ADVERTISEMENT

ಗುಜರಾತ್ ಅಖಾಡದಲ್ಲೊಂದು ಸುತ್ತು| ಸಿಎಂ ಭೂಪೇಂದ್ರ ಕ್ಷೇತ್ರದಲ್ಲಿ ಪ್ರತಿಷ್ಠೆ ಪಣ

ಮಂಜುನಾಥ್ ಹೆಬ್ಬಾರ್‌
Published 2 ಡಿಸೆಂಬರ್ 2022, 18:02 IST
Last Updated 2 ಡಿಸೆಂಬರ್ 2022, 18:02 IST
ಭೂಪೇಂದ್ರ ಪಟೇಲ್‌
ಭೂಪೇಂದ್ರ ಪಟೇಲ್‌    

ಘಟ್ಲೋಡಿಯಾ (ಗುಜರಾತ್‌): ಗುಜರಾತ್‌ಗೆ ಕಡಿಮೆ ಅವಧಿಯಲ್ಲೇ ಇಬ್ಬರು ಮುಖ್ಯಮಂತ್ರಿ ಗಳನ್ನು ನೀಡಿದ ಕ್ಷೇತ್ರವಿದು. 2017ರ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆ ಅಂತರದಿಂದ ಗೆಲುವು ತಂದುಕೊಟ್ಟ ಕ್ಷೇತ್ರವೂ ಹೌದು. ಅಂದಹಾಗೆ, ಇದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ತವರು ಕ್ಷೇತ್ರ.

ಮಂಜುನಾಥ ಹೆಬ್ಬಾರ

ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ 2012ರಲ್ಲಿ ಕಾಂಗ್ರೆಸ್‌ 44 ಸಾವಿರ ಹಾಗೂ 2017ರಲ್ಲಿ 57 ಸಾವಿರ ಮತಗಳನ್ನು ಪಡೆದಿತ್ತು.ಕಾಂಗ್ರೆಸ್‌ ಈ ಚುನಾವಣೆಯಲ್ಲಿ ‍ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿದಿದೆ. ರಾಜ್ಯಸಭಾ ಸದಸ್ಯೆ ಅಮಿ ಯಾಜ್ನಿಕ್‌ ಅವರು ಕೈ ಪಾಳಯದ ಅಭ್ಯರ್ಥಿ. ಗುಜರಾತ್‌ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿದ್ದ ಯಾಜ್ನಿಕ್‌ ಅವರು 2018ರ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.

ಗುಜರಾತ್‌ನ ಆರ್ಥಿಕ ರಾಜಧಾನಿ ಅಹಮದಾಬಾದ್‌ನಿಂದ 10 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಹೊಂದಿರುವ ವಾಣಿಜ್ಯ ಹಾಗೂ ವಸತಿ ಪ್ರದೇಶವೆಂದು ಗುರುತಿಸಿಕೊಂಡಿದೆ. ಅಹಮದಾಬಾದ್‌ ಜಿಲ್ಲೆಯ 21 ಕ್ಷೇತ್ರಗಳ ಪೈಕಿ ಇದೂ ಒಂದು. ಕ್ಷೇತ್ರದಲ್ಲಿ 3.74 ಲಕ್ಷ ಮತದಾರರು ಇದ್ದಾರೆ.

ADVERTISEMENT

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರತಿನಿಧಿಸುವ ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ ಈ ಕ್ಷೇತ್ರ.

2008ರಲ್ಲಿ ಕ್ಷೇತ್ರಗಳ ಮರುವಿಂಗಡಣೆ ಬಳಿಕ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 2012ರಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಈ ಕ್ಷೇತ್ರದಿಂದ ಆಯ್ಕೆಯಾದರು. ಅವರ ಗೆಲುವಿನ ಅಂತರ 1.10 ಲಕ್ಷ ಮತಗಳು. ಆನಂದಿಬೆನ್‌ ಪಟೇಲ್‌ ಅವರಿಗೆ ಭೂಪೇಂದ್ರ ಅವರು ನಿಕಟವರ್ತಿ.

2017ರಲ್ಲಿ ಪಟೇಲ್‌ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆ ಎದುರಿಸಿದರು. ಆ ಚುನಾವಣೆಯಲ್ಲಿ ದಾಖಲೆ ಅಂತರದಲ್ಲಿ ಗೆದ್ದರು. ಅವರ ಗೆಲುವಿನ ಅಂತರ 1.17 ಲಕ್ಷ ಮತಗಳು. ಈ ಕ್ಷೇತ್ರದಲ್ಲಿ ಪಾಟೀದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕ್ಷೇತ್ರವು 2015ರ ಪಾಟೀದಾರ ಆಂದೋಲನದ ಕೇಂದ್ರಬಿಂದು ಆಗಿತ್ತು. ಆದರೂ, ಈ ಕ್ಷೇತ್ರದಿಂದ ಬಿಜೆಪಿಯ ಗೆಲುವಿನ ಓಟಕ್ಕೆ ಧಕ್ಕೆ ಆಗಿರಲಿಲ್ಲ. ಪಾಟೀದಾರ್‌ ಆಂದೋಲನವು ಚುನಾವಣಾ ವಿಷಯವೇ ಆಗಿಲ್ಲ. ಅದೊಂದು ಮುಗಿದ ಅಧ್ಯಾಯ ಎಂದು ಜನರು ಹೇಳುತ್ತಾರೆ.ಕ್ಷೇತ್ರದ ಉದ್ದಕ್ಕೂ ಬಿಜೆಪಿ ಬ್ಯಾನರ್‌ಗಳೇ ಎದ್ದು ಕಾಣುತ್ತವೆ. ಉಳಿದ ಪಕ್ಷಗಳು ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿವೆ.

