ್ಲ.

ಕಳೆದ ಐದು ವರ್ಷಗಳಲ್ಲಿ ಮೆವಾನಿ ಅವರನ್ನು ಹಣಿಯಲು ಬಿಜೆಪಿ ಹಲವು ಸಲ ಪ್ರಯತ್ನ ಮಾಡಿದೆ. ‘ನಾನು ಹೂವಲ್ಲ. ಬೆಂಕಿ. ನನ್ನ ಮೇಲೆ ಯಾವ ಕ್ರಮ ಬೇಕಾದರೂ ಕೈಗೊಳ್ಳಿ. ಅದಕ್ಕೆ ಅಂಜುವುದಿಲ್ಲ’ ಎಂದು ಮೆವಾನಿ ಹೇಳಿದ್ದರು. ಬಿಜೆಪಿಯ ಪಗಡೆಯಾಟದ ದಾಳಗಳಿಗೆ ಪ್ರತಿ ದಾಳ ಉರುಳಿಸಿದ್ದಾರೆ. ಮೆವಾನಿ ಪರವಾಗಿ ಕಾಂಗ್ರೆಸ್‌ ಮುಖಂಡ ಕನ್ಹಯ್ಯಾ ಕುಮಾರ್‌ ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ.

ಕೋವಿಡ್‌ ಉತ್ತುಂಗಕ್ಕೆ ಏರಿದ ಸಂದರ್ಭದಲ್ಲಿ, ಜನರಿಗೆ ನೆರವಾಗಿದ್ದಕ್ಕೆ ಮೆವಾನಿ ಕುರಿತು ಹಲವು ಮತದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರು ದೇಣಿಗೆ ಎತ್ತಿ ಆಮ್ಲಜನಕ ಘಟಕ ನಿರ್ಮಿಸಿ ಜನರ ನೆರವಿಗೆ ಧಾವಿಸಿದರು. ‘ಈ ಸಲ ಚುನಾವಣಾ ಖರ್ಚಿಗೂ ದೇಣಿಗೆ ಎತ್ತಿದ್ದಾರೆ. ಇಂತಹ ನಾಯಕನನ್ನು ಮತ್ತೆಲ್ಲೂ ಕಾಣಲಾರಿರಿ. ಅವರು ಕಾಡಿನ ಸಿಂಹ ಇದ್ದಂತೆ. ಬಿಜೆಪಿ ವಿರುದ್ಧ ಹೋರಾಡಲು ಅಂತಹ ನಾಯಕ ವಿಧಾನಸಭೆಯಲ್ಲಿರಬೇಕು’ ಎಂದು ವಡಗಾವ್‌ನ ನಿವಾಸಿ ಅಬ್ದುಲ್‌ ರಜಾಕ್‌ ಹೇಳುತ್ತಾರೆ. ಅದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ ಅಹ್ಮದ್‌ ಖಾನ್‌, ‘ಈ ಸಲ ಮೆವಾನಿ ಅವರಿಗೆ ಸುಲಭದ ತುತ್ತಲ್ಲ. ಯಾರೇ ಗೆದ್ದರೂ ಕೆಲವೇ ಸಾವಿರ ಮತಗಳ ಅಂತರದಿಂದ’ ಎಂದು ಅಭಿಪ್ರಾಯಪಡುತ್ತಾರೆ.

ವಡಗಾವ್‌ನ ಕಾರ್ಮಿಕಲಕ್ಷಣ ಬಾಯಿ, ‘ಕ್ಷೇತ್ರದಲ್ಲಿ ಮೆವಾನಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಅನುದಾನ ನೀಡದೆ ತಾರತಮ್ಯ ಮಾಡಿತು. ದ್ವೇಷದ ರಾಜಕಾರಣದಿಂದ ಕೆಲವು ಕೆಲಸಗಳು ಸ್ಥಗಿತಗೊಂಡವು’ ಎಂದರು.

ಮೆವಾನಿ ಕುಟುಂಬದವರು ಮೆಹಸಾನ ಜಿಲ್ಲೆಯ ಮೆವಾನಿ ಗ್ರಾಮದವರು. ಮೆವಾನಿ ಹುಟ್ಟಿದ್ದು ಬೆಳೆದಿದ್ದು ಅಹಮದಾಬಾದ್‌ನಲ್ಲಿ. ಕಾನೂನು ಹಾಗೂ ಪತ್ರಿಕೋದ್ಯಮ ಡಿಪ್ಲೊಮಾ ಪದವಿ ಪಡೆದಿರುವ ಅವರು ಅಹಮದಾಬಾದ್‌ನ ಪತ್ರಿಕೆಯೊಂದರಲ್ಲಿ ಕೆಲವು ಸಮಯ ಕೆಲಸ ಮಾಡಿದ್ದರು. ಊನಾದಲ್ಲಿ ದಲಿತರ ಮೇಲೆ ಸ್ವಘೋಷಿತ ಗೋರಕ್ಷಕರು ಹಲ್ಲೆ ನಡೆಸಿದ ಬಳಿಕ 2016ರ ಆಗಸ್ಟ್‌ನಲ್ಲಿ ಮೆವಾನಿ ಅವರು ಅಹಮದಾಬಾದ್‌ನಿಂದ ಊನಾದವರೆಗೆ ದಲಿತ ಅಸ್ಮಿತಾ ರ‍್ಯಾಲಿ ನಡೆಸಿದ್ದರು. ಆ ಬಳಿಕ ಅವರು ಗುಜರಾತ್‌ನ ದಲಿತ ನಾಯಕರಾಗಿ ಹೊರ ಹೊಮ್ಮಿದ್ದರು.

ಈ ಕ್ಷೇತ್ರ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದ್ದರೂ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 65 ಸಾವಿರ ಮುಸ್ಲಿಮರು, 45 ಸಾವಿರ ದಲಿತರು, 25 ಸಾವಿರ ಚೌಧರಿ, 20 ಸಾವಿರ ಠಾಕೂರರು, 13 ಸಾವಿರ ದರ್ಬಾರ್‌ ಸಮುದಾಯದವರು ಕ್ಷೇತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.