ಕಳೆದ ಎರಡು ಚುನಾವಣೆಗಳಲ್ಲಿ ಕಾಡ್ವಾ ಪಾಟೀದಾರ್ ಸಮುದಾಯವು ಬಿಜೆಪಿಯಿಂದ ದೂರ ಸರಿದಿತ್ತು. ಈ ಸಮುದಾಯವನ್ನು ಮತ್ತೆ ತನ್ನತ್ತ ಸೆಳೆದುಕೊಳ್ಳಲು ಮಹತ್ವದ ಹೆಜ್ಜೆ ಇರಿಸಿದ್ದ ಬಿಜೆಪಿ, ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.ಪಟೇಲ್‌ ಅವರು ತಳಮಟ್ಟದಿಂದ ಹಂತ ಹಂತವಾಗಿ ಬೆಳೆದವರು. ನಗರಸಭೆಯಿಂದ ತಮ್ಮ ರಾಜಕೀಯ ಆರಂಭಿಸಿದವರು. ಅವರು ಅಹಮದಾಬಾದ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ‘ಅವರ ಬಗ್ಗೆ ಕ್ಷೇತ್ರದಲ್ಲಿ ಸದಭಿಪ್ರಾಯ ಇದೆ. ಕಾಂಗ್ರೆಸ್‌ ಹಾಗೂ ಎಎಪಿ ‍ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವುದರಿಂದ ಈ ಸಲ ಗೆಲುವಿನ ಅಂತರ ಕಡಿಮೆಯಾಗಬಹುದು’ ಎನ್ನುತ್ತಾರೆ ಘಟ್ಲೋಡಿಯಾದ ನಿವಾಸಿ ಮನೀಷ್.

‘ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ರಸ್ತೆಗಳಿವೆ. ಎಲ್ಲ ಮೂಲಸೌಕರ್ಯ ವ್ಯವಸ್ಥೆಗಳಿವೆ. ಕುಡಿಯುವ ನೀರು ಹಾಗೂ ಒಳಚರಂಡಿ ಸೌಲಭ್ಯಗಳಿವೆ. 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ.ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಅಭಿವೃದ್ಧಿ ಎದ್ದು ಕಾಣುತ್ತದೆ’ ಎಂದೂ ಅವರು ಹೇಳುತ್ತಾರೆ.

ವ್ಯಾಪಾರಿ ನೀಲೇಶ್‌ ಷಾ,‘ಮುಖ್ಯಮಂತ್ರಿಯವರ ತವರು ಕ್ಷೇತ್ರವಾದರೂ ಇಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ವಿಜಯ್‌ ಪಟೇಲ್‌ ಎಎಪಿಯ ಅಭ್ಯರ್ಥಿ. ಎಎಪಿ ಅಭ್ಯರ್ಥಿ ಹಾಗೂಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಬೆಲೆಗಳು ಯಾವ ರೀತಿ ಗಗನಕ್ಕೆ ಏರಿವೆ ಎಂಬುದನ್ನು ಉದಾಹರಣೆ ಸಹಿತ ಮತದಾರರಿಗೆ ತಿಳಿಸುತ್ತಿದ್ದಾರೆ.

‘ಭೂಪೇಂದ್ರ ಪಟೇಲ್‌ ಮೃದು ಸ್ವಭಾವದವರು. ಆದರೆ, ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಅದ್ಭುತ ಕೆಲಸವನ್ನೇನೂ ಮಾಡಿಲ್ಲ. ಜತೆಗೆ,ಉತ್ತಮ ಮುಖ್ಯಮಂತ್ರಿ ಎಂದು ಹೇಳಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹೇಳಿದ್ದನ್ನು ಅವರು ಪಾಲನೆ ಮಾಡುತ್ತಾರೆ. ಅವರು ರಬ್ಬರ್ ಸ್ಟ್ಯಾಂಪ್‌ ಅಷ್ಟೇ’ ಎಂದು ಎಎಪಿ ಕಾರ್ಯಕರ್ತ ಅಜಯ್‌ ಬಾರೋಟ್‌ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.